ಉದ್ಯಮಸ್ನೇಹಿ ಕರ್ನಾಟಕ

– ಉದ್ಯಮ ಸ್ಥಾಪನೆ ಇನ್ನಷ್ಟು ಸರಳ | ಗ್ರಾಮಾಂತರಕ್ಕೂ ಕೈಗಾರಿಕೆ ವಿಸ್ತರಣೆ
– ಕೊರೊನಾ ಸಂಕಷ್ಟ ಸದವಕಾಶವಾಗಿ ಬಳಕೆ | ಸಚಿವ ಜಗದೀಶ್ ಶೆಟ್ಟರ್ ಘೋಷಣೆ

(ಕೈಗಾರಿಕಾ ಪುನಶ್ಚೇತನ ಚಿಂತನ-ಮಂಥನ)

ವಿಕ ಸುದ್ದಿಲೋಕ ಬೆಂಗಳೂರು.
ಕೊರೊನಾ ಸಂಕಷ್ಟ ಕಾಲವನ್ನು ಕೈಗಾರಿಕಾಭಿವೃದ್ಧಿಯ ಸದವಕಾಶವಾಗಿ ಬಳಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಶೀಘ್ರವೇ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸುವ ಮೂಲಕ ರಾಜ್ಯವನ್ನು ದೇಶದ ನಂಬರ್ ಒನ್ ಉದ್ಯಮಸ್ನೇಹಿ ರಾಜ್ಯವಾಗಿ ರೂಪಿಸಲು ಮುಂದಾಗಿದೆ. ಇದು ರಾಜ್ಯದಲ್ಲಿ ಉದ್ಯಮ ವಲಯ ಬೆಳವಣಿಗೆಗೆ, ಉದ್ಯೋಗ ಸೃಷ್ಟಿಗೆ ಕಾರಣವಾಗಲಿದೆ ಎಂದು ದೃಢವಾಗಿ ಹೇಳಿದರು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್.
ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ ಪುನರುತ್ಥಾನಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಸಮಾಲೋಚನೆ ಮೂಲಕ ರೂಪಿಸುವ ‘ವಿಜಯ ಕರ್ನಾಟಕ’ದ ‘ಕರುನಾಡ ಕಟ್ಟೋಣ‘ ಅಭಿಯಾನದ ಎರಡನೇ ಕಾರ್ಯಕ್ರಮವಾಗಿ ಬೆಂಗಳೂರು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಕೈಗಾರಿಕಾ ಕ್ಷೇತ್ರದ ಪುನಶ್ಚೇತನ: ಚಿಂತನ ಮಂಥನ’ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
2019-2024ರ ಅವಧಿಯ ಕೈಗಾರಿಕಾ ನೀತಿಯಡಿ ಮೊದಲು ಉದ್ಯಮ ಸ್ಥಾಪಿಸಿ ಬಳಿಕ ಅನುಮತಿ ಪಡೆಯುವ ಅವಕಾಶವೂ ಇದೆ. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವ ಭೂಸುಧಾರಣೆ ಕಾಯಿದೆ ತಿದ್ದುಪಡಿ ಕೂಡಾ ರಾಜ್ಯದಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ಇರುವ ಕೈಗಾರಿಕೆಗಳ ಪುನಶ್ಚೇತನಕ್ಕೆ ನಾಂದಿ ಹಾಡಲಿದೆ ಎಂದು ಸಚಿವರು ತಿಳಿಸಿದರು.

ಏನಿರುತ್ತೆ ನೀತಿಯಲ್ಲಿ?
– 2ನೇ ಮತ್ತು 3ನೇ ಹಂತದ ನಗರಗಳಿಗೆ ಕೈಗಾರಿಕೆ ವಿಸ್ತರಣೆ
– ಕೈಗಾರಿಕಾ ಉತ್ತೇಜನಕ್ಕೆ ಸಬ್ಸಿಡಿ
– ಪ್ರಾದೇಶಿಕ ಆದ್ಯತಾ ಕೈಗಾರಿಕೆ
– ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆ
– ಎಲ್ಲ ಅನುಮತಿಗಳಿಗೆ ಏಕ ಗವಾಕ್ಷಿ ಯೋಜನೆ
– ಮೊದಲು ಉದ್ಯಮ ಸ್ಥಾಪಿಸಿ ಬಳಿಕ ಅನುಮತಿ ಪಡೆಯುವಂತೆ ಕಾನೂನು ತಿದ್ದುಪಡಿ

ಉದ್ಯಮದ ಬೇಡಿಕೆಗಳು
– ಕೈಗಾರಿಕೆಗಳ ನಿಗದಿತ ವಿದ್ಯುತ್ ಶುಲ್ಕವನ್ನು ಇನ್ನೂ ಮೂರು ತಿಂಗಳ ಅವಧಿಗೆ ರದ್ದು
– ಹೊರರಾಜ್ಯಕ್ಕೆ ಹೊರ ಜಿಲ್ಲೆಗೆ ವಲಸೆ ಹೋಗಿರುವ ಕಾರ್ಮಿಕರನ್ನು ಮರಳಿ ತರಲು ಕ್ರಮ
– ಹೊಸ ಕೈಗಾರಿಕೆಗಳಿಗೆ ಭೂಮಿ, ಕಟ್ಟಡವನ್ನು ಸರಕಾರವೇ ಒದಗಿಸಬೇಕು.
– ಸರಕಾರಕ್ಕೆ ಬೇಕಿರುವ ಉತ್ಪನ್ನಗಳನ್ನು ಸಣ್ಣ ಕೈಗಾರಿಕೆಗಳಿಂದ ಖರೀದಿಸಬೇಕು.

ಬ್ಯಾಂಕರ್‌ಗಳ ಜತೆ ಸಭೆ
ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂ. ಖಾತ್ರಿ ರಹಿತ ಸಾಲವನ್ನು ಘೋಷಿಸಿದ್ದರೂ ಬ್ಯಾಂಕ್‌ಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲಎಂಬ ಆರೋಪವಿದೆ. ಈ ಬಗ್ಗೆ ಸಿಎಂ ಅವರ ಜತೆ ಮಾತನಾಡಿ ಬ್ಯಾಂಕರ್‌ಗಳ ಸಭೆ ನಡೆಸಲಾಗುವುದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಮೂರು ತಿಂಗಳಿನಿಂದ ಬಂದ್ ಆಗಿರುವ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ರಚನಾತ್ಮಕ ಸಲಹೆಗಳ ಮೂಲಕ ದಿಕ್ಸೂಚಿಯಾಗುವ ಕೆಲಸವನ್ನು ವಿಜಯ ಕರ್ನಾಟಕ ಮಾಡುತ್ತಿದೆ.
– ಜಗದೀಶ್ ಶೆಟ್ಟರ್ ಕೈಗಾರಿಕಾ ಸಚಿವರು

ಉದ್ಯಮ ಸ್ಥಾಪನೆ ಇನ್ನಷ್ಟು ನಿರಾಳ
ಉದ್ಯಮ ಸ್ಥಾಪನೆಗಿರುವ ಅಡೆತಡೆಗಳನ್ನು ನಿವಾರಿಸುವುದಕ್ಕಾಗಿ ಮೊದಲು ಕೈಗಾರಿಕೆ ಆರಂಭಿಸಿ, 3 ವರ್ಷದ ಬಳಿಕ ಪರವಾನಗಿ ಪಡೆಯುವ ವಿಧಾನ ಜಾರಿಯಾಗಲಿದೆ. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯಿದೆ (2002)ಗೆ ತಿದ್ದುಪಡಿ ತರಲಾಗುತ್ತದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top