ಸೋಂಕದಿರಲು ತೆರೆದ ಬಾಗಿಲು

ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಮಯದಲ್ಲಿಯೇ ಕೆಲವು ಮಾಧ್ಯಮಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗಾಳಿಸುದ್ದಿಗಳೂ ಹರಡುತ್ತಿವೆ. ಒಮ್ಮೊಮ್ಮೆ ಇಂಥ ಸುದ್ದಿಗಳು ಹಗ್ಗಕ್ಕೇ ಹೆದರುವವರ ಮೇಲೆ ಹಾವು ಎಸೆದಂತಾಗುತ್ತಿದೆ. ಕೋವಿಡ್‌-19 ವೈರಸ್‌ ಅನ್ನು ಇದುವರೆಗೂ ನಾವು ವರ್ಗೀಕರಿಸಿಕೊಂಡಿದ್ದು, ಮನುಷ್ಯ-ಮನುಷ್ಯರ ನಡುವಿನ ಸಂಪರ್ಕದಿಂದ ಹರಡಬಲ್ಲದ್ದೆಂದು. ಅದು ಗಾಳಿಯ ಮೂಲಕವೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯಿದೆಯೆಂದು ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿಯ ಪ್ರಾಧ್ಯಾಪಕರಾದ ಲಿಡಿಯಾ ಮೊರಾಸ್ಕಾ ಹಾಗೂ ಅಮೆರಿಕದ ಯೂನಿವರ್ಸಿಟಿ ಆಫ್‌ ಮೇರಿಲ್ಯಾಂಡ್‌ನ ಪ್ರಾಧ್ಯಾಪಕರಾದ ಡೊನಾಲ್ಡ್‌ ಮಿಲ್ಟನ್‌ ಜತೆಯಾಗಿ ಒಂದು ಕಿರು ಪ್ರಬಂಧ ‘ It is T Aime to Address Airborne Transmission of COVID-19’ ವನ್ನು ಕೆಲ ಸಮಯದ ಹಿಂದೆ ಬರೆದಿದ್ದರು. ಅದಕ್ಕೆ ಜಗತ್ತಿನ 32 ದೇಶಗಳ 239 ವಿಜ್ಞಾನಿಗಳ ಅನುಮೋದನೆಯನ್ನು ಪಡೆದುಕೊಂಡು ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನ ‘ಇನ್‌ಫೆಕ್ಶಿಯಸ್‌ ಡಿಸೀಸಸ್‌ ಸೊಸೈಟಿ ಆಫ್‌ ಅಮೆರಿಕ ಜರ್ನಲ್‌’ಗೆ ಪ್ರಕಟಣೆಗೆ ಕಳುಹಿಸಿದರು. ಅದು ಪ್ರಕಟವಾಗುವ ಮುನ್ನವೇ ಕೋವಿಡ್‌-19 ಅನ್ನು ‘ಗಾಳಿಯಲ್ಲಿ ಹರಡಬಲ್ಲ’ ವೈರಸ್‌ಎಂದು ಪರಿಗಣಿಸಲು ‘ವಿಶ್ವ ಸ್ವಾಸ್ಥ್ಯ ಸಂಸ್ಥೆ’ಗೆ (ಡಬ್ಲ್ಯೂಎಚ್‌ಒ) ಒಂದು ಬಹಿರಂಗ ಪತ್ರವನ್ನು ಆ ಪ್ರಬಂಧದ ಸಾರಾಂಶದೊಂದಿಗೆ ಅವರು ಬರೆದರು.
ಕೊರೊನಾ ವೈರಸ್‌ ನಿಯಂತ್ರಣಕ್ಕೆ ಅಗತ್ಯವಾದ ನಿರ್ವಹಣೆ ಮಾಡಿಲ್ಲವೆಂಬ ಟೀಕೆಗೆ ಗುರಿಯಾಗಿರುವ ಡಬ್ಲ್ಯೂಎಚ್‌ಒ ಅನ್ನು ದೂಷಿಸಲು ಮಾಧ್ಯಮಗಳಿಗೆ ಈ ಬಹಿರಂಗ ಪತ್ರ ಅವಕಾಶ ಕಲ್ಪಿಸಿತು. ಡಬ್ಲ್ಯೂಎಚ್‌ಒ ಅಧಿಕೃತವಾಗಿ ಪ್ರತಿಕ್ರಿಯೆ ನೀಡುವ ಮುನ್ನ ಮತ್ತು ಆ ಪ್ರಬಂಧ ಜರ್ನಲ್‌ನಲ್ಲಿ ಪ್ರಕಟವಾಗುವ ಮನ್ನವೇ ವಿಶ್ಲೇಷಣೆಗಳು ಪ್ರಕಟವಾಗಲಾರಂಭಿಸಿದವು. ಇದೀಗ ಡಬ್ಲ್ಯೂಎಚ್‌ಒ ಅಧಿಕೃತವಾಗಿ ಅಭಿಪ್ರಾಯವನ್ನು ಪ್ರಕಟಿಸಿದೆ, ಹಾಗೆಯೇ ಆ ಪ್ರಬಂಧದ ಪ್ರತಿಯೂ ಸಾರ್ವಜನಿಕವಾಗಿ ಲಭ್ಯವಾಗಿದೆ. ಮೊದಲಿಗೆ, ಆ ಪ್ರಬಂಧದಲ್ಲಿ ಏನು ಬರೆಯಲಾಗಿದೆಯೆಂದು ತಿಳಿದುಕೊಳ್ಳೋಣ.
ಅದರ ಪ್ರಕಾರ, ‘ವೈರಸ್‌ ಸೋಂಕಿತರು ಉಸಿರು ಹೊರಬಿಡುವಾಗ, ಮಾತನಾಡುವಾಗ ಅಥವಾ ಕೆಮ್ಮುವಾಗ ಅವರ ಮೂಗು ಹಾಗೂ ಬಾಯಿಯಿಂದ ಹೊರಬರಬಲ್ಲ ವೈರಸ್‌ ಸಹಿತದ ಸೂಕ್ಷ ್ಮ ಹನಿಗಳು ಒಂದರಿಂದ ಎರಡು ಮೀಟರ್‌ ದೂರದ ತನಕ ಗಾಳಿಯಲ್ಲಿ ತೇಲುತ್ತಾ ಸಾಗುವ ಸಾಧ್ಯತೆಯಿದೆ. ಹಾಗೆಯೇ ಅವಕಾಶ ಸಿಕ್ಕಲ್ಲಿ 5 ಮೈಕ್ರಾನ್‌ ಗಾತ್ರದ ಹನಿಯೊಂದು ಹತ್ತಾರು ಮೀಟರ್‌ಗಳಷ್ಟು ದೂರ ಸಹಾ ಸಾಗಬಹುದು, ಮತ್ತು ಒಂದೂವರೆ ಮೀಟರ್‌ಎತ್ತರದಿಂದ ನೆಲದ ಮೇಲೆ ಬೀಳುವ ಸಂಭವವಿದೆ’. ಇವೆಲ್ಲವೂ ಲೆಕ್ಕಾಚಾರದ ಮಾತು. ಈ ವಿಜ್ಞಾನಿಗಳ ಪ್ರಕಾರ ಸೂಕ್ಷ ್ಮ ಹನಿಗಳಿಂದಾಗುವ ಸೋಂಕಿಗೆ ಗಾಳಿಯೂ ಒಂದು ಗುರುತರ ಮಾರ್ಗವನ್ನು ಕಲ್ಪಿಸುತ್ತದೆ. ಗಾಳಿಯ ಗುಣಮಟ್ಟ ಕುರಿತಂತೆ ಪರಿಣತರಾದ ಲಿಡಿಯಾ ಮೊರಾಸ್ಕಾ ಅವರು ನಡೆಸಿರುವ ಪ್ರತ್ಯೇಕ ಅಧ್ಯಯನಗಳಲ್ಲಿ 5 ಮೈಕ್ರಾನ್‌ಗಳಿಗಿಂತಲೂ (ಕೂದಲೆಳೆಯನ್ನು ಹತ್ತು ಭಾಗಗಳಾಗಿ ಸೀಳಿದರೆ ಸಿಗುವ ಅಳತೆ) ಕಿರಿದಾದ ಸೂಕ್ಷ ್ಮಹನಿಗಳು ಗಾಳಿಯಲ್ಲಿ ಕಂಡುಬಂದಿವೆ, ಮತ್ತು ಈ ಗಾತ್ರದ ಸೂಕ್ಷ ್ಮ ಹನಿಗಳಲ್ಲಿರುವಂಥ ವೈರಸ್‌ಗಳು ಸೋಂಕು ತರುವಷ್ಟು ಪರಿಣಾಮಕಾರಿಯಾಗಿದ್ದವು. ಅವರ ವಿಶ್ಲೇಷಣೆಗಳ ಪ್ರಕಾರ ಇತರೆ ವೈರಸ್‌ಗಳಂತೆ ಕೋವಿಡ್‌-19 ಸಹಾ ಗಾಳಿಯಲ್ಲಿ ತೇಲುವ ಏರೋಸಾಲ್‌ಗಳಲ್ಲೂ ಬದುಕುಳಿಯಬಲ್ಲವು.
ಇವಿಷ್ಟು ಹೇಳಿದ ನಂತರ ವಿಜ್ಞಾನಿಗಳು ಸೋಂಕಿನ ನಿವಾರಣೆಗೆ ಈಗಿರುವ ಡಬ್ಲ್ಯೂಎಚ್‌ಒ ಕಟ್ಟಳೆಗಳು ಸಾಲದೆಂದಿದ್ದಾರೆ. ಸೋಪಿನಲ್ಲಿ ಕೈತೊಳೆಯುವುದು, ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಒಳಿತು, ಅವರ ಅಭಿಪ್ರಾಯದಲ್ಲಿ, ಗಾಳಿ ಸೇರಿದ ಸೋಂಕಿತರ ಉಸಿರಿನಿಂದ ಸಿಂಚನವಾಗುವ ವೈರಸ್‌ಭರಿತ ಸೂಕ್ಷ ್ಮ ಹನಿಗಳಿಂದ ಇವೆರಡೂ ಸುರಕ್ಷಾ ಕ್ರಮಗಳು ನಮ್ಮನ್ನು ರಕ್ಷಿಸುವುದಿಲ್ಲ. ಕಿಟಕಿ-ಬಾಗಿಲು ತೆರೆಯದ ಕೋಣೆಗಳಲ್ಲಿ, ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಅಗತ್ಯವಾದಷ್ಟು ತಾಜಾ ಗಾಳಿಯ ಹರಿದಾಟಕ್ಕೆ ಆಸ್ಪದವಿಲ್ಲದಲ್ಲಿ, ಸುದೀರ್ಘ ಕಾಲ ಉಳಿಯುವ ವ್ಯಕ್ತಿಗಳನ್ನು ಸೋಂಕಿನಿಂದ ಸಂರಕ್ಷಿಸುವುದು ಕಷ್ಟ. ಸಾರ್ವಜನಿಕರು ಹೆಚ್ಚು ಸೇರುವ ಕಟ್ಟಡಗಳಲ್ಲಿ, ಕಚೇರಿಗಳಲ್ಲಿ, ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ ಹಾಗೂ ವೃದ್ಧಾಶ್ರಮಗಳಲ್ಲಿ ಹಳೆಯ ಗಾಳಿಯೇ ಸುತ್ತಿ ಬರುವ ಬದಲು, ತಾಜಾ ಗಾಳಿಯ ಹರಿದಾಟಕ್ಕೆ ಅನುವು ಮಾಡಿಕೊಡಬೇಕು. ಗಾಳಿಯಿಂದ ಬರುವ ವೈರಸ್‌ ಸೋಂಕುಗಳನ್ನು ತಡೆಗಟ್ಟಲು ಗಾಳಿ ಪೂರೈಕೆ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಸೋಸುಕಗಳನ್ನು ಬಳಸಬೇಕು ಹಾಗೆಯೇ ಅತಿನೇರಿಳೆ ಕಿರಣಗಳನ್ನು ಗಾಳಿಯ ಮೇಲೆ ಹಾಯಿಸಬೇಕು ಎಂದಿದ್ದಾರೆ.
ಹಾಗೆಯೇ ಸಾರ್ವಜನಿಕರು ಬಳಸುವ ಕಟ್ಟಡಗಳು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. ಜನರಿರುವ ಕೋಣೆಗಳ ಕಿಟಕಿ ಮತ್ತು ಬಾಗಿಲುಗಳನ್ನು ತæರೆದಿಡುವಂತೆ ಆದೇಶಿಸಬೇಕೆಂದಿದ್ದಾರೆ. ದೇಶಗಳೆಲ್ಲವೂ ಒಂದೊಂದಾಗಿ ಲಾಕ್‌ಡೌನ್‌ ತೆರವು ಮಾಡಿ, ಕಚೇರಿಗಳನ್ನು, ಶಾಲಾ, ಕಾಲೇಜು ವಿಶ್ವವಿದ್ಯಾಲಯಗಳನ್ನು ತೆರೆಯುತ್ತಿರುವ ಸಮಯದಲ್ಲಿ ಅವರ ಈ ಹೇಳಿಕೆಗೆ ಹೆಚ್ಚು ಮಹತ್ವವಿದೆ. ವೈರಸ್‌ ನಿರೋಧಕ ಲಸಿಕೆ ಇನ್ನೂ ಲಭ್ಯವಾಗಿರದ ಕಾರಣ, ಅದರ ಪ್ರಸರಣೆಯ ಎಲ್ಲ ಮಾರ್ಗಗಳನ್ನೂ ತಡೆಗಟ್ಟಲೇಬೇಕಾದ ಅನಿವಾರ್ಯವಿದೆ.
ಇವಿಷ್ಟು ಆ ವಿಜ್ಞಾನಿ ತಂಡದ ಒಟ್ಟು ಅಭಿಪ್ರಾಯ. ಇದು ಅಮೆರಿಕ, ಯುರೋಪ್‌ ಸೇರಿದಂತೆ ವಾತಾನುಕೂಲಿಯನ್ನು ಹೆಚ್ಚು ಬಳಸುವ ದೇಶಗಳಿಗೆ ಅನ್ವಯಿಸುವಂಥ ಸಲಹೆಗಳು. ಈಗಾಗಲೇ ನಮ್ಮಲ್ಲಿ ಮಾಸ್ಕ್‌ ಕಡ್ಡಾಯ ಮಾಡಿರುವುದರಿಂದ ಗಾಳಿಯಲ್ಲಿ ಪ್ರಸರಣೆಯಾಗುವ ಸಾಧ್ಯತೆಯಿರುವ ವೈರಸ್‌ನಿಂದಲೂ ನಾವು ರಕ್ಷ ಣೆ ಪಡೆಯಬಹುದು.
ಈ ಸಲಹೆಗಳ ಕುರಿತಂತೆ ಪ್ರತಿಕ್ರಿಯಿಸಿರುವ ಡಬ್ಲ್ಯೂಎಚ್‌ಒದ ತಾಂತ್ರಿಕ ಸಮಿತಿಯ ಮುಖ್ಯಸ್ಥರಾದ ಮರಿಯಾ ವಾನ್‌ಕೆರ್ಕೋವ್‌, ‘‘ಗಾಳಿಯಲ್ಲಿ ಹಾಗೂ ಏರೋಸಾಲ್‌ ಕಣಗಳಲ್ಲಿ ವೈರಸ್‌ ಪ್ರಸರಣೆಯ ಸಾಧ್ಯತೆಗಳ ಕುರಿತಂತೆ ನಾವು ಹಿಂದೆಯೇ ಚರ್ಚಿಸಿದ್ದೆವು. ಆದರೆ ಪ್ರಾಥಮಿಕವಾಗಿ ಸೋಂಕಿತರ ಮೂಗು ಮತ್ತು ಬಾಯಿಯಿಂದ ಚಿಮ್ಮುವ ಸೂಕ್ಷ ್ಮ ಹನಿಗಳು ತ್ವರಿತವಾಗಿ ನೆಲಕ್ಕೆ (ಅಥವಾ ಯಾವುದಾದರೂ ಮೇಲ್ಮೈಗೆ) ಬೀಳುತ್ತವೆ. ಅವುಗಳ ಸ್ಪರ್ಶದಿಂದಲೇ ಸೋಂಕು ಹರಡುತ್ತದೆ ಎಂಬ ನಿರ್ಧಾರಕ್ಕೆ ನಾವು ಬಂದಿದ್ದೆವು,’’ ಎಂದಿದ್ದಾರೆ.
ಇತ್ತ ಡಬ್ಲ್ಯೂಎಚ್‌ಒದ ಸೋಂಕು ತಡೆ ಹಾಗೂ ನಿಯಂತ್ರಣ ಸಮಿತಿಯ ಮುಖ್ಯಸ್ಥರಾದ ಬೆನೆಡಟ್ಟಾ ಅಲ್ಲೆ ಗ್ರಾಂಝಿ, ಗಾಳಿಯ ಮೂಲಕವೂ ವೈರಸ್‌ ಹರಡಬಹುದೆಂಬುದಕ್ಕೆ ಕುರುಹುಗಳಿದ್ದರೂ ಅದು ನಿಶ್ಚಿತವಾಗಿರಲಿಲ್ಲ. ಇದೀಗ ಸಾರ್ವಜನಿಕರು ಹೆಚ್ಚು ಒಡನಾಡುವ ಕಟ್ಟಡಗಳು, ವಿಶೇಷವಾಗಿ ಜನಸಂದಣಿ, ಕಿಟಕಿ-ಬಾಗಿಲುಗಳು ತೆರೆಯದ ಮತ್ತು ವಾತಾನುಕೂಲಿ ವ್ಯವಸ್ಥೆ ಸಮರ್ಪಕವಾಗಿರದ ಎಡೆಗಳಲ್ಲಿ ಈ ವೈರಸ್‌ ಪ್ರಸರಣೆಯ ಸಾಧ್ಯತೆಗಳಿವೆ ಎಂದಿದ್ದಾರೆ. ಈ ವರದಿಯ ಉಲ್ಲೇಖಗಳನ್ನು ಇನ್ನೂ ಹೆಚ್ಚಿನ ಸಾಂದರ್ಭಿಕ ಸಾಕ್ಷಿಗಳೊಂದಿಗೆ ತುಲನೆ ಮಾಡಿ, ಆಮೂಲಾಗ್ರ ವಿಶ್ಲೇಷಣೆ ನಡೆಸಬೇಕು. ಈ ಕಾರ್ಯಗಳಿಗೆ ಡಬ್ಲ್ಯೂಎಚ್‌ಒದ ಬೆಂಬಲವನ್ನು ಸೂಚಿಸಿದ್ದಾರೆ. ಕೊನೆಯದಾಗಿ, ದೈಹಿಕ ಅಂತರದ ಪ್ರಮಾಣವನ್ನು ಬದಲಾಯಿಸುವ ಸಂದರ್ಭ ಬಂದಲ್ಲಿ ಅದನ್ನು ಕಾಪಾಡಿಕೊಳ್ಳುವ ನಿಬಂಧನೆಯನ್ನು ವಿಧಿಸಬೇಕಾಗುತ್ತದೆ. ಈ ಅಂತರವನ್ನು ಕಾಪಾಡಿಕೊಳ್ಳಲಾಗದ ಸ್ಥಳಗಳಲ್ಲಿ, ಮಾಸ್ಕ್‌ಗಳನ್ನು ಧರಿಸಬೇಕೆನ್ನುವ ಕಟ್ಟಳೆಯನ್ನೂ ಹೇರಬೇಕಾಗುತ್ತದೆ. ವಿಶೇಷವಾಗಿ ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್‌ ಧರಿಸುವುದು ಮುಖ್ಯವಾಗುತ್ತದೆ.
ಗಂಭೀರವಾದ ಚರ್ಚೆ ಹುಟ್ಟುಹಾಕಿದ ಈ ವಿವಾದಕ್ಕೆ ತೆರೆ ಬಿದ್ದಿದೆ. ಭಾರತದಲ್ಲಿ ಮಾಸ್ಕ್‌ ಧರಿಸುವ ಕಟ್ಟಳೆ ಈಗಾಗಲೇ ಜಾರಿಯಲ್ಲಿದೆ. ದೈಹಿಕ ಅಂತರ ಕುರಿತ ಬದಲಾವಣೆಗಳಾದಲ್ಲಿ, ಅದನ್ನೂ ಪಾಲಿಸುವುದರ ಮೂಲಕ ವೈರಸ್‌ ಸೋಂಕಿನಿಂದ ನಾವು ರಕ್ಷಿಸಿಕೊಳ್ಳಬಹುದು. ವೈರಸ್‌ ಗಾಳಿಯಲ್ಲಿ ಹರಡುವುದು ಒಂದು ಸಾಧ್ಯತೆಯಷ್ಟೆ. ಗಾಳಿಯಾಡದ ಸ್ಥಳಗಳಲ್ಲಿ, ಹೆಚ್ಚಿನ ಜನರು ಒಗ್ಗೂಡಿದ್ದರೆ ವೈರಸ್‌ ಗಾಳಿಯ ಮೂಲಕ ಪಸರಿಸಬಹುದು. ಈ ಬಗ್ಗೆ ನಾವು ಎಚ್ಚರ ವಹಿಸಬೇಕಷ್ಟೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top