ಸಿದ್ಧತೆ ಸಮರ್ಪಕವಾಗಿರಲಿ – ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ, ಆರೋಗ್ಯ ಮುಖ್ಯ

ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಭವಿಷ್ಯದ ಶಿಕ್ಷಣದ ಅಡಿಪಾಯವನ್ನು ಹಾಕುತ್ತದೆ. ಆದರೆ, ಕೊರೊನಾ ಎಫೆಕ್ಟ್‌ನಿಂದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕೆ, ಬೇಡವೆ ಎಂದು ತೀರ್ಮಾನಿಸವುದರಲ್ಲಿ ಕಾಲ ಕಳೆದುಹೋಯಿತು. ಕೊನೆಗೂ ಜೂ.25ರಿಂದ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಯಿತು. ಯಾವುದೇ ಕಾರಣಕ್ಕೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಒಳ್ಳೆಯ ಬೆಳವಣಿಗೆಯೇ ಸರಿ. ಆದರೆ, ಕೊರೊನಾ ಕಾಲಘಟ್ಟದಲ್ಲಿ ಈ ಪರೀಕ್ಷೆಗಳನ್ನು ಹೇಗೆ ನಡೆಸಬೇಕು, ಸುರಕ್ಷತೆಯ ಗ್ಯಾರಂಟಿ ಎಷ್ಟು ? ಇಂತಹ ಹಲವು ಪ್ರಶ್ನೆಗಳು ಪೋಷಕರಲ್ಲಿವೆ. ಈ ಆತಂಕಗಳನ್ನು ದೂರ ಮಾಡುವ ಕೆಲಸವನ್ನು ಸರಕಾರ ಮಾಡಬೇಕು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಎರಡು ಅಂಶಗಳನ್ನು ಪರಾಮರ್ಶಿಸಬೇಕಿದೆ.

ಮೊದಲನೆಯದು- ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿಗಳನ್ನು ನಡೆಸುವುದು ಹೇಗೆ ಎಂಬುದು. ಪರೀಕ್ಷೆಯ ದಿನಾಂಕವನ್ನು ಘೋಷಿಸುವ ಸಂದರ್ಭದಲ್ಲಿ ಸರಕಾರವು 15 ದಿನಗಳ ಕಾಲ ಪುನರ್ಮನನ ತರಗತಿ ಮಾಡಲಾಗುವುದು ಎಂದು ಹೇಳಿತ್ತು. ಆದರೆ, ಈಗ ಈ ತರಗತಿಗಳನ್ನು ಸಂಪೂರ್ಣವಾಗಿ ಕೈಬಿಟ್ಟಂತಿದೆ. ಬದಲಿಗೆ ದೂರದರ್ಶನ ಚಂದನದಲ್ಲಿ ಪ್ರಸಾರವಾಗುತ್ತಿರುವ ಪಾಠಗಳೇ ಅಂತಿಮ ಎನ್ನುತ್ತಿದೆ. ಲಾಕ್‌ಡೌನ್‌ನಿಂದಾಗಿ ವಿದ್ಯಾರ್ಥಿಗಳು ಆಟದಲ್ಲೇ ಹೆಚ್ಚು ಕಾಲ ಕಳೆದಿರುತ್ತಾರೆ. ಪುನರ್ಮನನ ಇಲ್ಲದೇ ಪರೀಕ್ಷೆಗೆ ಹಾಜರಾದರೆ ಅದು ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಯೋಚಿಸಬೇಕಿದೆ.
ಗ್ರಾಮೀಣ ಪ್ರದೇಶದಲ್ಲೂ ಈಗಲೂ ಅನೇಕರ ಮನೆಯಲ್ಲಿ ಟಿವಿ ಇಲ್ಲ. ಹೀಗಿರುವಾಗ ದೂರದರ್ಶನದ ಪಾಠಗಳು ಸಾಕಾಗುವುದಿಲ್ಲ. ಈಗಾಗಲೇ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಅವರಿಗೆ ಶಾಲೆಗಳಲ್ಲಿ ಅಂಥ ಕೆಲಸಗಳೇನೂ ಇಲ್ಲ. ಅದರ ಬದಲು ಅದೇ ಶಿಕ್ಷಕರನ್ನು ಮನೆಯಿಂದಲೇ ಕೆಲಸ ಮಾಡುವಂತೆ ಹೇಳಿ, ಉಳಿದಿರುವ 15 ದಿನದಲ್ಲಾದರೂ ವಾಟ್ಸ್ಆ್ಯಪ್ ಗ್ರೂಪ್ ಅಥವಾ ಇನ್ನಾವುದೇ ತಾಂತ್ರಿಕ ಸಾಧನಗಳ ಮೂಲಕ ಪಾಠದ ಪುನರ್ಮನನ ನಡೆಸುವುದಕ್ಕೆ ಮುಂದಾಗಬೇಕು. ಈಗಾಗಲೇ ಖಾಸಗಿ ಶಾಲೆಗಳವರು ಆನ್‌ಲೈನ್ ಮೂಲಕ ಮಕ್ಕಳನ್ನು ಸಜ್ಜುಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ಪ್ರಯತ್ನ ಸರಕಾರಿ ಶಾಲೆಗಳಲ್ಲೂ‌ ನಡೆಯಬೇಕು. ಇದರಿಂದ ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಬಹುದು.

ಎರಡನೆಯದು- ಮಕ್ಕಳ ಸುರಕ್ಷತೆ. ಸುಮಾರು 8.5 ಲಕ್ಷ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ 2.25 ಲಕ್ಷ ಸಿಬ್ಬಂದಿ ನಿರ್ವಹಣೆ ಮಾಡಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿ 10.75 ಲಕ್ಷ ಮಂದಿ ಕೊರೊನಾಂತಕ ಮಧ್ಯೆಯೇ ಕಾರ್ಯನಿರ್ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಸುರಕ್ಷತೆಯ ಭರವಸೆಯನ್ನು ಸರಕಾರ ನೀಡಬೇಕು. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಪಾಡುವಿಕೆ, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳ ಬಗ್ಗೆ ವ್ಯವಸ್ಥಿತ ವ್ಯವಸ್ಥೆಯನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಆದರೆ, ಈ ಬಗ್ಗೆ ಸರಕಾರ ಹೆಚ್ಚಿನ ಮಾಹಿತಿ ನೀಡದೇ ಇರುವುದರಿಂದ ಗೊಂದಲ ಏರ್ಪಟ್ಟಿದೆ. ಪರೀಕ್ಷೆ ಬರೆದು ಬಂದ ಮಕ್ಕಳಿಗೆ ಕೊರೊನಾ ಸೋಂಕಿನ ಭಯವಿಲ್ಲ ಎಂಬ ವಾತಾವರಣವನ್ನು ಸೃಷ್ಟಿಸಬೇಕು ಮತ್ತು ಅದನ್ನು ಪೋಷಕರಿಗೆ ಮನದಟ್ಟು ಮಾಡಿಸಬೇಕು. ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಈಗಾಗಲೇ ಪ್ರಕಟಿಸಲಾಗಿದೆ. ಆದರೆ, ಈ ಬಗ್ಗೆ ಸಂಪೂರ್ಣ ಸಿದ್ಧತೆ ಎಲ್ಲ ಕಂಡುಬರುತ್ತಿಲ್ಲ. ಕೊನೆ ಕ್ಷಣದಲ್ಲಿಎಲ್ಲವನ್ನೂ ಮಾಡುವ ಪ್ರವೃತ್ತಿ ಸರಕಾರದ್ದು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಾಗಾಗಿ, ಯಾವುದೇ ಲೋಪವಾಗದಂತೆ ಸಿದ್ಧತೆಯನ್ನು ಈಗಿನಿಂದಲೇ ಮಾಡಿಕೊಳ್ಳುವುದು ಒಳಿತು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪುನರ್ಮನನ ತರಗತಿ ನಡೆಸುವುದು ಮತ್ತು ಅವರ ಆರೋಗ್ಯದ ದೃಷ್ಟಿಯಿಂದ ಕೊರೊನಾ ಮುಕ್ತ ವ್ಯವಸ್ಥೆಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಹೆಚ್ಚು ಮಹತ್ವದ್ದಾಗಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top