ಚೀನಾ ಆ್ಯಪ್‌ ಬ್ಯಾನ್‌ ಟೆಕ್‌ ಕಿಂಗ್‌ ಆಗುವ ಕನಸಿಗೆ ಕೊಳ್ಳಿ

ವಿಶ್ವದ ತಂತ್ರಜ್ಞಾನ ವಲಯದ ಕಿಂಗ್‌ ಅನಿಸಿಕೊಳ್ಳುವ ಚಿಂತನೆ ಚೀನಾದ್ದಾಗಿತ್ತು. ಆದರೆ 59 ಆ್ಯಪ್‌ಗಳನ್ನು ನಿಷೇಧ ಮಾಡುವ ಮೂಲಕ ಭಾರತ ಚೀನಾವನ್ನು ಮಣಿಸುವ ಕ್ರಿಯೆಗಳ ಸರಪಟಾಕಿಗೆ ಬೆಂಕಿ ಹಚ್ಚಿದೆ. ಇದು ಚೀನಾದ ಕನಸಿಗೆ ಕೊಳ್ಳಿ ಇಡುವ ಕಾರ್ಯದ ಆರಂಭ ಅಷ್ಟೇ.

ಕಳಪೆ ಮಾಲುಗಳ ಕಿಂಗ್‌
1980 ಹಾಗೂ 90ರ ದಶಕದಲ್ಲಿ ಅಮೆರಿಕ, ಜಗತ್ತಿನ ಟೆಕ್ನಾಲಜಿ ಕಿಂಗ್‌ ಎನಿಸಿಕೊಂಡಿತ್ತು. ನಂತರದ ದಶಕಗಳಲ್ಲಿ ಚೀನಾ ಆ ಸ್ಥಾನಕ್ಕೆ ಲಗ್ಗೆ ಹಾಕಿತು. ಅಮೆರಿಕ ಮುಂತಾದ ಮುಂದುವರಿದ ದೇಶಗಳಿಂದ ತಂತ್ರಜ್ಞಾನವನ್ನು ಅಪಹರಿಸಿ ಅಥವಾ ಅನುಕರಿಸಿ ಕಳಪೆ ಮಾಲುಗಳನ್ನು ತಯಾರಿಸಿ, ಅಗ್ಗದ ದರದಲ್ಲಿ ಜಗತ್ತಿಗೆ ಪೂರೈಕೆ ಮಾಡಿ ಅಧಿಪತ್ಯ ಸ್ಥಾಪಿಸಲು ಮುಂದಾಯಿತು. ಉದಾಹರಣೆಗೆ ಅಮೆರಿಕದ ಆ್ಯಪಲ್‌ ಗುಣಮಟ್ಟದ ಐಫೋನ್‌ ಮುಂತಾದ ಉತ್ಪನ್ನಗಳ ಮೂಲಕ ಖ್ಯಾತಿ ಗಳಿಸಿದರೆ, ಅದನ್ನೇ ಅನುಕರಿಸಿದ ಚೀನಾದ ಹಲವು ಕಂಪನಿಗಳು ತಮ್ಮ ಅಗ್ಗದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದವು. ಇದು ಅಮೆರಿಕದ ಕಂಪನಿಗಳಿಗೂ ಕಿರಿಕಿರಿ ಉಂಟುಮಾಡಿದೆ.

ಹೇಗೆ ಮಾಸ್ಟರ್‌ ಸ್ಟ್ರೋಕ್‌?
59 ಚೀನೀ ಆ್ಯಪ್‌ಗಳನ್ನು ಬ್ಯಾನ್‌ ಮಾಡಿದ ಭಾರತದ ಕ್ರಮ ಒಂದು ಮಾಸ್ಟರ್‌ ಸ್ಟ್ರೋಕ್‌ ಎಂದೇ ಹೇಳಬಹುದು. ಇದರಿಂದ ಆಗುವ ಪರಿಣಾಮಗಳು ಹಲವು. 1. ಭಾರತದಲ್ಲಿ ಈಗ 50 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದಾರೆ. 2022ರ ಹೊತ್ತಿಗೆ 86 ಕೋಟಿ ಮುಟ್ಟಲಿದೆ ಎಂದು ಅಧ್ಯಯನಗಳು ಹೇಳುತ್ತವೆ. ಚೀನಾ ಆ್ಯಪ್‌ಗಳು ಇಷ್ಟೊಂದು ದೊಡ್ಡ ಮಾರುಕಟ್ಟೆಯನ್ನು ಒಂದೇ ಏಟಿಗೆ ಕಳೆದುಕೊಂಡಿವೆ. 2. ಯಾವುದೇ ಆರ್ಥಿಕ ದುಷ್ಪರಿಣಾಮವನ್ನು ಎದುರಿಸಿಯೂ ಚೀನಾವನ್ನು ಮಣಿಸಲು ತಾನು ಸಿದ್ಧ ಎಂಬ ಎಚ್ಚರಿಕೆಯನ್ನು ಭಾರತ ರವಾನಿಸಿದಂತಾಗುತ್ತದೆ. 3. ಈ ಕಂಪನಿಗಳ ಒತ್ತಡದಿಂದಲಾದರೂ ಚೀನಾ ಸರಕಾರ, ಭಾರತದ ಮೇಲೆ ಹಲ್ಲು ಮಸೆಯುವ ತನ್ನ ನೀತಿಯನ್ನು ಕೈಬಿಡಬೇಕಾಗಬಹುದು. 4. ಭಾರತದ ನಡೆಯನ್ನೇ ಮಾದರಿಯಾಗಿ ಪರಿಗಣಿಸಿದ ಇತರ ದೇಶಗಳು ಕೂಡ ಚೀನಾ ಆ್ಯಪ್‌ಗಳನ್ನು ಬ್ಯಾನ್‌ ಮಾಡಬಹುದು. ಇದರಿಂದ ಚೀನಾದ ಜಾಗತಿಕ ಮಾರುಕಟ್ಟೆ ಏಟು ತಿನ್ನಬಹುದು.

ರಸ್ತೆ ನಿರ್ಮಾಣದಲ್ಲೂ ಚೀನಾ ಇಲ್ಲ
ರಸ್ತೆ ಸಾರಿಗೆ, ಕಿರು- ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲೂ ಇನ್ನು ಮುಂದೆ ಚೀನಾದ ಕಂಪನಿಗಳಿಗೆ ಅವಕಾಶ ನೀಡುವ ಪ್ರಸಕ್ತಿ ಇಲ್ಲ. ಈಗ ಜಾರಿಯಲ್ಲಿರುವ ಹೆದ್ದಾರಿ ಯೋಜನೆಗಳಲ್ಲೂ ಯಾವುದಾದರೂ ಕಂಪನಿ ಚೀನಾದ ಜೊತೆಗೆ ಜಂಟಿ ಒಪ್ಪಂದ ಹೊಂದಿದ್ದರೆ ಅದನ್ನು ಕೈ ಬಿಡಲಾಗುವುದು. ಅದರ ಬದಲು ದೇಶೀಯ ಸಂಸ್ಥೆಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಸಣ್ಣ- ಮಧ್ಯಮ ಕೈಗಾರಿಕೆ ಸಚಿವ ನಿತಿನ್‌ ಗಡ್ಕರಿ, ಚೀನಾ ವಿರುದ್ಧದ ಸರಕಾರದ ನೀತಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವುದನ್ನು ಸ್ಪಷ್ಟಪಡಿಸಿದ್ದಾರೆ.

ಚೀನಾ ಸಾಮಗ್ರಿ ಬಂದರುಗಳಲ್ಲಿ ಬಾಕಿ
ಈ ನಡುವೆ ಚೀನಾದಿಂದ ಆಮದಾದ ಸಾವಿರಾರು ಕಂಟೈನರ್‌ಗಳನ್ನು ಹೊತ್ತ ಹಡಗುಗಳು ಭಾರತದ ಬಂದರುಗಳಲ್ಲಿ ಎರಡು ವಾರದಿಂದ ಬೀಡುಬಿಟ್ಟಿದ್ದು, ಇವುಗಳಿಂದ ಸಾಮಗ್ರಿಗಳನ್ನು ಇಳಿಸಲು ಸರಕಾರ ಅವಕಾಶ ನೀಡಿಲ್ಲ. ಇವು ಚೀನಾ, ಮಕಾವು, ಹಾಂಕಾಂಗ್‌ಗಳಿಂದ ಬರುತ್ತಿರುವ ಸಾಮಗ್ರಿಗಳು. ಇದರಲ್ಲಿ ಚೀನಾದ ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಿಕಲ್‌ ಉಪಕರಣ, ಸಿದ್ಧ ಉಡುಪುಗಳು, ಸಿದ್ಧ ಆಹಾರ, ಔಷಧಗಳು ಮತ್ತಿತರ ಸಾಮಗ್ರಿಗಳಿವೆ. ಜರ್ಮನಿ, ಫ್ರಾನ್ಸ್‌, ಕೊರಿಯಾ ಮುಂತಾದ ಕಡೆಗಳಿಂದ ಚೀನಾ ಮಾರ್ಗವಾಗಿ ಬಂದಿರುವ ಸಾಮಗ್ರಿಗಳಿಗೂ ದೇಶದೊಳಗೆ ಬರಲು ಅನುಮತಿ ಸಿಕ್ಕಿಲ್ಲ. ಚೀನಾದ ಈ ವ್ಯಾಪಾರವನ್ನು ತಡೆಹಿಡಿಯುವುದರಿಂದ ಚೀನಾಕ್ಕೆ ಆಗುವ ನಷ್ಟವೆಂದರೆ- ಚೀನಾ ಸಾಮಗ್ರಿಗಳಿಗೆ ಇರುವ ಬೇಡಿಕೆ ತಗ್ಗಬಹುದು. ಅಷ್ಟು ಸಮಯ ಕಾಯುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿ ನಷ್ಟ ಹೆಚ್ಚುತ್ತದೆ. ಇತರ ದೇಶಗಳು ಚೀನಾದಲ್ಲಿ ಸಾಮಗ್ರಿ ಸಿದ್ಧಪಡಿಸಿ ಭಾರತಕ್ಕೆ ಕಳಿಸಲು ಹಿಂದೇಟು ಹಾಕುವುದರಿಂದ ಚೀನಾದ ಕೈಗಾರಿಕೆಗಳಿಗೆ ನಷ್ಟವಾಗುತ್ತದೆ. ಇದು ಚೀನಾದ ಮೇಲೆ ಭಾರತ ನಡೆಸಿರುವ ಇನ್ನೊಂದು ಒತ್ತಡ ತಂತ್ರ.

ಅಮೆರಿಕದಲ್ಲಿ ಹುವೈ ನಿಷೇಧ
ಭಾರತದ ನಿಷೇಧ ಕ್ರಮದ ಬೆನ್ನಲ್ಲೇ, ಅಮೆರಿಕ ಕೂಡ ಚೀನಾ ಮೂಲದ ಹುವೈ ಟೆಕನಾಲಜೀಸ್‌ ಕಂಪನಿ ಹಾಗೂ ಝಡ್‌ಟಿಇ ಕಾರ್ಪೊರೇಶನ್‌ಗಳನ್ನು ‘ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ’ ಎಂದು ಹೆಸರಿಸಿ, ಇವುಗಳಿಂದ ದೂರ ಉಳಿಯುವಂತೆ ಹೇಳಿದೆ. ಈ ಎರಡು ಕಂಪನಿಗಳು ಅಮೆರಿಕದ ಶೇ.30 ಪ್ರಮಾಣದ ತಂತ್ರಜ್ಞಾನೋಪಕರಣಗಳನ್ನು ಹಾಗೂ ಮೊಬೈಲ್‌ ಬಿಡಿಭಾಗಗಳನ್ನು ಪೂರೈಸುತ್ತಿದ್ದವು. ಇವು ಚೀನೀ ಸರಕಾರಕ್ಕೆ ಅತ್ಯಂತ ಆಪ್ತ ಕಂಪನಿಗಳಾಗಿದ್ದು, ಅಮೆರಿಕದ ನಾಗರಿಕರ ಡೇಟಾವನ್ನು ಚೀನಾಕ್ಕೆ ಕದ್ದು ಸಾಗಿಸುತ್ತಿವೆ ಎಂದು ಆರೋಪಿಸಲಾಗಿತ್ತು.

ಇತರ ದೇಶಗಳಲ್ಲೂ ನಿಷೇಧ ಕೂಗು
ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯ ಮುಂತಾದ ಮುಂದುವರಿದ ಹಾಗೂ ವಾಣಿಜ್ಯ ಬಲಿಷ್ಠ ದೇಶಗಳಲ್ಲಿ ಚೀನಾದ ತಂತ್ರಜ್ಞಾನ ಉತ್ಪನ್ನಗಳನ್ನು ನಿರ್ಬಂಧಿಸುವ ಕೂಗು ಎದ್ದಿದೆ. ಅಮೆರಿಕದಲ್ಲಿ ಚೀನಾ ಮೂಲದ ಭದ್ರತಾ ನಿಗಾ ಸಿಸಿಟಿವಿ ಕಂಪನಿ ಹಿಕ್‌ವಿಷನ್‌ ಹಾಗೂ ಇನ್ನಿತರ 19 ಕಂಪನಿಗಳ ಉತ್ಪನ್ನಗಳನ್ನು ಸರಕಾರಿ ಸಂಸ್ಥೆಗಳು ಖರೀದಿಸುವುದನ್ನು ನಿಷೇಧಿಸಲಾಗಿದೆ. ಆಸ್ಪ್ರೇಲಿಯ ಮತ್ತ ಬ್ರಿಟನ್‌ಗಳು ಕೂಡ ಹಿಕ್‌ವಿಷನ್‌ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಚೀನಾ ಮೂಲದ ಯಾವುದೇ ಕಂಪನಿ ಭದ್ರತಾ ಉಪಕರಣಗಳಿಂದ ಅಪಾಯವಿದೆ; ಇವು ಚೀನಾ ಸೈನ್ಯಕ್ಕೆ ಆಯಾ ದೇಶದ ರಹಸ್ಯಗಳನ್ನು ಕದ್ದು ಸಾಗಿಸಬಲ್ಲವು ಎಂಬ ಕಳವಳ ವ್ಯಕ್ತವಾಗಿದೆ.

ಮೂರು ಕಂಪನಿಗಳಿಗೆ ದೊಡ್ಡ ಏಟು
ಭಾರತದ ಆ್ಯಪ್‌ ಬ್ಯಾನ್‌ನಿಂದ ದೊಡ್ಡ ಏಟು ಬಿದ್ದಿರುವುದು ಚೀನಾದ ಮೂರು ಕಂಪನಿಗಳಿಗೆ. ಬೈಟ್‌ಡ್ಯಾನ್ಸ್‌ , ಅಲಿಬಾಬಾ ಹಾಗೂ ಟೆನ್ಸೆಂಟ್‌. ಅಲಿಬಾಬ ಆನ್‌ಲೈನ್‌ ಶಾಪಿಂಗ್‌ ಮಳಿಗೆಯಾಗಿದ್ದು, ಭಾರತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಐವತ್ತು ಕೋಟಿ ಮಂದಿಯನ್ನು ತಲುಪುವ ಗುರಿ ಹೊಂದಿತ್ತು. ಬೈಟ್‌ಡ್ಯಾನ್ಸ್‌ ಕಂಪನಿಯ ಟಿಕ್‌ಟಾಕ್‌ ವಿಡಿಯೋ ಆ್ಯಪ್‌ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, 20 ಲಕ್ಷ ಡೌನ್‌ಲೋಡ್‌ಗಳನ್ನು ಕಂಡಿತ್ತು. ಇನ್ನು ಮುಂದೆ ಡೌನ್‌ಲೋಡ್‌ಗೆ ಅದು ಸಿಗುವುದಿಲ್ಲ ಹಾಗೂ ಈಗಾಗಲೇ ಡೌನ್‌ಲೋಡ್‌ ಮಾಡಿಕೊಂಡವರಿಗೂ ಅಪ್‌ಡೇಟ್‌ ಆಗಲಾರದು. ಟೆನ್ಸೆಂಟ್‌ ಕಂಪನಿಯ ಹಲವು ಹೂಡಿಕೆಗಳಿಗೂ ಬ್ಯಾನ್‌ನಿಂದ ಧಕ್ಕೆಯಾಗಿದೆ. ಈ ಮೂರೂ ಕಂಪನಿಗಳೂ, ಚೀನಾ ಸರಕಾರ ಅಮೆರಿಕ ಮೂಲದ ಫೇಸ್‌ಬುಕ್‌, ಗೂಗಲ್‌ ಮುಂತಾದ ಕಂಪನಿಗಳಿಗೆ ದೇಶದೊಳಗೆ ಪ್ರವೇಶವಿಲ್ಲದಂತೆ ಮಾಡಿರುವ ‘ಚೀನಾ ಗೋಡೆ’ಯ ಲಾಭವನ್ನು ಇದುವರೆಗೆ ಪಡೆದು ಚೀನಾದೊಳಗೆ ಸಾಮ್ರಾಜ್ಯ ಕಟ್ಟಿದ್ದವು. ಈಗ ಅವು ‘ಭಾರತ ಗೋಡೆ’ಯ ಮುಂದೆ ಕಂಗಾಲಾಗಬೇಕಾಗಿದೆ.

ಚೀನಾದ ಎಐ ಬೆಳವಣಿಗೆಗೆ ಧಕ್ಕೆ
ತಂತ್ರಜ್ಞನ ವಲಯದಲ್ಲಿ ಮುಂದಿನ ದೊಡ್ಡ ಬೆಳವಣಿಗೆ ಎಂದರೆ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ (ಎಐ) ಅಥವಾ ಕೃತಕ ಬುದ್ಧಿಮತ್ತೆ. ಇದು ಕೋಟ್ಯಂತರ ಗ್ರಾಹಕರ ಹಾಗೂ ನಾಗರಿಕರ ಬೇಡಿಕೆ ಒಲವು ನಿಲುವುಗಳನ್ನು ಆಧರಿಸಿ ತಯಾರಾಗುವ ತಂತ್ರಜ್ಞಾನ. ಇದಕ್ಕೆ ಗ್ರಾಹಕರ ಡೇಟಾ ಅಗತ್ಯ. ಭಾರತ ಇಂಥ ಡೇಟಾ ಚೀನಾದ ಕೈ ಸೇರುವುದನ್ನು ನಿರ್ಬಂಧಿಸಿರುವುದರಿಂದ, ಭಾರತದ ಮಾರುಕಟ್ಟೆಯ ಒಲವುಗಳನ್ನಾಧರಿಸಿ ಚೀನಾ ತನ್ನ ಮುಂದಿನ ಎಐ ಬೆಳವಣಿಗೆ ಮಾಡದಂತೆ ತಡೆ ಹಾಕಿದಂತಾಗಿದೆ.

5ಜಿ ಬೆಳವಣಿಗೆಗೆ ನಿರ್ಬಂಧ
ಮುಂದಿನ ಒಂದೆರಡು ವರ್ಷದಲ್ಲಿ ಭಾರತ 5ಜಿ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕಿದೆ. ಹುವೈ, ಝಡ್‌ಟಿಇ ಮತ್ತಿತರ ಕಂಪನಿಗಳು ಇಂಟರ್‌ನೆಟ್‌ ಸೇವೆ ಉಪಕರಣಗಳನ್ನು ಹಾಗೂ ಮೊಬೈಲ್‌ ಬಿಡಿಭಾಗಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತಿದ್ದವು. ಅಮೆರಿಕ ಇದನ್ನು ನಿರ್ಬಂಧಿಸಿರುವುದರಿಂದ, ಭಾರತವೂ ಸದ್ಯದಲ್ಲೇ ಇವುಗಳಿಂದ ಕಳಚಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಭಾರತದ 5ಜಿ ತಂತ್ರಜ್ಞಾನ ಚೀನಾದ ಹಂಗಿನಿಂದ ಮುಕ್ತವಾಗಿರಲಿದೆ.

ಯಾವ ದೇಶ ಸೂಚಿಸಿ
ಭಾರತ ಸರಕಾರ ದೇಶದೊಳಗೆ ಕಾರಾರ‍ಯಚರಿಸುವ ಎರಡು ದೊಡ್ಡ ಆನ್‌ಲೈನ್‌ ವಾಣಿಜ್ಯ ಮಳಿಗೆಗಳಾದ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ಗಳಿಗೆ, ‘ಸಾಮಗ್ರಿಗಳ ಮೇಲೆ ಅವು ಯಾವ ದೇಶದಿಂದ ಬಂದಿವೆ ಎಂದು ಬರೆಯಬೇಕು’ ಎಂದು ಸೂಚಿಸಿದೆ. ಇದು ಚೀನಾದ ಸಾಮಗ್ರಿಯನ್ನು ದೂರವಿಡಲು ಪ್ರಜೆಗಳಿಗೆ ಪರೋಕ್ಷವಾಗಿ ನೀಡುತ್ತಿರುವ ಪ್ರೋತ್ಸಾಹ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top