ಕೃಷಿಭೂಮಿ ಸದ್ಬಳಕೆಯಾಗಲಿ -ಷರತ್ತುಗಳೊಂದಿಗೆ ಸುಧಾರಣೆ ಜಾರಿ ಅವಶ್ಯ

ಕರ್ನಾಟಕ ಭೂಸುಧಾರಣಾ ಕಾಯಿದೆ-1974ನ್ನು ತಿದ್ದುಪಡಿ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು, ಸಂಪುಟ ಸಭೆ ಈ ಕುರಿತು ತೀರ್ಮಾನ ಕೈಗೊಂಡಿದೆ. ಇದರ ಮುಖ್ಯಾಂಶವೆಂದರೆ, ಕೃಷಿಕರಲ್ಲದವರೂ ಇನ್ನು ಮುಂದೆ ಕೃಷಿ ಭೂಮಿ ಖರೀದಿಸಬಹುದು. ಇದುವರೆಗೆ ಕೃಷಿಕ ಕುಟುಂಬದ ಹಿನ್ನೆಲೆ ಹೊಂದಿದವರು ಮಾತ್ರ ಕೃಷಿಭೂಮಿ ಖರೀದಿಸುವ ಅವಕಾಶವಿತ್ತು. ಈಗ ಕೃಷಿಯಲ್ಲಿ ಆಸಕ್ತಿ ಹೊಂದಿರುವ, ಆದರೆ ಕೃಷಿಭೂಮಿ ದಾಖಲೆಗಳನ್ನು ಹೊಂದಿಲ್ಲದವರು ಕೂಡ ಜಮೀನು ಖರೀದಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು ಮತ್ತು ಉದ್ಯಮಿಗಳೂ ಖರೀದಿಸಬಹುದು ಎಂಬುದು ಈ ಕಾಯಿದೆಯ ಅತ್ಯಂತ ಧನಾತ್ಮಕ ಅಂಶ. ಯಾಕೆಂದರೆ, ಕೃಷಿಭೂಮಿ ಖರೀದಿಸಿ ಪ್ರಗತಿಪರ ಕೃಷಿ ಮಾಡಬಲ್ಲ ಸಾಮರ್ಥ್ಯ‌ ಹೊಂದಿದ್ದವರು ಕೂಡ ಈ ಕಾಯಿದೆಯಲ್ಲಿದ್ದ ಕಠಿಣ ಅಂಶಗಳಿಂದಾಗಿ ಅದರಲ್ಲಿ ತೊಡಗಲು ಸಾಧ್ಯವಾಗುತ್ತಿರಲಿಲ್ಲ. ಈಗ ಆ ತಡೆ ನಿವಾರಣೆಯಾಗಿದೆ.
ಇನ್ನೊಂದು ಅಂಶವೆಂದರೆ, ಕೃಷಿ ಭೂಮಿಯನ್ನು ಉದ್ಯಮಗಳು ಬಳಸಿಕೊಂಡು ರಾಜ್ಯದ ಜಿಡಿಪಿಗೆ ಉತ್ತಮ ಕೊಡುಗೆಯನ್ನು ನೀಡಬಹುದಾಗಿದೆ. ಇದುವರೆಗೆ ಇಂಥದೊಂದು ಬಿಗಿ ಕಾನೂನು ಕರ್ನಾಟಕದಲ್ಲಿ ಮಾತ್ರ ಇತ್ತು. ಅದು ರಾಜ್ಯದ ರೈತರ ಹಿತ ಕಾಯಲು ರೂಪಿಸಿದ ಕಾನೂನಾಗಿತ್ತು. ಅಂತೆಯೇ ಇಷ್ಟು ವರ್ಷ ಅದು ನಮ್ಮ ಕೃಷಿ ಜಮೀನನ್ನು ಕಾಪಾಡಿದೆ. ಆದರೆ ಇಂಥ ಕಾಯಿದೆಯಿಲ್ಲದ ನೆರೆಹೊರೆಯ ರಾಜ್ಯಗಳು ಕೃಷಿಯಲ್ಲಿ ದುರ್ಗತಿಯನ್ನೇನೂ ಕಂಡಿಲ್ಲ. ಜೊತೆಗೆ, ಅವು ಕಾಲಕಾಲಕ್ಕೆ ಕೃಷಿ ಭೂಮಿಯನ್ನು ರೂಪಾಂತರಿಸಿ ಉದ್ಯಮಗಳಿಗೆ ನೀಡುತ್ತ ಬಂದಿವೆ. ಹೀಗಾಗಿ ಆಂಧ್ರ, ತೆಲಂಗಾಣ, ತಮಿಳುನಾಡುಗಳನ್ನು ಸಾಕಷ್ಟು ಉದ್ಯಮಗಳು ತಲೆಯೆತ್ತಿ ಅಲ್ಲಿನ ಆರ್ಥಿಕತೆಯನ್ನು ಪೋಷಿಸುತ್ತಿವೆ. ಕರ್ನಾಟಕದಲ್ಲೂ ಇದು ಆಗಬೇಕಿದೆ. ಭೂಸುಧಾರಣಾ ಕಾಯಿದೆಯ ಬಿಗಿಯಿಂದಾಗಿ, ಉದ್ಯಮಿಗಳು ರಾಜ್ಯದಲ್ಲಿ ಜಮೀನು ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಕೊರೊನೋತ್ತರ ಕಾಲದಲ್ಲಿ, ದೊಡ್ಡ ಸಂಖ್ಯೆಯ ಜನತೆಗೆ ಕೆಲಸ ನೀಡಬೇಕಾದ ಉದ್ಯಮ ವಲಯ ಚೇತರಿಸಿಕೊಳ್ಳಬೇಕಾದ ಜರೂರು ಇದೆ. ಅಂಥ ಹೊತ್ತಿನಲ್ಲಿ ಇಂಥದೊಂದು ಕಾಯಿದೆ ತಿದ್ದುಪಡಿ ಮೂಡಿಬಂದಿರುವುದು ಉದ್ಯಮಸ್ನೇಹಿಯೂ ಹೌದು, ಉದ್ಯೋಗಗಳ ಸೃಷ್ಟಿಗೂ ಪೂರಕವಾಗಿದೆ.
ಆದರೆ ಈ ಕಾಯಿದೆಯಲ್ಲಿ ಕೆಲವು ಉಪನಿಯಮಗಳನ್ನು, ಕಠಿಣ ಶರತ್ತುಗಳನ್ನು ಸೇರಿಸಬೇಕಾದ ಅವಶ್ಯಕತೆ ಇದೆ. ರಾಜ್ಯದಲ್ಲಿ 22.94 ಲಕ್ಷ ಕೃಷಿಗೆ ಯೋಗ್ಯವಲ್ಲದ ಜಮೀನು ಹಾಗೂ 22.07 ಲಕ್ಷ ಹೆಕ್ಟೇರ್‌ನಷ್ಟು ಕೃಷಿಯೋಗ್ಯವಾಗಿದ್ದರೂ ಪಾಳುಬಿದ್ದಿರುವ ಜಮೀನು ಇದೆ. ಈ ಜಮೀನುಗಳನ್ನು ಅರ್ಥಪೂರ್ಣವಾಗಿ, ಕೃಷಿ ಅಥವಾ ಔದ್ಯಮಿಕ ಉದ್ದೇಶಕ್ಕಾಗಿ ಮಾತ್ರ ಖರೀದಿಸಲು ಅವಕಾಶ ನೀಡುವ ಕಠಿಣ ನಿಯಮವನ್ನು ಸೇರಿಸಬೇಕಿದೆ. ಯಾವುದೇ ಕಾರಣಕ್ಕೂ ನಗರಗಳ ಹತ್ತಿರದ ಕೃಷಿ ಜಮೀನನ್ನು ಕೊಂಡು ರಿಯಲ್‌ ಎಸ್ಟೇಟ್‌ಗೆ ಬಳಸುವ ಲಾಬಿಗೆ ಅವಕಾಶ ಕೊಡಕೂಡದು. ಈ ರಿಯಾಲ್ಟಿ ದಂಧೆ ರಾಜ್ಯದ ಕೃಷಿ ಬದುಕನ್ನು ಹಾಳುಗೆಡಹುವುದಲ್ಲದೆ, ಅದರಿಂದ ರಾಜ್ಯದ ಖಜಾನೆಗೆ ಹೆಚ್ಚಿನ ಫಾಯಿದೆಯಿಲ್ಲ. ರಾಜ್ಯದ ಹಿತಾಸಕ್ತಿಗೆ ಪೂರಕವಾದ ಉದ್ಯಮಗಳನ್ನು ಗುರುತಿಸಿ ಅವಕಾಶ ನೀಡುವುದು ಈ ಕಾನೂನಿನಡಿ ಸಾಧ್ಯವಾಗಬೇಕು.
ರಾಜ್ಯದಲ್ಲಿ ಬೆಂಗಳೂರು ನಗರವೊಂದೇ ಬೆಳೆಯುವ ಅಸಮತೋಲನವನ್ನು ತಡೆಯಲು ಈ ಕಾನೂನು ನೆರವಾಗಬಹುದು. ಎರಡನೇ ಹಾಗೂ ಮೂರನೇ ಹಂತದ ನಗರಗಳು ಬೆಳೆಯಬೇಕು, ಔದ್ಯಮಿಕ ಚಟುವಟಿಕೆ ಇಲ್ಲಿ ವಿಸ್ತಾರವಾಗಬೇಕು. ಆಗ ವಿಕೇಂದ್ರೀಕರಣವೂ ಸಾಧ್ಯ. ಜಮೀನಿನ ಅರ್ಥಪೂರ್ಣ ಬಳಕೆಯೂ ಸಾಧ್ಯ. ರಾಜಧಾನಿಯ ದಟ್ಟಣೆ ಕೂಡ ಕಡಿಮೆಯಾಗುತ್ತದೆ. ದೊಡ್ಡ ದೊಡ್ಡ ಉದ್ಯಮಿಗಳು ಈ ಕಾನೂನಿನ ಅಡಿ ಸಾವಿರಾರು ಜಮೀನು ಎಕರೆ ಕೊಳ್ಳಬಹುದು ಎಂಬ ಆತಂಕಕ್ಕೆ ಕಾರಣವಿಲ್ಲ. ಯಾಕೆಂದರೆ ಈ ತಿದ್ದುಪಡಿ 108 ಎಕರೆಗಿಂತ ಅಧಿಕ ಜಮೀನು ಖರೀದಿಸಲು ಅವಕಾಶ ನೀಡುವುದಿಲ್ಲ. ಇಂಥ ಕಠಿಣ ಷರತ್ತುಗಳ ಮೂಲಕ ಈ ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡಿದರೆ ಅದು ಕ್ರಾಂತಿಕಾರಿ ಎನಿಸಲಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top