ಈ ಕೊಚ್ಚೆಗಳ ನಡುವೆ ಅಚ್ಛೇ ದಿನ್ ಬರೋದಾದರೂ ಹೇಗೆ?

ಸಂಜೆ ಅಧಿಕಾರ ವಹಿಸಿಕೊಂಡ ತಹಶೀಲ್ದಾರರೊಬ್ಬರು ಮರುದಿನ ಬೆಳಗ್ಗೆ ಮರುವರ್ಗಾವಣೆ ಆದೇಶ ಪಡೆದ ಉದಾಹರಣೆಯನ್ನು ಎಲ್ಲಾದರೂ ಕೇಳಿದ್ದೀರಾ? ಯಲ್ಲಾಪುರದ ತಾಲೂಕು ಕಚೇರಿ ಅಂಥ ಅಪರೂಪದ ಬೆಳವಣಿಗೆಗೆ ಸಾಕ್ಷಿಯಾಗಿದ್ದನ್ನು ಕಂಡಾಗ ಮನಸ್ಸಿನಲ್ಲಿ ಸಹಜವಾಗಿ ಇಂಥ ಪ್ರಶ್ನೆ ಮೂಡಿತು!

 6a00d8341c2cc953ef017eea56e726970d

`ಅಚ್ಛೇ ದಿನ್’ ಬರಬೇಕು ಅನ್ನುವುದು ಎಲ್ಲರ ಬಯಕೆ. ಅದರಲ್ಲಿ ದೂಸ್ರಾ ಮಾತೇ ಇಲ್ಲ. ದೂರದ ದಿಲ್ಲಿಯಿಂದ ಹಳ್ಳಿ ಮೂಲೆಯವರೆಗೆ ಪ್ರತಿ ಪ್ರಜೆಯೂ ಅಂಥ ಕನಸು ಕಾಣುತ್ತಾನೆ. ಒಳ್ಳೆಯ ನಾಳೆಗಳಿಗಾಗಿ ಆಕಾಶ ನೋಡುತ್ತ ದಿನ ದೂಡುತ್ತಾನೆ. ಆದರೆ ಹಾಗೆ ಅಂದುಕೊಂಡ ಮಾತ್ರಕ್ಕೆ ಆ ದಿನಗಳು ಅಷ್ಟು ಸುಲಭದಲ್ಲಿ ಬರಲು ಹೇಗೆ ಸಾಧ್ಯ ಹೇಳಿ. ಅಚ್ಛೇ ದಿನ್ ಬರೋದಕ್ಕೆ ಇನ್ನೂ ಬಹಳ ಕಾಲ ಹಿಡಿಯುತ್ತದೆ. ಹೆಜ್ಜೆ ಹೆಜ್ಜೆಗೂ ಕಾಡುವ ವಿಘ್ನಗಳನ್ನೆಲ್ಲ ಬದಿಗೆ ಸರಿಸಿಕೊಂಡು ನಮ್ಮ ಮನೆ ಹೊಸ್ತಿಲವರೆಗೆ ಅಚ್ಛೇ ದಿನ ಬರುವುದಕ್ಕೆ ನಿಧಾನ ಆಗೇಆಗುತ್ತದೆ.

ಯಾಕೆ ಅಂತ ಹೇಳ್ತೀನಿ ಕೇಳಿ. ಆಗ ನಾನು ಹೇಳಿದ ಮಾತು ನಿಮಗೆ ಮನವರಿಕೆ ಆಗದೇ ಹೋದರೆ ಹೇಳಿ. ಮೊನ್ನೆ ಇತ್ಲಾಗೆ ಯಾವುದೋ ಕೆಲಸದ ನಿಮಿತ್ತ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತಹಶೀಲ್ದಾರ ಕಚೇರಿಗೆ ಹೋಗಿದ್ದೆ. ಅಲ್ಲಿ ಕಂಡ ಅವಸ್ಥೆ, ಅಧ್ವಾನಗಳನ್ನೆಲ್ಲ ನೀವು ಕಣ್ಣಾರೆ ನೋಡಿದರೆ ಈ ಜಮಾನಾದಲ್ಲಿ ಎಂದೂ ಅಚ್ಛೇ ದಿನ ಬರುವುದೇ ಇಲ್ಲ ಅಂದುಬಿಡುತ್ತೀರಿ. ಏಕೆಂದರೆ ನಮ್ಮ ಸರ್ಕಾರಿ ವ್ಯವಸ್ಥೆಯೇ ಹಾಗಿದೆ.

ನೀವೇ ಕೇಳಿರುತ್ತೀರಿ, ದೆಹಲಿಯಲ್ಲಿ ಸಚಿವಾಲಯದ ಕಚೇರಿಗಳು ಬೆಳಗ್ಗೆ ಒಂಬತ್ತೂವರೆಯಿಂದ ಸಂಜೆ ಏಳರವರೆಗೆ ಕೆಲಸ ಮಾಡುವ ಜಾಯಮಾನಕ್ಕೆ ಒಗ್ಗಿಕೊಂಡು ಬರೋಬ್ಬರಿ ಐವತ್ತು ದಿನಗಳಾದವು. ಪ್ರಧಾನಿಯಿಂದ ಹಿಡಿದು ಮಂತ್ರಿಗಳ ಕಚೇರಿ ಜವಾನನವರೆಗೆ ಎಲ್ಲರಿಗೂ ಒಂದೇ ನಿಯಮ. ಮಂತ್ರಿಗಳು ಬೆಳಗ್ಗೆ ಒಂಬತ್ತಕ್ಕೆ ಕಚೇರಿ ಕೆಲಸ ಶುರುಮಾಡುವಂತೆ ನೋಡಿಕೊಳ್ಳಲು ಪ್ರಧಾನಿ ತಮ್ಮ ಸಂಪುಟದ ಓರ್ವ ಹಿರಿಯ ಮಂತ್ರಿಯನ್ನೇ ನೇಮಿಸಿದರು. ಹಳೆಯ ಅಭ್ಯಾಸದಂತೆ ಅರ್ಧ ಗಂಟೆ ತಡವಾಗಿ ಬಂದ ಕ್ಲಾಸ್‍ವನ್ ಅಧಿಕಾರಿಯಿಂದ ಹಿಡಿದು ಎಲ್ಲರಿಗೂ ಒಂದು ದಿನದ ರಜಾ ಕಟ್ ಮಾಡಿ ಜುಲ್ಮಾನೆ ವಿಧಿಸಿದ್ದನ್ನು ನೋಡಿದ್ದೀರಿ. ಅದೇ ಕೊನೆ, ಮತ್ತೆ ಕಚೇರಿ ಸಮಯಪಾಲನೆ ವಿಚಾರದಲ್ಲಿ ಯಾರೂ ಕಮಕ್‍ಕಿಮಕ್ ಅಂದಿದ್ದನ್ನು ಕೇಳಿಲ್ಲ. ಅದೇ ಗುಂಗಿನಲ್ಲಿ ತಾಲೂಕು ಕಚೇರಿ ಮೆಟ್ಟಿಲು ಹತ್ತಿದಾಗ ಆದ ಅನುಭವ ಇದೆಯಲ್ಲ, ನಿಜಕ್ಕೂ ಅದು ಹತಾಶೆ ತರುವಂಥದ್ದು.

ನಿಯಮ ಪ್ರಕಾರ ಒಂಬತ್ತು ಗಂಟೆಗೆ ಕಚೇರಿ ಕೆಲಸ ಶುರುವಾಗಬೇಕು. ಆದರೆ ಹನ್ನೊಂದು ಗಂಟೆಗೆ ಹೋದರೂ ಯಲ್ಲಾಪುರದ ತಾಲೂಕು ಕಚೇರಿಯಲ್ಲಿ ಎದುರಾದದ್ದು ಖಾಲಿ ಟೇಬಲ್ಲು, ಕುರ್ಚಿಗಳೇ. ಇಲ್ಲಿ ಕುಳಿತುಕೊಳ್ಳಬೇಕಾದವರೆಲ್ಲ ಎಲ್ಲಿ ಅಂತ ಕೇಳಿದರೆ, ಪ್ಯೂನ್ ಇಲ್ಲ ಸ್ವಾಮಿ, ಅದಕ್ಕಾಗಿ ಸಾಹೇಬರಿಗೆ ಚಹಾ ತರಲು ಸ್ವತಃ ಕ್ಲರ್ಕ್ ಹೊರಗಡೆ ಹೋಗಿದ್ದಾರೆ ಅನ್ನುವ ವಿವರಣೆ ಸಿಕ್ಕಿತು. ಯಾವ ಸಾಹೇಬರಿಗೆ ಅಂತ ಕೇಳಿದರೆ ಆತನಿಗೆ ಹೇಳಲು ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ಬಾಗಿಲಿನಲ್ಲಿ ಹಳ್ಳಿಯ ಯಜಮಾನರೊಬ್ಬರು ಮುಖ ಇಳಿಬಿಟ್ಟುಕೊಂಡು ನಿಂತದ್ದು ಕಾಣಿಸಿತು. ಅವರು ಅನುಭವಿಸುತ್ತಿರುವ ಸಂಕಟ ಅವರ ಮುಖದಲ್ಲೇ ಎದ್ದು ಕಾಣಿಸುತ್ತಿತ್ತು. ಯಾರಿಗೆ ಕಾಯುತ್ತಿದ್ದೀರಿ ಅಂತ ವಿಚಾರಿಸಿದೆ. “ನೀವು ಒಳಗಡೆ ಹೋಗಿ ಕೇಳಿದಿರಲ್ಲ ಅದೇ ಸಾಹೇಬರ ಬಳಿ ನನ್ನದೂ ಒಂದು ಕೆಲಸ ಇತ್ತು. ಅದಕ್ಕಾಗಿ ಕಳೆದ ಒಂದೂವರೆ ತಿಂಗಳಿಂದಲೂ ತಾಲೂಕು ಕಚೇರಿಗೆ ಅಲೆಯುತ್ತಿz್ದÉೀನೆ” ಎಂದರು. ವಾರಕ್ಕೊಮ್ಮೆ ಇಲ್ಲಿಗೆ ಬರುವುದು, ಬರಿಗೈಲಿ ಹೋಗುವುದೇ ಆಗಿದೆ ಅಂತ ಹೇಳುತ್ತ ಕೈಕೈ ಹಿಸುಕಿಕೊಂಡರು. ಸೆಕೆಂಡ್ ಡಿವಿಜನ್ ಕ್ಲರ್ಕು ಬಡರೈತನ ಪಾಲಿಗೆ ದೊಡ್ಡ ಸಾಹೇಬ! ಏನು ಕೆಲಸ ಆಗಬೇಕಿತ್ತು ಅಂತ ಕೇಳಿದೆ. “ಸ್ವಾಮಿ, ನನ್ನ ಜಮೀನಿಗೆ ಸಂಬಂಧಿಸಿದ ಒಂದು ಹಾತ್ ನಕಾಶೆ ಬೇಕಿತ್ತು” ಅಂದರು. ಕ್ಲರ್ಕ್ ಮನಸ್ಸು ಮಾಡಿದರೆ ಅದು ಅಬ್ಬಬ್ಬಾ ಅಂದರೆ ಹತ್ತು ನಿಮಿಷದ ಕೆಲಸ. ಆದರೆ ಒಂದೂವರೆ ತಿಂಗಳು ಅಲೆದರೂ ಆ ಕೆಲಸ ಆಗಿರಲಿಲ್ಲ.

ಆಗ ತಾಲೂಕು ಕಚೇರಿ ವರಾಂಡದಲ್ಲಿ ಶತಪಥ ಹಾಕುತ್ತಿದ್ದ ಒಬ್ಬೊಬ್ಬರನ್ನೇ ಮಾತನಾಡಿಸಬೇಕೆಂಬ ಕುತೂಹಲ ಮೂಡಿತು. ಆ ಪೈಕಿ ಒಬ್ಬ ಬಡ ಆಸಾಮಿ ಹೇಳಿಕೊಂಡ ಕಣ್ಣೀರಿನ ಕಥೆ ಕರುಳು ಹಿಂಡುವಂತಿತ್ತು. ನೀವು ಯಾರಿಗೆ ಕಾಯುತ್ತಿದ್ದೀರಿ ಅಂತ ಕೇಳಿದೆ. ಅದಕ್ಕೆ ಅವರು ಕೊಟ್ಟ ವಿವರಣೆ ಹೀಗಿತ್ತು: “ಸ್ವಾಮಿ ನಮ್ಮ ಜಮೀನು ಪಾಲಾಗಿ ಹದಿನೈದು ವರ್ಷಗಳಾದವು. ಅಣ್ಣತಮ್ಮಂದಿರಲ್ಲಿ ತಕರಾರಿದ್ದ ಕಾರಣ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿತು. ಆರು ವರ್ಷದ ಹಿಂದೆ ಹೈಕೋರ್ಟ್‍ನಲ್ಲಿ ವ್ಯಾಜ್ಯ ತೀರ್ಮಾನವಾಗಿ ಖಾತೆ ಎಂಟ್ರಿ ಮಾಡಿಕೊಡಲು ಸ್ಥಳೀಯಾಡಳಿತಕ್ಕೆ ಆದೇಶ ಮಾಡಲಾಗಿದೆ. ಕೋರ್ಟ್ ಆದೇಶದಂತೆ ನನ್ನ ಪಾಲಿನ ಜಮೀನನ್ನು ನನ್ನ ಹೆಸರಿಗೆ ನೋಂದಣಿ ಮಾಡಬೇಕು. ಅದಕ್ಕಾಗಿ ಆರು ವರ್ಷದಿಂದ ಇಲ್ಲಿಗೆ ಚಪ್ಪಲಿ ಸವೆಸುತ್ತಿz್ದÉೀನೆ. ಕಾನೂನು ಗೊತ್ತಿಲ್ಲ, ಕಾಗದಪತ್ರ ಓದಲು ಬರುವುದಿಲ್ಲ. ಪ್ರತಿ ಸಲ ಇಲ್ಲಿಗೆ ಬಂದಾಗಲೂ ಅವರಿಗಿಷ್ಟು ಕೊಡಿ, ಇವರಿಗಿಷ್ಟು ಕೊಡಿ ನಿಮ್ಮ ಕೆಲಸ ಮಾಡಿಕೊಡುತ್ತೇವೆ ಅಂತ ಮಾಮೂಲಿ ಕೇಳುತ್ತಾರೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ” ಎಂದು ಹೇಳುತ್ತ ಕಣ್ಣಂಚನ್ನು ಒರೆಸಿಕೊಂಡರು. ಹೇಳಿಕೇಳಿ ಆ ದಿನ ಶನಿವಾರ ಬೇರೆ. ಅಪರಾಹ್ನ ಒಂದೂವರೆ ಹೊಡೆದರೆ ಕಚೇರಿ ಕಾಂಪೌಂಡಿನಲ್ಲಿ ಒಬ್ಬನೇ ಒಬ್ಬ ನೌಕರ ಕೈಗೆ ಸಿಗುವುದಿಲ್ಲ. ಅಂಥದ್ದರಲ್ಲಿ ತಾಲೂಕು ಕಚೇರಿಯಲ್ಲಿ ಬೆಳಗಿನಿಂದಲೇ ಕರೆಂಟಿರಲಿಲ್ಲ. ಹೀಗಾಗಿ ಮಧ್ಯಾಹ್ನ ಹನ್ನೆರಡು ಹೊಡೆಯುವ ಹೊತ್ತಿಗೆ ತಾಲೂಕು ಆಫೀಸಿನಲ್ಲಿ ಜನಜಂಗುಳಿ ಗಿಜಿಗಿಜಿ. ಆದರೆ ಎಲ್ಲರಿಗೂ ಸಿಗುತ್ತಿದ್ದ ಸಿದ್ಧ ಉತ್ತರ ಒಂದೇ- ಕರೆಂಟಿಲ್ಲ ಸೋಮವಾರ ಬನ್ನಿ ಎಂದು. ಹೀಗಾಗಿ ಒಂದು ಪುಟ ಜೆರಾಕ್ಸ್ ಬೇಕಾದರೂ ಕಡತ ಶೇಖರಣೆ ರೂಮಿನ ಗುಮಾಸ್ತನಿಗೆ ದಮ್ಮಯ್ಯ ಹೇಳಿ ಜತೆಗೆ ಕರೆದುಕೊಂಡು ಮೂರು ಕಿಲೋಮೀಟರು ದೂರದಲ್ಲಿ ಜನರೇಟರ್ ಸೌಕರ್ಯವುಳ್ಳ ಏಕೈಕ ಜೆರಾಕ್ಸ್ ಅಂಗಡಿಗೆ ಹೋಗಬೇಕು. ಅದೂ ವಾಪಾಸ್ ಬರುವಾಗ ಆತನ ಕೈಲಿ ಕನಿಷ್ಠ ಇಪ್ಪತ್ತೈದು ರೂಪಾಯಿ ಇಡುವ ಷರತ್ತಿಗೆ ಒಪ್ಪಿದರೆ ಮಾತ್ರ! ಒಂದು ತಾಲೂಕು ಕಚೇರಿಯಲ್ಲಿ ಕನಿಷ್ಠ ಒಂದು ಜೆರಾಕ್ಸ್ ಮಷಿನ್‍ಗೆ ಬೇಕಾಗುವಷ್ಟು ಬ್ಯಾಟರಿ ಬ್ಯಾಕಪ್, ಜನರೇಟರ್ ವ್ಯವಸ್ಥೆ ಇಟ್ಟುಕೊಳ್ಳಲಾರದಷ್ಟು ದಾರಿದ್ರೃ ಈ ರಾಜ್ಯಕ್ಕೆ ಬಂದಿದೆಯೇ?

ಹಾಗೇ ನೋಡುತ್ತ ನಿಂತಿದ್ದೆ. ಸಾರ್ವಜನಿಕರು ಮರಣಪ್ರಮಾಣಪತ್ರ ಕೇಳಲಿ, ಜನನ ಪ್ರಮಾಣಪತ್ರ ಕೇಳಲಿ, ಪಹಣಿಪತ್ರ ಕೇಳಲಿ ಮತ್ತೊಂದನ್ನ ಕೇಳಲಿ ಎಲ್ಲದಕ್ಕೂ ಒಂದೇ ಉತ್ತರ, ಅರ್ಜಿ ಬರೆದು ಆ ಟೇಬಲ್ ಮೇಲಿರುವ ಟ್ರೇನಲ್ಲಿ ಹಾಕಿ ಹೊರಡಿ. ಮುಂದಿನವಾರ ಬಂದು ಕೇಳಿದ ದಾಖಲೆ ತೆಗೆದುಕೊಂಡು ಹೋಗಿ ಅನ್ನುತ್ತಿದ್ದರು. ಪಾಪ! `ಅರ್ಜಿ ಬರೆದುಕೊಡಿ’ ಎನ್ನುತ್ತಿದ್ದಂತೆ ಓದು ಬರಹ ಬಾರದವರು ಆಕಾಶ ನೋಡುತ್ತಿದ್ದರು. ಬರಿಗೈಲಿ ಬಂದರೆ ಮುಂದಿನವಾರವೂ ಆ ಕೆಲಸ ಆಗುವುದಿಲ್ಲ ಎಂಬುದು ಅವರಿಗೆ ಗೊತ್ತು. ಹಳ್ಳಿ ಮೂಲೆಯಿಂದ ಯಾವನೇ ಒಬ್ಬ ಕನಿಷ್ಠ ಮೂರು ಕಿಲೋಮೀಟರು ಕಾಲ್ನಡಿಗೆಯಲ್ಲೇ ಬಂದು, ಎಷ್ಟೋ ಹೊತ್ತಿಗೆ ಬರುವ ಡಕೋಟ ಬಸ್ಸಿನಲ್ಲಿ ಜೋತುಬಿದ್ದು ತಾಲೂಕು ಕೇಂದ್ರ ತಲುಪಬೇಕು. ಅಂಥದ್ದರಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ನೂರೆಂಟು ಬಾರಿ ಅಲೆದಾಡಬೇಕು ಅಂದರೆ ಅದು ಯಾವ ನ್ಯಾಯ?

ಇದನ್ನೆಲ್ಲ ನೋಡುತ್ತಿದ್ದಾಗ ನನಗೆ ಖುದ್ದಾಗಿ ತಹಶೀಲ್ದಾರರನ್ನೇ ಭೇಟಿಮಾಡೋಣ ಅನ್ನಿಸಿತು. ಅವರ ರೂಮಿಗೆ ಹೋದರೆ ಅಲ್ಲಿ ತಹಶೀಲ್ದಾರರೇ ಇರಲಿಲ್ಲ. “ಇಲ್ಲಿಯವರೆಗೆ ಇದ್ದ ತಹಶೀಲ್ದಾರರು ನಿನ್ನೆ ನಿವೃತ್ತಿ ಹೊಂದಿದರು. ಅವರ ಜಾಗಕ್ಕೆ ವೆಂಕಟ್ರಮಣ ಶೆಟ್ಟಿ ಎಂಬುವವರು ವರ್ಗವಾಗಿ, ನಿನ್ನೆ ಸಂಜೆ ಮಂಗಳೂರಿನಿಂದ ಇಲ್ಲಿಗೆ ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಶೆಟ್ಟಿಯವರನ್ನು ಮತ್ತೆ ಮಂಗಳೂರಿಗೇ ವರ್ಗಾವಣೆ ಮಾಡಿರುವ ಮರುಆದೇಶ ಬಂದಿದೆ” ಎಂದು ಅಲ್ಲಿದ್ದವರೊಬ್ಬರು ಹೇಳಿದರು. ಇಷ್ಟು ದಿನ ಅವರು ಮಂಗಳೂರಲ್ಲಿದ್ದರು, ಅವರ ನಿವೃತ್ತಿಗೆ ಇನ್ನು ಆರು ತಿಂಗಳು ಮಾತ್ರ ಬಾಕಿಯಿದೆ ಎಂಬ ವಿವರಣೆಯನ್ನೂ ಆ ವ್ಯಕ್ತಿಯೇ ನೀಡಿದರು. ಶೆಟ್ಟಿಯವರು ಪ್ರಾಮಾಣಿಕ ಅಧಿಕಾರಿ. ಅದೇ ಅವರ ದೌರ್ಬಲ್ಯ. ಮರುವರ್ಗಾವಣೆಗೆ ಅದುವೇ ಮುಖ್ಯ ಕಾರಣ. ಶೆಟ್ಟರು ಇಲ್ಲಿದ್ದರೆ ಅಧಿಕಾರದಲ್ಲಿರುವವರಿಗೆ ಏನೂ ಗಿಟ್ಟುವುದಿಲ್ಲ ಅನ್ನುವ ಕಾರಣಕ್ಕೆ ರಾತ್ರೋರಾತ್ರಿ ಮರುವರ್ಗಾವಣೆ ಆದೇಶ ಬಂದಿದೆ ಅಂತ ತಾಲೂಕು ಕಚೇರಿಯ ಪಡಸಾಲೆಯಲ್ಲಿ ಬೇರೆಯವರು ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡೆ. ಇದನ್ನೆಲ್ಲ ಯಾರಾದರೂ ಒಬ್ಬರು ತಡೆಯುವುದು ಬೇಡವೇ?

ಯಲ್ಲಾಪುರ ತಾಲೂಕು ಕಚೇರಿ ಕಟ್ಟಡ ಕಟ್ಟಿ ಹೆಚ್ಚೆಂದರೆ ಹದಿನೈದು ವರ್ಷ ಆಗಿರಬಹುದು. ನೋಡೋದಕ್ಕೆ ದೊಡ್ಡ ಇಮಾರತ್ತು. ಆದರೇನು ಬಂತು, ಆ ಕಟ್ಟಡದ ಕಾಲಂ ಬೀಮಿನ ಉದ್ದಕ್ಕೂ ಒಂದು ಇಂಚು ಅಗಲದ ಸೀಳುಬಿಟ್ಟಿದೆ. ಉದ್ಘಾಟನೆಯ ಬಳಿಕ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಆ ಕಟ್ಟಡಕ್ಕೆ ಸುಣ್ಣಬಣ್ಣ ಕಾಣುವ ಭಾಗ್ಯ ಕೂಡಿಬಂದಿಲ್ಲ. ಹೀಗಾಗಿ ಅದೀಗ ಥೇಟ್ ಬಹಮನಿ ಸುಲ್ತಾನರ ಕಾಲದ ಬಂಗಲೆಯಂತಾಗುತ್ತಿದೆ. ವರ್ಷಕ್ಕೆ ಆರು ತಿಂಗಳು ಧಾರಾಕಾರ ಮಳೆ ಸುರಿಯುವ ಮಲೆನಾಡಿನಲ್ಲಿ ಕಾಂಕ್ರೀಟ್ ಕಟ್ಟಡ ಕಟ್ಟುವಾಗ ಅದರ ನೆತ್ತಿಯ ಮೇಲೆ ಹಂಚೋ, ತಗಡೋ ಬಳಸಿ ಛಾವಣಿ ಹೊದಿಸುವ ಕನಿಷ್ಠ ಕಾಳಜಿಯಾದರೂ ಆಳುಗರಿಗೆ ಬೇಡವೇ? ಮಳೆನೀರು ಇಂಗಿ ಎಲ್ಲೆಂದರಲ್ಲಿ ಪಾಚಿಗಟ್ಟಿದೆ. ಪರಿಣಾಮ ಕೋಟ್ಯಂತರ ರೂಪಾಯಿ ತೆರಿಗೆ ಹಣ ಸುರಿದು ಕಟ್ಟಿದ ಆ ಕಟ್ಟಡದ ಆಯಸ್ಸು ಹೆಚ್ಚೆಂದರೆ ಇನ್ನು ಹತ್ತು ವರ್ಷ!

ಇದು ಕೇವಲ ಒಂದು ತಾಲೂಕಿನ ಕತೆ ಅಂದುಕೊಳ್ಳುವುದು ಬೇಡ. ವಿಧಾನಸೌಧದಲ್ಲಿನ ವಾತಾವರಣದ ಪ್ರತಿರೂಪ ಕೆಳಹಂತಗಳಲ್ಲಿ ಕಾಣಿಸುತ್ತಿದೆಯಷ್ಟೆ. ವ್ಯವಸ್ಥೆ ಹೇಗೆ ಹಡಾಲೆದ್ದು ಹೋಗುತ್ತಿದೆ ನೋಡಿ. ಸರ್ಕಾರಿ ವರ್ಗಾವಣೆ ಮೇ ತಿಂಗಳಲ್ಲೇ ಮುಗಿಯಬೇಕಿತ್ತು. ಜೂನ್ 20ಕ್ಕೆ ಗಡುವು ವಿಸ್ತರಣೆ ಆಯಿತು. ಆದರೂ ವರ್ಗಾವಣೆ ವ್ಯವಹಾರ ಮುಗಿಯಲಿಲ್ಲ. ಇದೀಗ ಜುಲೈ ಅಂತ್ಯಕ್ಕೆ ವರ್ಗಾವಣೆ ಮುಗಿಯಲೇಬೇಕು ಅಂತ ಮುಖ್ಯಮಂತ್ರಿಗಳೇ ಫರ್ಮಾನು ಹೊರಡಿಸಿದ್ದಾರಂತೆ. ಹಾಗಿದ್ದರೆ ಜೂನ್ 20ರ ಗಡುವು ನೀಡಿದ್ದು ಯಾರು? ಅದನ್ನು ಉಲ್ಲಂಘಿಸುತ್ತಿರುವವರು ಯಾರು? ಸರ್ಕಾರದ ಆದೇಶಕ್ಕೆ ಯಾವ ಕಿಮ್ಮತ್ತು? ಅರ್ಧ ಶೈಕ್ಷಣಿಕ ವರ್ಷ ಮುಗಿಯುವವರೆಗೂ ವರ್ಗಾವಣೆ ಅತಂತ್ರಕ್ಕೆ ಸಿಲುಕುವ ಸರ್ಕಾರಿ ನೌಕರರ ಮಕ್ಕಳುಮರಿಗಳ ಶಾಲೆ-ಕಾಲೇಜು ಶಿಕ್ಷಣದ ಭವಿಷ್ಯ ಏನಾಗುತ್ತೆ ಎಂಬುದರ ಅರಿವಾದರೂ ಬೇಡವೇ?

ಅಧಿಕಾರಿಗಳ ಮಾತು ಹೇಗೂ ಇರಲಿ. ವಾರಕ್ಕೆ ಇಷ್ಟುದಿನ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಿ, ಶಾಸಕರ ಕಷ್ಟಸುಖ ಆಲಿಸಿ, ಜನರ ದುಃಖದುಮ್ಮಾನವನ್ನು ದೂರಮಾಡಿ ಅಂತ ಸಿಎಂ ಸಿದ್ದರಾಮಯ್ಯ ಅದೆಷ್ಟು ಬಾರಿ ಮಂತ್ರಿಗಳೆದುರು ಗೋಗರೆದರೋ.. ಆದರೂ ವಿಧಾನಸೌಧದಲ್ಲಿ ಮಂತ್ರಿಗಳ ಹಾಜರಾತಿ ಆ ದೇವರಿಗೇ ಪ್ರೀತಿ. ಇದರಿಂದ ಯಾರಿಗೆ ಶೋಭೆ? ಯಾಕೆ ಹೀಗೆ? ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಹೇಗೆ ಹದಗೆಟ್ಟುಹೋಗುತ್ತಿದೆ ಎಂಬುದನ್ನು ಪ್ರತ್ಯಕ್ಷ ನೋಡುತ್ತಿz್ದÉೀವೆ. ಆ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಗೃಹ ಸಚಿವರು ನೈತಿಕ ಹೊಣೆ ಹೊರುವುದು ಬೇಡವೇ? ಈಗಿನ ವಿದ್ಯಮಾನ ನೋಡುತ್ತಿದ್ದರೆ ಇನ್ನೂ ಮೂರೂವರೆ ವರ್ಷ ಸರ್ಕಾರದ ರಥ ಮುನ್ನಡೆಸುವುದು ಕಷ್ಟ ಅಂತ ಅನ್ನಿಸುವುದು ಸಹಜ ತಾನೇ? ಅಂದಮೇಲೆ ಅಚ್ಛೇ ದಿನ ಅಷ್ಟು ಬೇಗನೆ ಅದ್ಹೇಗೆ ಬರಲು ಸಾಧ್ಯ? ಯೋಚನೆ ಮಾಡಿ ನೋಡಿ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top