ಭಾರತ ಗಡಿಯಲ್ಲಿ ನಡೆಸುತ್ತಿರುವ ನಿರ್ಮಾಣ ಚಟುವಟಿಕೆ, ಅದರಲ್ಲೂ ಮುಖ್ಯವಾಗಿ ಡಿಎಸ್‌ಡಿಬಿಒ ರಸ್ತೆ ಎಂದೇ ಹೆಸರಾಗಿರುವ ಗಡಿಯಂಚಿನ ರಸ್ತೆ ಚೀನಾದ ಕಿರಿಕಿರಿಗೆ ಕಾರಣವಾಗಿದೆ. ಈ ರಸ್ತೆಯ ಪ್ರಾಮುಖ್ಯತೆ ಏನು? ತಿಳಿಯೋಣ ಬನ್ನಿ.
ಚೀನಾ ಹಾಗೂ ಭಾರತದ ಯೋಧರ ನಡುವೆ ಚಕಮಕಿ ನಡೆದ ಗಲ್ವಾನ್ ನದಿ ಹಾಗೂ ವಾಸ್ತವಿಕ ಗಡಿ ರೇಖೆಗೆ ಸಮಾನಾಂತರವಾಗಿ ಒಂದು ಸರ್ವಋುತು ರಸ್ತೆಯನ್ನು ಭಾರತ ನಿರ್ಮಿಸುತ್ತಿದೆ. ಇದು ದರ್ಬುಕ್- ಶಾಯಕ್- ದೌಲತ್ ಬೇಗ್ ಓಲ್ಡಿ ರಸ್ತೆ (ಡಿಎಸ್‌ಡಿಬಿಒ ರೋಡ್) ಎಂದೇ ಹೆಸರಾಗಿದೆ. ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖ ತಾಣದಲ್ಲಿರುವ ಈ ರಸ್ತೆಯ ನಿರ್ಮಾಣವೇ ಈಗ ಚೀನೀಯರಿಗೆ ಆತಂಕ ತಂದಿರುವುದು. ಸಮುದ್ರ ಮಟ್ಟದಿಂದ 13,00 ಅಡಿ ಎತ್ತರದಿಂದ 16,000 ಅಡಿ ಎತ್ತರದ ತಾಣಗಳವರೆಗೂ ಹರಿದುಹೋಗುವ ಈ ರಸ್ತೆಯ ನಿರ್ಮಾಣ ಸುಮಾರು 20 ವರ್ಷಗಳಿಂದ ನಡೆಯುತ್ತಿದೆ. ಭಾರತದ ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ) ಇದನ್ನು ನಡೆಸುತ್ತಿದೆ. ಲೇಹ್‌ನಿಂದ ಲಡಾಖ್ ಅನ್ನು ಸಂಪರ್ಕಿಸುವ ರಸ್ತೆಯಿದು.
ಅತಿ ಎತ್ತರದ ವಿಮಾನ ನಿಲ್ದಾಣ
ಡಿಎಸ್‌ಡಿಬಿಒ ರಸ್ತೆಯ ಒಂದು ತುದಿ ಲಡಾಖ್‌ನಲ್ಲಿರುವ ದೌಲತ್ ಬೇಗ್ ಓಲ್ಡಿ (ಡಿಬಿಒ) ವಿಮಾನ ನಿಲ್ದಾಣದಿಂದ ಆರಂಭವಾಗುತ್ತದೆ. ಇಲ್ಲಿನ ರನ್‌ವೇ ಜಗತ್ತಿನ ಅತ್ಯಂತ ಎತ್ತರದ ರನ್‌ವೇಗಳಲ್ಲಿ ಒಂದು, 16,614 ಅಡಿ ಎತ್ತರದಲ್ಲಿದೆ. ಚಿಪ್‌ಚಾಪ್ ನದಿ ಇದರ ಪಕ್ಕದಲ್ಲಿ ಹರಿಯುತ್ತದೆ. ಇದರ ಪಶ್ಚಿಮಕ್ಕೆ ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರುವ ಭೂಭಾಗವಿದೆ. ಇದರ ಉತ್ತರಕ್ಕೆ 8 ಕಿಲೋಮೀಟರ್ ದೂರದಲ್ಲಿ ಚೀನಾದ ಗಡಿ, 9 ಕಿಲೋಮೀಟರ್ ವಾಯುವ್ಯದಲ್ಲಿ ಚೀನಾದ ವಶದಲ್ಲಿರುವ ಆಕ್ಸಾಯ್ ಚಿನ್‌ನ ವಾಸ್ತವಿಕ ಗಡಿ ರೇಖೆಗಳಿವೆ. 1962ರಲ್ಲಿ ಯುದ್ಧ ಸಂಭವಿಸಿದಾಗ ಇಲ್ಲಿ ವಿಮಾನ ನಿಲ್ದಾಣ ರಚನೆ ಮಾಡಲಾಗಿತ್ತು. ನಂತರ 2008ರವರೆಗೂ ಇದು ಪಾಳುಬಿದ್ದಿತ್ತು. ಚೀನಾದ ವಿಸ್ತರಣಾಕಾಂಕ್ಷೆಯ ಹಿನ್ನೆಲೆಯಲ್ಲಿ ಇದನ್ನು ಪುನರುಜ್ಜೀವಿಸಲಾಗಿದೆ.
ಲೇಹ್‌ನಿಂದ ಆರಂಭ
ಡಿಎಸ್‌ಡಿಬಿಒ ರಸ್ತೆಯ ಇನ್ನೊಂದು ತುದಿ ಲೇಹ್‌ನ ದರ್ಬುಕ್ ಪ್ರಾಂತ್ಯವನ್ನು ಸಂಪರ್ಕಿಸುತ್ತದೆ. ಲೇಹ್‌ನಿಂದ ಲಡಾಖ್‌ಗೆ ಸಸೇರ್ ಪಾಸ್ ಮೂಲಕ ಸಾಗುವ ಇನ್ನೊಂದು ರಸ್ತೆಯೂ ಇದೆ. ಆದರೆ ಇದರಲ್ಲಿ ಲೇಹ್‌ನಿಂದ ಲಡಾಖ್‌ಗೆ ಪ್ರಯಾಣ ಎರಡು ದಿನ ತೆಗೆದುಕೊಳ್ಳುತ್ತದೆ. ಸಸೇರ್ ಪಾಸ್ ಪ್ರಚೀನ್ ಸಿಲ್ಕ್ ರೂಟ್‌ನ ಭಾಗ. ಇದು 17,500 ಅಡಿ ಎತ್ತರದಲ್ಲಿದ್ದು ಯಾವಾಗಲೂ ಹಿಮಾವೃತ ಹಾಗೂ ಸಂಚಾರಕ್ಕೆ ಬಲು ಕಠಿಣ. ಡಿಎಸ್‌ಡಿಬಿಒ ರಚನೆಯ ಮೂಲಕ ಈ ಪ್ರಯಾಣದ ಸಮಯ 6 ಗಂಟೆಗಳಿಗೆ ಇಳಿಯುತ್ತದೆ. ಹಾಗೇ ಇದು ಚೀನಾ- ಭಾರತ ವಾಸ್ತವಿಕ ಗಡಿ ರೇಖೆಗೂ ಹತ್ತಿರವಾಗಿ ಇರುವುದರಿಂದ ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಯೋಧರನ್ನು ತಲುಪಿಸಲು ಅನುಕೂಲ.
20 ವರ್ಷಗಳಿಂದ ರಸ್ತೆ ನಿರ್ಮಾಣ
2001ರಲ್ಲಿ ಈ ರಸ್ತೆಯ ನಿರ್ಮಾಣ ಕಾರ್ಯ ಆರಂಭವಾಯಿತು. ಲೇಹ್‌ನಿಂದ ಲಡಾಖ್‌ಗೆ 255 ಕಿಲೋಮೀಟರ್ ದೂರ ಈ ರಸ್ತೆ ಸಾಗುತ್ತದೆ. ಚಳಿಗಾಲದಲ್ಲಿ ಈ ಪ್ರಾಂತ್ಯದಲ್ಲಿ ತಾಪಮಾನ ಮೈನಸ್ 55 ಡಿಗ್ರಿಗಳಿಗೆ ಇಳಿಯುತ್ತದೆ. ಸಂಪರ್ಕ ಕೇವಲ ಸ್ಯಾಟ್‌ಲೈಟ್ ಫೋನ್‌ಗಳಿಂದ ಮಾತ್ರ ಸಾಧ್ಯ. ಹೀಗಾಗಿ ರಸ್ತೆ ನಿರ್ಮಾಣ ಕಾರ್ಯ ಕುಂಟುತ್ತ ನಡೆಯುತ್ತಿತ್ತು.
ನಿಲ್ಲಿಸುವ ಪ್ರಶ್ನೆಯೇ ಇಲ್ಲ
ಯಾವ ಕಾರಣಕ್ಕೂ ಈ ರಸ್ತೆಯ ನಿರ್ಮಾಣ ಕಾರ್ಯವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಸೇನಾಯೋಧರ ತಿಕ್ಕಾಟದ ನಡುವೆಯೂ ರಸ್ತೆ ನಿರ್ಮಾಣ ಕಾರ್ಯ ನಿರಾತಂಕವಾಗಿ ನಡೆದಿದ್ದು, ಚಕಮಕಿ ನಡೆದ ಸ್ಥಳಕ್ಕೆ 2 ಕಿಲೋಮೀಟರ್ ದೂರದಲ್ಲಿ ಶಾಯಕ್ ನದಿಗೆ ನಿರ್ಮಿಸಲಾಗುತ್ತಿದ್ದ ಸೇತುವೆಯ ಕೆಲಸ ಕೂಡ ಪೂರ್ಣಗೊಂಡಿದೆ. ಈ ರಸ್ತೆಯಲ್ಲಿ ಸುಮಾರು 37 ಇಂಥ ಸಣ್ಣ- ದೊಡ್ಡ ಸೇತುವೆಗಳಿವೆ.
ಡಿಬಿಒ ಎಷ್ಟು ಮುಖ್ಯ?
ದೌಲತ್ ಬೇಗ್ ವಿಮಾನ ನಿಲ್ದಾಣ ಭಾರತಕ್ಕೆ ವ್ಯೂಹಾತ್ಮಕವಾಗಿ ಅತ್ಯಂತ ಮುಖ್ಯ ಸ್ಥಾನದಲ್ಲಿದೆ. ಭಾರತದ ಅತಿ ಎತ್ತರದ ಗಡಿ ಠಾಣೆಯಾದ ಸಿಯಾಚಿನ್ ಗ್ಲೇಷಿಯರ್‌ನಲ್ಲಿ ಕಾವಲು ನಿಂತಿರುವ ಯೋಧರಿಗೆ ಇಲ್ಲಿಂದಲೇ ಆಹಾರ ಮತ್ತಿತರ ಅವಶ್ಯಕ ಸಾಮಗ್ರಿ ರವಾನೆಯಾಗುತ್ತವೆ. ಸುತ್ತಮುತ್ತಲಿನ ಐದುನೂರು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಎಲ್ಲಿ ಏನೇ ಆದರೂ ಅವಲಂಬಿಸಬೇಕಾದ ವಿಮಾನ ನಿಲ್ದಾಣವೆಂದರೆ ಡಿಬಿಒ. ಸಿಯಾಚಿನ್ ಗ್ಲೇಷಿಯರ್‌ನಂತೆಯೇ ಇದು ಕೂಡ ಭಾರತದ ಅತ್ಯಂತ ಉತ್ತರದಲ್ಲಿರುವ ಶತ್ರು ತಾಣಕ್ಕೆ ಅತಿ ಸಮೀಪವಾಗಿರುವ ಮಿಲಿಟರಿ ನೆಲೆಗಳಲ್ಲಿ ಒಂದು. ಯುದ್ಧ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಮಿಲಿಟರಿಯನ್ನು ತಲುಪಿಸಬಹುದಾದ ತಾಣವಿದು. ಉಭಯ ಸೇನೆಗಳ ಯೋಧರ ನಡುವೆ ತಿಕ್ಕಾಟ ನಡೆದಾಗ ಅಥವಾ ಶಾಂತಿ ಸಂದರ್ಭದಲ್ಲಿ ಸೇನಾಧಿಕಾರಿಗಳ ಮಧ್ಯೆ ನಡೆಯುವ ಮಾತುಕತೆಗಳಿಗೂ ಇದೇ ತಾಣ.
ಕಾರಕೋರಂ ಪಾಸ್
ವ್ಯೂಹಾತ್ಮಕವಾಗಿ ಪ್ರಮುಖವಾಗಿರುವ ಕಾರಕೋರಂ ಪಾಸ್ ಕೂಡ ಡಿಬಿಒಗೆ ಹತ್ತಿರದಲ್ಲೇ ಇದೆ. ಇದು, ಭಾರತ- ಚೀನಾ ಯುದ್ಧ ಸಂಭವಿಸುವ ಮುನ್ನ ಉಭಯ ದೇಶಗಳು, ಪಾಕಿಸ್ತಾನ ಹಾಗೂ ಅಫಘಾನಿಸ್ತಾನಗಳ ನಡುವೆ ವಾಣಿಜ್ಯ ವಹಿವಾಟಿನ ವಾಹನಗಳು ಹಾದುಹೋಗುವ ತಾಣವಾಗಿತ್ತು. ಈಗ ಅಲ್ಲಿ ಚೀನಾ- ಪಾಕಿಸ್ತಾನ ನಡುವೆ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ಕಾರಕೋರಂ ಹೆದ್ದಾರಿ ಹಾದುಹೋಗುತ್ತದೆ. 1963ರಲ್ಲಿ ಚೀನಾದ ಜೊತೆಗೆ ಒಂದು ಒಪ್ಪಂದ ಮಾಡಿಕೊಂಡ ಪಾಕಿಸ್ತಾನ, ಇಲ್ಲಿನ ಗಿಲ್ಗಿಟ್- ಬಾಲ್ಟಿಸ್ತಾನದ ಸುಮಾರು 5200 ಚದರ ಕಿಲೋಮೀಟರ್ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಇಲ್ಲಿನ ಚೀನಾ ನಿರ್ಮಿಸುತ್ತಿರುವ ಚೀನಾ- ಪಾಕಿಸ್ತಾನ ವಾಣಿಜ್ಯ ಕಾರಿಡಾರ್ (ಸಿಪಿಇಸಿ) ಇದೆ. ಗಿಲ್ಗಿಟ್- ಬಾಲ್ಟಿಸ್ತಾನ್ ವಿವಾದಿತ ಪ್ರದೇಶ ಆದುದರಿಂದ ಇದನ್ನು ಭಾರತ ವಿರೋಧಿಸುತ್ತಿದೆ. ಕಾರಕೋರಂ ಹೆದ್ದಾರಿಗೆ ಸಮಾನಾಂತರವಾಗಿ ಡಿಎಸ್‌ಡಿಬಿಒ ಹಾದುಹೋಗುವುದರಿಂದಲೂ ಚೀನಾಕ್ಕೆ ಇದರ ಬಗ್ಗೆ ಆತಂಕ. ಚೀನಾದ ಕ್ಸಿಯಾನ್ಜಿಂಗ್ ಪ್ರಾಂತ್ಯವನ್ನು ಟಿಬೆಟ್ ಸ್ವಾಯತ್ತ ಪ್ರದೇಶದ ಜೊತೆಗೆ ಜೋಡಿಸುವ ಹೆದ್ದಾರಿ ಕೂಡ ಇಲ್ಲಿಗೆ ಹತ್ತಿರದಲ್ಲೇ ಇದೆ.
2013ರ ಪ್ರಕರಣ
2013ರ ಏಪ್ರಿಲ್‌ನಲ್ಲಿ ಚೀನಾದ ಒಂದು ಪ್ಲಟೂನ್ ಸೈನಿಕರು ಡಿಬಿಒದ ಹತ್ತು ಕಿಲೋಮೀಟರ್‌ಗಳಷ್ಟು ಹತ್ತಿರ ಬಂದು ಟೆಂಟ್ ಹಾಕಿದ್ದರು. ಮೂರು ವಾರಗಳ ಕಾಲ ಹಾಗೇ ಇದ್ದರು. ಭಾರತ ಇದನ್ನು ವಿರೋಧಿಸಿತು. ಭಾರತದ ವಾಯುಪ್ರದೇಶವನ್ನೂ ಚೀನಾದ ಹೆಲಿಕಾಪ್ಟರ್‌ಗಳು ಉಲ್ಲಂಘಿಸಿದ್ದವು. ಇಂಥ ಘಟನೆಗಳು ಮರುಕಳಿಸುವುದು ಬೇಡವೆಂದು 2013ರ ಗಡಿ ಒಪ್ಪಂದ ಮಾಡಿಕೊಳ್ಳಲಾಯಿತು.