ಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕುಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕು
– 445 ಕೇಸ್ಗಳ ಪೈಕಿ 300 ಮಂದಿಗೆ ರೋಗ ಲಕ್ಷಣವಿಲ್ಲ- ಸೋಂಕಿತರ ಗುರುತಿಸಿ ಚಿಕಿತ್ಸೆ ನೀಡುವುದೇ ಸವಾಲು
ವಿಕ ಬ್ಯೂರೊ ಬೆಂಗಳೂರು: ಅತ್ಯಂತ ವೇಗವಾಗಿ ಎಲ್ಲಕಡೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಯಾವುದೇ ಲಕ್ಷಣಗಳಿಲ್ಲದೆ ಒಳಗಿಂದೊಳಗೆ ಕೊರೆಯುತ್ತಿರುವುದು ಈಗ ಆತಂಕ ಸೃಷ್ಟಿಸಿದೆ. ಗಂಟಲು ನೋವು, ಕೆಮ್ಮು ಮತ್ತು ಜ್ವರ ಇವು ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ದಾಖಲಾದ 445 ಪ್ರಕರಣಗಳ ಪೈಕಿ 300 (67%) ಮಂದಿಗೆ ಇಂಥ ಯಾವ ಲಕ್ಷಣಗಳೂ ಕಂಡುಬಂದಿಲ್ಲ. ಕೇವಲ ರೋಗಿಗಳ ಸಂಪರ್ಕದ ಆಧಾರದಲ್ಲಿ ಪರೀಕ್ಷೆಗೆ ಒಳಪಡಿಸಿದಾಗಲಷ್ಟೇ ಇವರಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಕೇವಲ ಸಂಪರ್ಕಿತರು ಮತ್ತು ರೋಗ ಲಕ್ಷಣ ಹೊಂದಿದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗಿದ್ದರೆ, ಆರೋಗ್ಯವಂತರಂತೆ ಓಡಾಡುತ್ತಿರುವವರ ನಡುವೆಯೂ ಹಲವರಲ್ಲಿ ಕೊರೊನಾ ಸೋಂಕು ಇರಬಹುದೇ ಎಂಬ ಪ್ರಶ್ನೆಯೊಂದು ಕಾಡುತ್ತಿರುವುದು ಆತಂಕಕ್ಕೆ ಕಾರಣ. ಇದುವರೆಗೆ ಲಕ್ಷಣಗಳು ಕಂಡುಬಂದರೆ ಕೂಡಲೇ ನಿರ್ದಿಷ್ಟ ವ್ಯಕ್ತಿಯನ್ನು ಬೇರ್ಪಡಿಸಿ ಐಸೊಲೇಶನ್‌ನಲ್ಲಿಟ್ಟು ಉಳಿದವರಿಗೆ ಸೋಂಕು ತಗುಲದಂತೆ ಕಾಪಾಡುವ ಕೆಲಸ ನಡೆಯುತ್ತಿತ್ತು. ಜತೆಗೆ ಆತನ ಸಂಪರ್ಕಕ್ಕೆ ಬಂದ ಇತರ ವ್ಯಕ್ತಿಗಳು, ಪ್ರದೇಶದ ಮೇಲೆ ನಿಗಾ ಇಡಲಾಗುತ್ತಿತ್ತು. ಆದರೆ, ಸೋಂಕಿನ ಲಕ್ಷಣಗಳೇ ಕಾಣಿಸದಿದ್ದರೆ ಯಾರಿಗೆ ಸೋಂಕು ತಗುಲಿದೆ ಎನ್ನುವುದನ್ನು ಬಾಹ್ಯವಾಗಿ ಗುರುತಿಸುವುದೇ ಕಷ್ಟವಾಗುತ್ತದೆ. ಅವರಿಗೂ ರೋಗದ ಅರಿವಾಗದೆ, ಉಳಿದವರಿಗೂ ಗೊತ್ತಾಗದೆ ಹಲವರಿಗೆ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿವೆ ಎನ್ನುವುದು ಆತಂಕದ ಮೂಲ. ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಸೋಂಕಿತರೆಂಬ ಕಾರಣಕ್ಕೆ ಆಸ್ಪತ್ರೆಯಲ್ಲಿರುವ ಹೆಚ್ಚಿನವರು ಅತ್ಯಂತ ಆರಾಮವಾಗಿದ್ದು ಕನಿಷ್ಠ ಬಳಲಿಕೆಯ ಲಕ್ಷಣವೂ ಇಲ್ಲ. ಯಾವ ದಣಿವಿನ ಕೆಲಸವನ್ನಾದರೂ ಮಾಡಬಲ್ಲಷ್ಟು ಶಕ್ತರಾಗಿದ್ದಾರೆ. ಅಂದರೆ, ಸೋಂಕಿಗೆ ಒಳಗಾದರೂ ಹೆಚ್ಚಿನವರಿಗೆ ಅಪಾಯವಿಲ್ಲ. ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ, ಇತರ ತೀವ್ರ ಆರೋಗ್ಯ ಸಮಸ್ಯೆಗಳಿಲ್ಲದ ಯುವಜನರು ಈ ವಿಭಾಗಕ್ಕೆ ಬರುತ್ತಾರೆ. ಸಾಮಾನ್ಯವಾಗಿ ನಿರ್ದಿಷ್ಟ ವ್ಯಕ್ತಿಗೆ ಸೋಂಕು ತಗುಲಿದಾಗ ಅವನ ಸಂಪರ್ಕಕ್ಕೆ ಬಂದವರೆಂದು ಸಂಶಯಿಸಲಾದ ವ್ಯಕ್ತಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಯಾವುದೇ ಲಕ್ಷಣಗಳು ಕಾಣಿಸದೆ ಇದ್ದಾಗ ಅವರನ್ನು ಬಿಡುಗಡೆ ಮಾಡಿದ್ದೂ ಇದೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಈ ಕ್ವಾರಂಟೈನ್ ಅಷ್ಟೆ ಸಾಕಾಗುವುದಿಲ್ಲ. ಯಾಕೆಂದರೆ, ರೋಗ ಲಕ್ಷಣಗಳೇ ಇಲ್ಲದೆ ಕೊರೊನಾ ವೈರಸ್ ದೇಹದಲ್ಲಿ ನೆಲೆಯೂರಿರುವ ಸಾಧ್ಯತೆಗಳಿರುವುದರಿಂದ ಸಾಮೂಹಿಕ ಪರೀಕ್ಷೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ರೋಗ ಲಕ್ಷಣಗಳು ಗೊತ್ತಾಗದೆ ಇರುವುದರಿಂದ ಹೊರನೋಟಕ್ಕೆ ದೊಡ್ಡ ಸಮಸ್ಯೆಯೇನೂ ಇಲ್ಲ. ಕೆಲವು ದಿನಗಳಲ್ಲಿ ವ್ಯಕ್ತಿ ಅವನಿಗೇ ಗೊತ್ತಾಗದಂತೆ ರೋಗಮುಕ್ತನೂ ಆಗಬಹುದು. ಆದರೆ, ಪಾಸಿಟೀವ್ ಆಗಿದ್ದ ಅವಧಿಯಲ್ಲಿ ಆತ ಅದೆಷ್ಟೋ ಮಂದಿಗೆ ರೋಗವನ್ನು ಪಸರಿಸಿರುವ ಸಾಧ್ಯತೆ ಹೆಚ್ಚಿರುತ್ತದೆ. ಅದು ಇನ್ನೊಂದಷ್ಟು ಸರಣಿ ಸಂಪರ್ಕಕ್ಕೆ ಕಾರಣವಾಗಿ ಸಮುದಾಯದತ್ತ ತಿರುಗಿದರೆ ಅಪಾಯ ಉಂಟಾಗಬಹುದು ಎನ್ನುವುದು ರೋಗ ಲಕ್ಷಣವಿಲ್ಲದಿರುವ ಪ್ರಕರಣಗಳ ಬಗ್ಗೆ ಇರುವ ದೊಡ್ಡ ಆತಂಕ. ಆದರೆ, ಅದೇ ಹೊತ್ತಿಗೆ, ವೈರಸ್ ದಾಳಿ ನಡೆಸಿದರೂ ಆತಂಕಪಡಬೇಕಾಗಿಲ್ಲ ಎಂಬ ಸಂದೇಶವನ್ನೂ ನೀಡುತ್ತದೆ.
ಮಂಡ್ಯದ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕಾಳಪ್ಪನವರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಅವರ ಪ್ರಕಾರ, ಶೇ. 80 ಪ್ರಕರಣಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜ್ವರ, ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಔಷಧವೂ ಇಲ್ಲದೆ ವಾಸಿಯಾಗುತ್ತದೆ. ಇದಕ್ಕೆ ಮೈಲ್ಡ್ ಎನ್ನುತ್ತಾರೆ. ಶೇ.10 ರಿಂದ 15 ಪ್ರಕರಣಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇವರಿಗೆ ಚಿಕಿತ್ಸೆ ಕಡ್ಡಾಯ. ಇದನ್ನು ಮಾಡರೇಟ್ ಎನ್ನುತ್ತಾರೆ. ಶೇ. 5ರಷ್ಟು ಪ್ರಕರಣಗಳು ಮಾತ್ರ ತೀವ್ರ ರೂಪ ಪಡೆದು ಉಸಿರಾಟಕ್ಕೆ ತೊಂದರೆಯಾಗಬಹುದು. ಈ ತೀವ್ರ ಪ್ರಕರಣದಲ್ಲಿ ನೂರಲ್ಲಿ 3 ಜನರಲ್ಲಿ ಮಾತ್ರ ಸಾವು ಸಂಭವಿಸಬಹುದು.
ಎಲ್ಲರೂ ನರಳಾಡಲ್ಲ: ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿರುವ ಯುವಜನರು (20 ರಿಂದ 40 ವರ್ಷ ವಯಸ್ಸಿನವರು) ಹಾಗೂ ಶ್ವಾಸಕೋಶದ ಸಮಸ್ಯೆ ಇಲ್ಲದ 16 ವರ್ಷದೊಳಗಿನ ಮಕ್ಕಳು ಕೂಡ ಸೋಂಕಿಗೊಳಗಾಗಿದ್ದಾರೆ. ಈ ಪೈಕಿ ಹಲವರು ಅತಿ ಕಡಿಮೆ ರೋಗ ಲಕ್ಷ ಣಗಳನ್ನು ಹೊಂದಿದ್ದಾರೆ.‘‘ಒಟ್ಟು ಸೋಂಕಿತರಲ್ಲಿ ಶೇ.4ರಿಂದ 5ರಷ್ಟು ಮಂದಿ ಮಾತ್ರ ಶ್ವಾಸಕೋಶದ ತೊಂದರೆಗಳಿಗೆ ಒಳಗಾಗಿ ಗಂಭೀರ ಸ್ಥಿತಿಗೆ ಹೋಗುತ್ತಾರೆ. ಅಂತಹ ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗುತ್ತದೆ. ಬಹುತೇಕ ಮಂದಿಯಲ್ಲಿ ಸಣ್ಣ ಜ್ವರ, ನ್ಯುಮೋನಿಯಾ, ಕೆಮ್ಮು ಮಾತ್ರ ಕಾಣಿಸಿಕೊಳ್ಳುತ್ತದೆ,’’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ಸಂಜಯ್ ತಿಳಿಸಿದ್ದಾರೆ.
ಕುತೂಹಲ ಮೂಡಿಸಿದ್ದ ಭಟ್ಕಳ ಪ್ರಕರಣ ಏಪ್ರಿಲ್ 8ರಂದು ಭಟ್ಕಳದಲ್ಲಿ ಗರ್ಭಿಣಿಗೆ ಸೋಂಕು ದೃಢಪಟ್ಟಿತ್ತು. ಆಕೆಯ ಪತಿ ದುಬೈನಿಂದ ಬಂದಿದ್ದರಿಂದ ಅವರ ಮೂಲಕ ಸೋಂಕು ಹರಡಿರಬಹುದು ಎಂಬ ಸಂಶಯವಿತ್ತು. ಆದರೆ, ಅಚ್ಚರಿ ಎಂಬಂತೆ ಗಂಡನ ಪರೀಕ್ಷಾ ವರದಿ ನೆಗೆಟಿವ್ ಬಂದಿತ್ತು. ಗಂಡನಲ್ಲಿ ಕೋವಿಡ್ 19 ಸುಪ್ತವಾಗಿತ್ತೇ? ಅಥವಾ ಪರೀಕ್ಷೆ ನಡೆಸುವ ವೇಳೆ ಸಂಪೂರ್ಣ ಗುಣವಾಗಿತ್ತೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಉತ್ತರ ಕನ್ನಡದಲ್ಲಿ 11 ಮಂದಿಯಲ್ಲಿ 6 ಮಂದಿಗೆ ಯಾವುದೇ ಲಕ್ಷಣ ಕಾಣಿಸಿಲ್ಲ.
ಕ್ರಿಕೆಟ್ ಆಡ್ತಿದ್ದವ ಪಾಸಿಟಿವ್! ಕಲಬುರಗಿಯಲ್ಲಿ ಸಂಜೆ ಹೊತ್ತು ಬಯಲಿನಲ್ಲಿ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಸುಮಾರು 34 ವರ್ಷದ ಯುವಕ ಸಿಕ್ಸರ್, ಬೌಂಡರಿ ಬೀಸುತ್ತಿದ್ದ. ಆಗ ಯಾರೋ ಒಬ್ಬರು, ‘ಅವನು ಇತ್ತೀಚೆಗಷ್ಟೇ ಮುಂಬಯಿನಿಂದ ಬಂದವನಲ್ವೇ’ ಅಂತ ಹೇಳಿದರು. ಕೂಡಲೇ ಗುಸುಗುಸು ಆರಂಭವಾಯಿತು. ಸ್ವಲ್ಪ ಹೊತ್ತಿನಲ್ಲೇ ಆರೋಗ್ಯ ಕಾರ್ಯಕರ್ತರ ತಂಡವೊಂದು ಅಲ್ಲಿಗೆ ಬಂದು ಆ ಯುವಕನನ್ನು ಕರೆದೊಯ್ದಿತು. ಮರುದಿನ ಸಂಜೆ ಆತನ ಗಂಟಲ ಸ್ರಾವದ ವರದಿ ಬಂದಾಗ ಅವನು ಕೊರೊನಾ ಪಾಸಿಟಿವ್ ಆಗಿದ್ದ.
ಮಂಡ್ಯ, ಧಾರವಾಡ 100% ಲಕ್ಷಣವಿಲ್ಲ! ಬೆಳಗಾವಿಯಲ್ಲಿ ಪತ್ತೆಯಾದ 43 ಕೇಸುಗಳ ಪೈಕಿ 41 ಮಂದಿಗೆ (95%), ವಿಜಯಪುರದಲ್ಲಿ 37ರಲ್ಲಿ 35 ಮಂದಿಗೆ(94.5%), ದಕ್ಷಿಣ ಕನ್ನಡದಲ್ಲಿ 17ರಲ್ಲಿ 14 (82%) ಯಾವ ರೋಗ ಲಕ್ಷಣವೂ ಇರಲಿಲ್ಲ. ಮಂಡ್ಯದಲ್ಲಂತೂ ಎಲ್ಲ 14 ಕೇಸುಗಳಲ್ಲಿ ಯಾವುದೇ ರೋಗ ಲಕ್ಷಣ ಕಾಣಿಸಿಲ್ಲ. ಧಾರವಾಡದಲ್ಲೂ ಏಳಕ್ಕೆ ಏಳು ಲಕ್ಷಣರಹಿತ.
ಮೊದಲೂ ಇಲ್ಲ ನಂತರವೂ ಇಲ್ಲ ಈಗ ವೈಯಕ್ತಿಕ ಸಂಪರ್ಕದ ನೆಲೆಯಲ್ಲಿ ಪ್ರಕರಣದ ಟ್ರೇಸಿಂಗ್ ಮಾಡುತ್ತಿರುವುದರಿಂದ ಸಂಪರ್ಕಿತ ವ್ಯಕ್ತಿಗಳು ಲಕ್ಷಣ ಕಾಣಿಸಿ ಕೊಳ್ಳುವ ಮೊದಲೇ ಸಿಕ್ಕಿಬಿಡುವ ಸಾಧ್ಯತೆ ಇರುತ್ತದೆ. ಹಾಗಂತ, ಅವರಲ್ಲಿ ಕೋವಿಡ್ 19 ದೃಢಪಟ್ಟ ಬಳಿಕವೂ ಯಾವುದೇ ಲಕ್ಷಣ ಕಾಣಿಸಿಕೊಳ್ಳದೆ ಇರುವುದು ಆತಂಕಕಾರಿಯಾಗಿದೆ.
ವಹಿಸಬೇಕಾದ ಎಚ್ಚರಿಕೆ- ಹೆಚ್ಚು ಇಮ್ಯುನಿಟಿ ಇರುವವರಿಗೆ ಸೋಂಕು ಬಂದರೂ ಅಪಾಯವಿಲ್ಲ.- ಹಿರಿಯರು ಮತ್ತು ಮಕ್ಕಳಿಗೆ ಸೋಂಕು ಹರಡದಂತೆ ಕಾಯಬೇಕು.- ಮಧುಮೇಹ, ರಕ್ತದೊತ್ತಡ, ಶ್ವಾಸಕೋಶ ಸಮಸ್ಯೆ ಇದ್ದರೆ ಮನೆಯೊಳಗೇ ಇರಿ- ಹೊರಗಡೆ ಹೋಗಿ ಬರುವವರು ಮನೆಯವರಿಂದ ಅಂತರ ಕಾಯುವುದು ಕಡ್ಡಾಯ- ಹೊರಗೆ ಹೋದಾಗಲೂ ಮಾಸ್ಕ್ ಧರಿಸಿ, ಅಂತರ ಕಾಯುವುದು ಮಸ್ಟ್- ಹಿರಿಯರನ್ನು, ಮಕ್ಕಳನ್ನು ತುಂಬ ಹತ್ತಿರದಿಂದ ಮಾತನಾಡಿಸದಿರುವುದು ಉತ್ತಮ
ಪತ್ತೆಗೆ ದಾರಿ ಯಾವುದು?- ಪೂಲ್ ಟೆಸ್ಟಿಂಗ್ ಮಾದರಿ ಅನುಸರಿಸಬಹುದು. ಒಂದು ನಿರ್ದಿಷ್ಟ ಪ್ರದೇಶದಲ್ಲಿ 64 ಮಂದಿಯ ಗಂಟಲ ದ್ರವವನ್ನು ಒಂದೇ ಟೆಸ್ಟ್- ಟ್ಯೂಬ್‌ನಲ್ಲಿ ಹಾಕಿ ಪರೀಕ್ಷೆ ಮಾಡಲಾಗುತ್ತದೆ. ಪಾಸಿಟೀವ್ ಬಂದರೆ ಎಲ್ಲರ ಪ್ರತ್ಯೇಕ ಪರೀಕ್ಷೆ ನಡೆಯುತ್ತದೆ.- ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹರ್ಡ್ ಇಮ್ಯುನಿಟಿ ತಂತ್ರ ಬಳಸಬಹುದು.
ಎಸಿಂಪ್ಟಮ್ಯಾಟಿಕ್ ಪತ್ತೆಗೆ ಕ್ರಮ: ಎಸಿಂಪ್ಟಮೆಟಿಕ್ ಅಥವಾ ಅತಿ ಕಡಿಮೆ ಲಕ್ಷ ಣಗಳಿರುವ ಸೋಂಕಿತರ ಪತ್ತೆಗೆ ಆರೋಗ್ಯ ಇಲಾಖೆ ಫಿವರ್ ಕ್ಲಿನಿಕ್‌ಗಳ ಮೂಲಕ ಪ್ರಯತ್ನಿಸುತ್ತಿದೆ. ಇಲ್ಲಿಗೆ ಸಣ್ಣ ಜ್ವರ ಮತ್ತು ಒಣ ಕೆಮ್ಮಿನೊಂದಿಗೆ ಬರುವವರ ಮೇಲೂ ನಿಗಾ ಇಡಲಾಗುತ್ತದೆ.
ಮೊದಲ ಪ್ರಕರಣವೇ ಲಕ್ಷಣ ರಹಿತ! ರಾಜ್ಯದ ಮೊದಲ ಬಾರಿಗೆ ಸೋಂಕು ಕಂಡ ಬೆಂಗಳೂರಿನ 40 ವರ್ಷದ ಎಂಜಿನಿಯರ್ ಪತ್ನಿ, ಮಗಳು ಕೂಡಾ ಯಾವುದೇ ಲಕ್ಷಣಗಳಿಲ್ಲದೆ ‘ಎಸಿಂಪ್ಟಮೆಟಿಕ್’ ಆಗಿದ್ದರು.