ಶೈಕ್ಷಣಿಕ ಚಟುವಟಿಕೆ ಶೀಘ್ರ ಆರಂಭಿಸಿ – ಪತ್ರಿಕಾ ಸಂಪಾದಕರ ಜತೆಗಿನ ವೆಬಿನಾರ್‌ನಲ್ಲಿ ಸಚಿವರಿಗೆ ಸಲಹೆ

ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ಸಂಕಷ್ಟ ಸಮಯದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಂತ್ರಜ್ಞಾನ ಸೇರಿದಂತೆ ಲಭ್ಯ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಯನ್ನು ಶೀಘ್ರದಲ್ಲೇ ಆರಂಭಿಸಬೇಕು. ಈ ಸಂಬಂಧ ರಾಜ್ಯ ಸರಕಾರ ಸರಕಾರ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರು ಸರಕಾರಕ್ಕೆ ಸಲಹೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷ ಣ ಮತ್ತು ಶಾಲಾ ಚಟುವಟಿಕೆಗಳನ್ನು ಯಾವಾಗ ಪ್ರಾರಂಭಿಸಬೇಕು ಕುರಿತು ಅಭಿಪ್ರಾಯ ಸಂಗ್ರಹಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮುದ್ರಣ ಮಾಧ್ಯಮಗಳ ಸಂಪಾದಕರೊಂದಿಗೆ ಸೋಮವಾರ ವೆಬಿನಾರ್ ಮೂಲಕ ಚರ್ಚೆ ನಡೆಸಿದರು.
ಶಿಕ್ಷಣ ಸಚಿವರು ಹಾಗೂ ಕರ್ನಾಟಕ ಸರಕಾರ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ತೆಗೆದುಕೊಂಡ ಗಟ್ಟಿ ತೀರ್ಮಾನದ ಕುರಿತು ಪತ್ರಿಕಾ ಸಂಪಾದಕರು ಒಕ್ಕೊರಲಿನಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ಮಾದರಿಯಲ್ಲಿ ಶಾಲೆ ಪುನರಾರಂಭ ಹಾಗೂ ಪಾಠ ಪ್ರವಚನ ನಡೆಸುವ ವಿಧಾನಗಳ ವಿಷಯದಲ್ಲೂ ಸರಕಾರ ಒತ್ತಡಗಳಿಗೆ ಮಣಿಯದೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ನಗರ ಮತ್ತು ಗ್ರಾಮಾಂತರ ಪ್ರದೇಶದ ನಡುವೆ ಕಲಿಕಾ ವಿಧಾನ ಮತ್ತು ಗುಣಮಟ್ಟದಲ್ಲಿ ತಾರತಮ್ಯ ಇರಬಾರದೆಂಬುದು ಒಪ್ಪುವ ಸಂಗತಿ. ಆದರೆ ಪ್ರಸ್ತುತ ಸನ್ನಿವೇಶಕ್ಕೆ ಸರಕಾರ ಅಥವಾ ಇನ್ಯಾರೂ ಕಾರಣರಲ್ಲ. ಇದೊಂದು ತುರ್ತು ಸನ್ನಿವೇಶ. ಸಮಾಜದ ಅಸಹಾಯಕತೆಯೂ ಇದೆ. ಆದ ಕಾರಣ ಸಾಧ್ಯವಿರುವ ಎಲ್ಲಾ ವಿಧಾನಗಳ ಮೂಲಕ ವಿದ್ಯಾರ್ಥಿಗಳ ಹಿತ ಕಾಯುವುದು ಮುಖ್ಯ. ಕಲಿಕೆಯಲ್ಲಿ ಆಗುವ ಸಣ್ಣಪುಟ್ಟ ವ್ಯತ್ಯಾಸ ಸರಿದೂಗಿಸಲು ಪರೀಕ್ಷೆ ಕಾಲ, ಪರೀಕ್ಷಾ ವಿಧಾನ ಇತ್ಯಾದಿಗಳ ಸಂದರ್ಭದಲ್ಲಿ ಸೂಕ್ತ ನಿರ್ಧಾರಕ್ಕೆ ಬರಬಹುದೆಂಬ ಸಲಹೆ ನೀಡಲಾಯಿತು.
ಎಸ್ಸೆಸ್ಸೆಲ್ಸಿ/ಪಿಯುಸಿ ಮುಖ್ಯ: ಈ ವರ್ಷ ಎಸ್ಎಸ್ಎಲ್‌ಸಿ  ಹಾಗೂ ದ್ವಿತೀಯ ಪಿಯು ಪರೀಕ್ಷೆ ಬರೆಯುವ ಮಕ್ಕಳ ಹಿತ ಕಾಯುವುದು ಮುಖ್ಯ. ಆ ದೃಷ್ಟಿಯಿಂದ ಸರಕಾರ ಗಮನ ಕೇಂದ್ರೀಕರಿಸಬೇಕು ಎಂಬ ಅಭಿಪ್ರಾಯ ಪ್ರಮುಖವಾಗಿ ಹೊರಹೊಮ್ಮಿತು.
ಒಂದು ತಿಂಗಳಲ್ಲಿ ಸಮೀಕ್ಷೆ ನಡೆಸಿ: ಆನ್‌ಲೈನ್‌ ಪಾಠದ ಸಾಧ್ಯತೆ, ಟಿವಿ, ಕೇಬಲ್ ಮೂಲಕ ಮುದ್ರಿತ ಪಾಠ ಹಾಗೂ ಎಲ್ಲೆಲ್ಲಿ ನೇರವಾಗಿ ಶಾಲೆ ಆರಂಭಿಸಬಹುದು ಎಂಬುದರ ಕುರಿತು ಸರಕಾರ ತುರ್ತಾಗಿ ಸಮೀಕ್ಷೆ ನಡೆಸಿದರೆ ಮುಂದಿನ ಕ್ರಮ ಕೈಗೊಳ್ಳುವುದ ಸುಲಭ ಎಂಬ ಅಭಿಪ್ರಾಯವೂ ಹೊರಹೊಮ್ಮಿತು. ನಗರ/ಪಟ್ಟಣ/ಗ್ರಾಮೀಣ/ಗುಡ್ಡಗಾಡು ಪ್ರದೇಶಗಳನ್ನು ಪ್ರತ್ಯೇಕ ಯೂನಿಟ್‌ಗಳಾಗಿ ಪರಿಗಣಿಸಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಸರಕಾರ ಪಾಠ/ಪ್ರವಚನಕ್ಕೆ ನೀತಿ ನಿರೂಪಿಸಲಿ ಎಂದು ಸಲಹೆ ನೀಡಲಾಯಿತು.
ವೆಬಿನಾರ್‌ನಲ್ಲಿ ವಿಜಯ ಕರ್ನಾಟಕ ಸಂಪಾದಕ ಹರಿಪ್ರಕಾಶ ಕೋಣೆಮನೆ, ಪತ್ರಕರ್ತರಾದ ರವೀಂದ್ರಭಟ್, ರವಿ ಹೆಗಡೆ, ಹುಣಸವಾಡಿ ರಾಜನ್, ಕೆ.ಎನ್. ಚನ್ನೇಗೌಡ, ಬಾಲಕೃಷ್ಣ ಹೊಳ್ಳ, ಕೆ.ಆರ್. ಬಾಲಸುಬ್ರಹ್ಮಣ್ಯ, ರಾಮು ಪಾಟೀಲ್, ವಸಂತ ನಾಡಿಗೇರ, ವಿನಾಯಕಭಟ್ಟ ಮೂರೂರು ಮತ್ತು ಅರುಣ್, ಸಾರ್ವಜನಿಕ ಶಿಕ್ಷ ಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ಶ್ರೀಮತಿ ದೀಪಾ ಚೋಳನ್ ಭಾಗವಹಿಸಿದ್ದರು.
ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ: ಸಚಿವ ಎಸ್. ಸುರೇಶ್ ಕುಮಾರ್ ಮಾತನಾಡಿ ‘‘ಮಕ್ಕಳ ಕಲಿಕೆ ಮುಂದುವರಿಸುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ನಿರ್ದಿಷ್ಟ ಕ್ರಿಯಾ ಯೋಜನೆ ರೂಪಿಸಿದ್ದು, ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನಗೊಳ್ಳಲಿದೆ. ತಂತ್ರಜ್ಞಾನಾಧಾರಿತ ಕಲಿಕೆಯ ಕುರಿತಂತೆ ತಜ್ಞರ ಸಮಿತಿ ಸಲ್ಲಿಸಿರುವ ವರದಿ ಆಧಾರದಲ್ಲಿ ‘ವಿದ್ಯಾಗಮ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಇಲಾಖೆಯು ರೂಪಿಸುತ್ತಿದ್ದು, ಇಷ್ಟರಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಈ ಯೋಜನೆಯು ಎಲ್ಲವರ್ಗಗಳ ಶಾಲೆಗಳನ್ನು, ವಿದ್ಯಾರ್ಥಿಗಳನ್ನು ಸಮರ್ಥವಾಗಿ ತಲುಪಲಿದೆ,’’ ಎಂದು ಅವರು ಹೇಳಿದರು.

ಚರ್ಚೆಯ ಪ್ರಮುಖಾಂಶಗಳು
– ಆದಷ್ಟು ಶೀಘ್ರದಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು.
– ಶೈಕ್ಷಣಿಕ ಚಟುವಟಿಕೆಯಿಂದ ವಂಚಿತರಾಗಿದ್ದೇವೆ ಎಂಬ ಭಾವನೆ ಮಕ್ಕಳಲ್ಲಿ ಬಾರದಂತೆ ನೋಡಿಕೊಳ್ಳಬೇಕು.
– ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಇಂಥದ್ದೇ ಮಾಧ್ಯಮ ಸರಿ ಅಥವಾ ತಪ್ಪು ಎಂಬ ನಿರ್ಧಾರಕ್ಕೆ ಬರುವ ಬದಲು ಲಭ್ಯ ಇರುವ ವಿವಿಧ ಸೌಕರ್ಯಗಳ ಮೂಲಕ ಮಕ್ಕಳನ್ನು ತಲುಪಲು ಯತ್ನಿಸಬೇಕು.
– ಎಲ್ಲಿ ಸಾಧ್ಯವೋ ಅಲ್ಲಿ ಆನ್‌ಲೈನ್‌ ಪಾಠ ಪ್ರವಚನ ನಡೆಯಲಿ.
– ಆನ್‌ಲೈನ್‌ ಶಿಕ್ಷಣ ಸಾಧ್ಯವಾಗದ ಕಡೆ ಮುದ್ರಿತ ವಿಡಿಯೊಗಳ ಮೂಲಕ ಪಾಠ ಮಾಡಲಿ
– ಶಿಕ್ಷಕರೇ ಮಕ್ಕಳ ಬಳಿ ತೆರಳಿ ಪಾಠ ಮಾಡಬಹುದು
– ಚಂದನ ವಾಹಿನಿ, ಖಾಸಗಿ ಲೋಕಲ್ ಚಾನೆಲ್‌ಗಳ ಮೂಲಕವೂ ಪಾಠ ಮಾಡಲು ಯತ್ನಿಸಲಿ.
– ಕೊರೊನಾ ಸುರಕ್ಷಿತ ಪ್ರದೇಶಗಳಲ್ಲಿ ಆಯ್ಕೆ ಮಾಡಿ ಶಾಲಾ ಕೊಠಡಿಗಳಲ್ಲೇ ಪಾಠ ಶುರು ಮಾಡಬಹುದು
– ಸರಕಾರಿ/ಖಾಸಗಿ ಶಾಲೆಗಳ ನಡುವೆ ಸಾಮ್ಯತೆ ಕಾಯ್ದುಕೊಳ್ಳಲು ಪರೀಕ್ಷೆ/ಪರೀಕ್ಷೆ ಫಲಿತಾಂಶದ ಸಂದರ್ಭದಲ್ಲಿ ತೀರ್ಮಾನಕ್ಕೆ ಬರಬಹುದು.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top