ಸಹಜ ಬದುಕಿನತ್ತ ಗಮನ – ಲಾಕ್‌ಡೌನ್‌ಗಳು ಇತಿಹಾಸ ಸೇರಲಿವೆ

ಒಂದೆಡೆ ಕೋವಿಡ್‌ ಕೇಸುಗಳು ಅನಿಯಂತ್ರತವಾಗಿ ಏರುತ್ತಿರುವಂತೆಯೇ, ಇನ್ನೊದೆಡೆ ಕೊರೊನೋತ್ತರ ಬದುಕಿನಲ್ಲಿ ಚೈತನ್ಯವನ್ನು ಇಮ್ಮಡಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಆಗಸ್ಟ 1ರಿಂದ ಕೊರೊನಾ ಲಾಕ್‌ಡೌನ್‌ ನಿರ್ಬಂಧಗಳು ಇನ್ನಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದ್ದು ಥಿಯಟರ್‌ ಹಾಗೂ ಜಿಮ್‌ಗಳ ಕಾರ್ಯಾರಂಭಕ್ಕೆ ಷರತ್ತು ಬದ್ಧ ಅನುಮತಿ ಸಿಗುವ ನಿರೀಕ್ಷೆ ಇದೆ. ಗುಣಮುಖರ ಪ್ರಮಾಣ ಏರುಗತಿಯಲ್ಲಿರುವುದು ಹಾಗೂ ಅದರೊಟ್ಟಿಗೆ ಬದುಕುವುದು ಜನರಿಗೆ ಅಭ್ಯಾಸವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇನ್ನು ರಾಜ್ಯದಲ್ಲಿ, ಶಾಲೆಗಳ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ಬಾರಿ 1ರಿಂದ 10ನೇ ತರಗತಿವರೆಗೆ ಶೇ.30ರಷ್ಟು ಪಠ್ಯಗಳನ್ನು ಕಡಿತ ಮಾಡಿದೆ. ಪರಿಸ್ಥಿತಿ ತಿಳಿಗೊಂಡರೆ ನವೆಂಬರ್‌ ತಿಂಗಳಿಂದ ಶಾಲೆಗಳನ್ನು ಪ್ರಾರಂಭಿಸಲು ಚಿಂತನೆ ನಡೆಸಿದ್ದು, 120 ದಿನಗಳ ಬೋಧನೆಗೆ ಸೀಮಿತಗೊಳಿಸಿ ಪಠ್ಯಕ್ರಮಗಳನ್ನು ರೂಪಿಸಲಾಗಿದೆ. ಮಕ್ಕಳನ್ನು ನಿರಂತರ ಕಲಿಕೆಯಲ್ಲಿ ತೊಡಗಿಸಲು ಆನ್‌ಲೈನ್‌ ಶಿಕ್ಷಣ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ನೀಡಿದ್ದು, ಸರಕಾರಿ ಶಾಲೆ ಮಕ್ಕಳಿಗೆ ದೂರದರ್ಶನ ವಾಹಿನಿಯ ಮೂಲಕ ಪಾಠಪ್ರವಚನ ಬೋಧಿಸಲಾಗುತ್ತಿದೆ.
ಭಾನುವಾರ ದೇಶವನ್ನುದ್ದೇಶಿಸಿ ‘ಮನ್‌ ಕಿ ಬಾತ್‌’ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕೊರೊನಾ ಸೋಂಕಿನೊಂದಿಗಿನ ನಮ್ಮ ಹೋರಾಟದ ಸಕಾರಾತ್ಮಕ ಮುಖಗಳನ್ನು ನೀಡಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಇಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆಗಸ್ಟ್‌ 15ರ ಹೊತ್ತಿಗೆ ದೇಶವನ್ನು ಕೊರೊನಾದಿಂದ ಮುಕ್ತಗೊಳಿಸುವ ಶಪಥವನ್ನು ದೇಶದ ಜನತೆ ಮಾಡಬೇಕು; ಯುವಜನತೆ ದೇಶದ ಕೋವಿಡ್‌ ಯುದ್ಧದ ಮುಂಚೂಣಿಯಲ್ಲಿರಬೇಕು ಎಂದು ಅವರು ಕರೆ ನೀಡಿದ್ದಾರೆ.
ರಾಜ್ಯದಲ್ಲಿ ಕೋವಿಡ್‌ ಸೋಂಕು ಏರುತ್ತಿದೆಯಾದರೂ ಇತರ ಹಲವು ರಾಜ್ಯಗಳಲ್ಲಿ ಅದು ಈಗಾಗಲೇ ತುದಿ ಮುಟ್ಟಿ ಕೆಳಗೆ ಇಳಿದಿದೆ. ನಮ್ಮ ರಾಜ್ಯದ ಕೊರೊನಾ ಗ್ರಾಫ್‌ ಕೂಡ ತೀವ್ರಗತಿಯಲ್ಲಿ ಏರುತ್ತಲೇ ಇದ್ದು; ಸದ್ಯದಲ್ಲೇ ಇಳಿಯುವುದು ನಿಶ್ಚಿತ. ಹಲವು ಬಗೆಯ ಲಾಕ್‌ಡೌನ್‌ಗಳನ್ನು ಪ್ರಯೋಗಿಸಲಾಗಿದೆ; ಜನತೆಯ ಭಾಗಶಃ ಭಾಗವಹಿಸುವಿಕೆಯಿಂದಾಗಿ ಅದು ಮಿಶ್ರಫಲ ನೀಡಿದೆ. ಲಾಕ್‌ಡೌನ್‌ ಒಂದೇ ನೀತಿಯಿಂದ ನಾವು ವೈರಾಣುವನ್ನು ಎದುರಿಸಲು ಸಾಧ್ಯವಿಲ್ಲ ಎಂಬುದು ಮನದಟ್ಟಾಗಿದೆ. ಲಾಕ್‌ಡೌನ್‌ನ ಆರ್ಥಿಕ ಪರಿಣಾಮಗಳು ಭೀಕರವಾಗಿರುತ್ತವೆ ಎಂಬುದನ್ನು ನಾವು ಕಂಡಿದ್ದೇವೆ. ಹೀಗಾಗಿ ಹಂತಹಂತವಾಗಿ ಲಾಕ್‌ಡೌನ್‌ ತೆಗೆಯಲಾಗುತ್ತಿದೆ. ಇನ್ನೇನಿದ್ದರೂ ನಾವು ಈ ವೈರಸ್‌ನೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ. ಬಹುಶಃ ಪರಿಣಾಮಕಾರಿ ಲಸಿಕೆ ಲಭ್ಯವಾಗುವವರೆಗೂ ಈ ಸ್ಥಿತಿ ಮುಂದುವರಿಯಲಿದೆ.
ಲಾಕ್‌ಡೌನ್‌ ತೆಗೆಯುವಿಕೆಯಿಂದ ಸರಕಾರದ ಜವಾಬ್ದಾರಿ ಒಂದು ಮಟ್ಟಿಗೆ ಮುಗಿಯುತ್ತದೆ. ಆದರೆ ಜನಸಾಮಾನ್ಯರ ಹೊಣೆಗಾರಿಕೆ ಅರಂಭವಾಗುತ್ತದೆ. ಸೋಂಕು ಎದುರಿಸಲು ಜನತೆ ವಹಿಸಬೇಕಾದ ಎಚ್ಚರದ ಬಗ್ಗೆ ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುವುದೇ ನಮಗಿರುವ ದಾರಿ. ಜಿಮ್‌- ಥಿಯೇಟರ್‌- ರಂಗಮಂದಿರಗಳು ತೆರೆದರೂ ನಾವು ಮೈ ಮರೆಯುವಂತಿಲ್ಲ. ಅಲ್ಲೂ ಸಾಮಾಜಿಕ ಅಂತರವನ್ನು ಪಾಲಿಸಬೇಕಾಗುತ್ತದೆ. ಶಾಲೆಗಳು ಸದ್ಯಕ್ಕೆ ತೆರೆಯದಿದ್ದರೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಒಂದು ಬಗೆಯ ನಿರಂತರತೆ ಕಾಯ್ದುಕೊಳ್ಳಬೇಕಾಗುತ್ತದೆ. ಸೋಂಕು ಇದೆಯೆಂದು ಪ್ರಕೃತಿ ಮಳೆ ಸುರಿಸುವುದನ್ನು, ನದಿ ಹರಿಯುವುದನ್ನು, ನೆಲ ಬೆಳೆ ಬೆಳೆಯುವುದನ್ನು ನಿಲ್ಲಿಸುವುದಿಲ್ಲ. ಹಾಗೆಯೇ ಮನುಷ್ಯನ ಬದುಕು ಸಾಗಲೇಬೇಕು. ನಿರಂತರ ಭಯದಲ್ಲಿ ಯಾರೂ ಬದುಕಲಾಗುವುದಿಲ್ಲ. ನಮ್ಮ ಭಯ ಆತಂಕಗಳನ್ನೆಲ್ಲ ಕಟ್ಟಿಟ್ಟು ದಿನಚರಿಗೆ ಮರಳಬೇಕು. ಆದರೆ ಹಿಂದೆ ಇದ್ದಿಲ್ಲದ ಹಲವು ಸುರಕ್ಷತಾ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಪಾಲಿಸುವುದನ್ನು ಮರೆಯುವಂತಿಲ್ಲ. ಕೇಂದ್ರ ಸರಕಾರದ ನೆಲೆಯಿಂದ ರಾಜ್ಯ ಸರಕಾರಗಳಿಗೆ, ರಾಜ್ಯ ಸರಕಾರದಿಂದ ಜಿಲ್ಲಾಡಳಿತ ಹಾಗೂ ತಾಲೂಕುಗಳಿಗೆ ಕೋವಿಡ್‌ ಯುದ್ಧ ಈಗ ಬಂದು ನಿಂತಿದೆ. ಇನ್ನು ಮುಂದೆ ಅದು ಪ್ರತಿ ಮನುಷ್ಯನ ವೈಯಕ್ತಿಕ ಯುದ್ಧವಾಗಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top