ಕನ್ನಡನಾಡಿನ ಮಹಾಪಂಡಿತ, ಅನುವಾದಕ, ಕವಿ, ಉಪನ್ಯಾಸಕ ಬನ್ನಂಜೆ ಗೋವಿಂದಾಚಾರ್ಯರಿಗೆ ಆ.3ರಂದು 84 ವರ್ಷ ತುಂಬಿ 85 ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನೂ ಅವರ ಕೃತಿಗಳನ್ನೂ ನೆನೆಯುವ ಲೇಖನ ಇಲ್ಲಿದೆ.
ಬಹಳ ವರ್ಷ ಹಿಂದೆ ಪ್ರಸಿದ್ಧ ಸಂಸ್ಕೃತ ವಿದ್ವಾಂಸರೊಬ್ಬರು ಭವಭೂತಿಯ ‘ಉತ್ತರರಾಮಚರಿತ’ದ ಸಂವಿಧಾನ ಕೌಶಲವನ್ನು ವಿಮರ್ಶಿಸುತ್ತಾ ಭವಭೂತಿ ಸೂತ್ರಧಾರನನ್ನು ಚಿತ್ರಿಸಿದ್ದು ಸರಿಯಿಲ್ಲವೆಂದು ಹೇಳಿದರು. ಅದಕ್ಕೆ ಕಾರಣ ಇಷ್ಟೇ! ಸೂತ್ರಧಾರ ರಂಗಸ್ಥಳವನ್ನು ಪ್ರವೇಶಿಸಿ-
‘‘ಯಂ ಬ್ರಹ್ಮಾಣಮಿಯಂ ದೇವೀ ವಾಗ್ವಶ್ಯೇವಾನುವರ್ತತೇ | ಉತ್ತರಂ ರಾಮಚರಿತಂ ತತ್ಪ್ರಣೀತಂ ಪ್ರಯೋಕ್ಷ ್ಯತೇ || ಎಷೋಸ್ಮಿ ಕಾರ್ಯವಶಾದಯೋಧ್ಯಾಕಸ್ತದಾನೀಂತನಶ್ಚ ಸಂವೃತ್ತಃ’’, ‘‘ಯಾವ ಬ್ರಹ್ಮನನ್ನು ಈ ವಾಗ್ದೇವಿಯು ವಶವರ್ತಿನಿಯಂತೆ ಹಿಂಬಾಲಿಸುವಳೋ ಆತನಿಂದ ರಚಿತವಾದ ‘ಉತ್ತರರಾಮ ಚರಿತ’ವನ್ನು ಈಗ ಅಭಿನಯಿಸುವೆವು. ಕಾರ್ಯನಿಮಿತ್ತದಿಂದ ನಾನೀಗ ಅಯೋಧ್ಯಾಪಟ್ಟಣದ ನಿವಾಸಿ ಮತ್ತು ಶ್ರೀರಾಮನ ಕಾಲದವನು,’’ ಎಂದು ಬಿನ್ನಯಿಸುತ್ತಾನೆ. ಇದಕ್ಕೆ ಆ ವಿದ್ವಾಂಸರು ಭವಭೂತಿಯ ನಾಟಕವನ್ನು ಪರಿಚಯಿಸಬೇಕಾದ ಅವನು ಅದನ್ನು ಪರಿಚಯಿಸಿದ ಮರುಕ್ಷಣದಲ್ಲೇ ತಾನು ಅಯೋಧ್ಯಾ ನಿವಾಸಿಯೆಂದು ಹೇಳಿದ್ದು ‘ಅಸಂಗತ’ ಎನ್ನುತ್ತಾರೆ. ಆತ ಅಯೋಧ್ಯೆಯ ಪ್ರಜೆಗಳಂತೆ ಉಡುಪು ಧರಿಸಲಿಲ್ಲ ಎಂಬ ಕಾರಣವನ್ನೂ ಒಡ್ಡುತ್ತಾರೆ.
ಇದನ್ನೇ ಮತ್ತೊಬ್ಬ ವಿದ್ವಾಂಸರು- ‘‘ಭವಭೂತಿ ಸಂಪ್ರದಾಯವಾದಿಗಳ ಮನೆಯಲ್ಲಿ ಹುಟ್ಟಿ, ಅದೇ ಪ್ರಭಾವಲಯದಲ್ಲಿ ಬೆಳೆದನಾದರೂ ಅವನ ಎದೆಯಾಳದಲ್ಲಿ ಇದ್ದದ್ದು ಬಂಡಾಯದ ಧ್ವನಿ. ಅದಕ್ಕೆಂದೇ ಅವನು ಹಳಸಿದ ಪ್ರಸ್ತಾವನೆಯ ಕ್ರಮವನ್ನು ಬದಲಿಸಿದ. ಬದಲಿಸಿ ಹೊಸ ಪರಂಪರೆಗೆ ನಾಂದಿ ಹಾಡಿದ. ರಂಗಸ್ಥಳಕ್ಕೆ ಬಂದ ಸೂತ್ರಧಾರ ಕವಿ ಭವಭೂತಿಯ ನಾಟಕವನ್ನಾಡುತ್ತೇವೆ ಎನ್ನುತ್ತಾನೆ. ತತ್‌ಕ್ಷಣ ಮಾತು ಬದಲಿಸಿ ನಮ್ಮನ್ನು ಹೊಸತೊಂದು ಪ್ರಪಂಚಕ್ಕೆ ಕೊಂಡೊಯ್ಯುತ್ತಾನೆ,’’ ಎಂದು ಹೇಳುತ್ತಾರೆ. ಹಾಗೆಯೇ ಸೂತ್ರಧಾರ ‘‘ನಾನೀಗ ಸೂತ್ರಧಾರನಲ್ಲ. ಕವಿಯಿಂದಾಗಿ ನಾನೀಗ ರಾಮಾಯಣ ಕಾಲದ ಅಯೋಧ್ಯೆಯ ಪ್ರಜೆ. ನೀವೂ ತ್ರೇತಾಯುಗದವರು. ಅಯೋಧ್ಯೆಯಲ್ಲಿರುವವರು. ಕಣ್ಣಾರೆ ನೋಡಿ ರಾಮನ ಬದುಕಿನ ಬಿತ್ತರವನ್ನು,’’ ಎಂದು ಹೇಳಿದ ಮಾತನ್ನು ಉಲ್ಲೇಖಿಸುತ್ತಾರೆ. ‘‘ಮನೋವೈಜ್ಞಾನಿಕವಾಗಿ ನಮ್ಮನ್ನು ನಾಟಕದೊಡನೆ ತಾದಾತ್ಮ್ಯಗೊಳಿಸುವ ಈ ವಿಧಾನ ಅನನ್ಯವಾದದ್ದು; ಅದ್ಭುತವಾದದ್ದು. ಇದು ಸಂಸ್ಕೃತ ಸಾಹಿತ್ಯಕ್ಕೆ ಭವಭೂತಿಯ ಕೊಡುಗೆ. ಭವಭೂತಿಯು ತಾನಾಡಿದನೆಂದರೆ ಕಲಿಯುಗ ತ್ರೇತೆಯೇ ಆಗುವುದು,’’ ಎನ್ನುತ್ತಾರೆ. ಇದು ವಿಮರ್ಶೆಗೆ ಹೊಸತನದ ಸ್ಪರ್ಶ! ನಾವೀನ್ಯ! ಒಳನೋಟ!
ಹೀಗೆ ಹೇಳಿದವರು ಮಹಾಪ್ರವಚನಕಾರರೆಂದೇ ಪ್ರಖ್ಯಾತರಾದ, ಪ್ರಾಚಿನ ಸಾಹಿತ್ಯಗಳ ಅಧಿಕೃತ ವಕ್ತಾರರೆನಿಸಿಕೊಂಡ ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರು. ಬನ್ನಂಜೆಯವರು ನಾಡು ಕಂಡ ಬಹುಶ್ರುತರು ಮತ್ತು ಘನವಿದ್ವಾಂಸರು. ಒಂದೆರಡು ಪ್ರಾಚೀನ ಶಾಸ್ತ್ರಗಳಿಗಾದರೂ ಅಧಿಕಾರಿಯೆನಿಸಿಕೊಂಡವರನ್ನು, ಸಾಹಿತ್ಯ, ತರ್ಕ, ವ್ಯಾಕರಣ, ಮೀಮಾಂಸಾ, ಧರ್ಮಶಾಸ್ತ್ರ ಮೊದಲಾದ ಶಾಸ್ತ್ರಗಳನ್ನು ಆಮೂಲಾಗ್ರವಾಗಿ ಓದಿಕೊಂಡವರನ್ನು ವಿದ್ವಾಂಸರೆಂದೋ, ಪಂಡಿತರೆಂದೋ ಕರೆಯುತ್ತಾರೆ. ಬನ್ನಂಜೆ ಅಂತಹ ಪಂಡಿತರು. ಹಾಗೆಂದು ಅವರ ಪಾಂಡಿತ್ಯದಲ್ಲಿ ಸಂಪ್ರದಾಯ ಜಡತೆ, ಅಂಧಶ್ರದ್ಧೆ ಎಲ್ಲೂ ಸುಳಿಯುವುದಿಲ್ಲ. ಸ್ವತಂತ್ರ ವಿಚಾರಧೋರಣೆ, ಆಧುನಿಕ ಮನಸ್ಸಿನ ಸಮನ್ವಯ, ವಿಚಿಕಿತ್ಸಕ ದೃಷ್ಟಿ, ಹೊಸಹೊಸ ಬುದ್ಧಿಪ್ರಕಾಶ, ಪ್ರಖರ ಚಿಂತನೆ, ಅಂತರ್ದೃಷ್ಟಿ ಮೊದಲಾದವು ಅವರ ವಿದ್ವತ್ತಿನ ವಿಶೇಷತೆ. ಬನ್ನಂಜೆಯವರು ನಿಃಸಂಶಯವಾಗಿಯೂ ಪೂರ್ವಕಾಲದ ಪಾಂಡಿತ್ಯದ ಪಳೆಯುಳಿಕೆ. ತರ್ಕ, ವ್ಯಾಕರಣ, ವೇದಾಂತಾದಿ ಮೂರು-ನಾಲ್ಕು ಶಾಸ್ತ್ರಗಳಲ್ಲಿ ಅಸಾಧಾರಣ ಹಿಡಿತ, ಪುರಾಣ, ವೇದೋಪನಿಷತ್ತುಗಳ ತಲಸ್ಪರ್ಶಿ ಅಧ್ಯಯನ ಮತ್ತು ಅವುಗಳ ಬಗ್ಗೆ ‘ಇದಮಿತ್ಥಮ್’ ಎಂದು ಹೇಳಬಲ್ಲ ಅಧಿಕೃತತೆ ಅವರನ್ನು ಸಂಸ್ಕೃತ ವಿದ್ವದ್ವಲಯದಲ್ಲಿ ಪ್ರತ್ಯೇಕವಾಗಿಸಿವೆ.
ಬನ್ನಂಜೆ ಯಾವ ಔಪಚಾರಿಕ ಶಿಕ್ಷಣವನ್ನೂ ಪಡೆದವರಲ್ಲ. ಆರನೇ ತರಗತಿಗೇ ಅವರ ಔಪಚಾರಿಕ ಶಿಕ್ಷಣ ಕೊನೆಗೊಂಡಿತು. ಆದರೆ ವೇದೋಪನಿಷತ್ತುಗಳು, ರಾಮಾಯಣ, ಭಾರತ, ಭಾಗವತ, ಗೀತೆ, ಪುರಾಣಗಳು ಅವರಿಗೆ ಹೃದ್ಗತ. ಸ್ವಾಧ್ಯಾಯ ಮತ್ತು ಪ್ರವಚನ ಅವರ ಉಸಿರು. ಭಾರತದ ಜೀವಿತಭಾಗ್ಯದ ನಿಧಿಗಳಾದ ರಾಮಾಯಣ, ಭಾರತ, ಭಾಗವತಾದಿಗಳ ಶ್ಲೋಕಗಳನ್ನು ಚರಣಚರಣವಾಗಿ, ಅಕ್ಷ ರಅಕ್ಷ ರವಾಗಿ, ಓದಿಕೊಂಡವರು. ಅವುಗಳ ಸ್ವಾರಸ್ಯಗಳನ್ನು ನೋಡಿ, ಸವಿದು, ಪರೀಕ್ಷಿಸಿ ಅವುಗಳ ಧ್ವನಿ, ಔಚಿತ್ಯ, ರಸಗಳನ್ನು ಜನತೆಗೆ ಉಣಬಡಿಸಿದವರು.
ಅಗಾಧ ಪಾಂಡಿತ್ಯವಿದ್ದರೂ ಅವರಲ್ಲಿ ಪಾಂಡಿತ್ಯಪ್ರದರ್ಶನ ಕಾಣುವುದೇ ಇಲ್ಲ. ಶಬ್ದಾಡಂಬರದ ಸೋಂಕೂ ಕಾಣದು. ಅವರ ಬರವಣಿಗೆ, ಪ್ರವಚನ, ಉಪನ್ಯಾಸಗಳಲ್ಲಿ ಇದು ಸುವೇದ್ಯ. ಅವರ ವಚನಶೈಲಿಯಂತೂ ಅತ್ಯಂತ ಮೋಹಕ. ಅವರ ಸರಳ, ನಿರಾಡಂಬರ ಶೈಲಿಯ ಬರವಣಿಗೆಯಲ್ಲಿ ಹೊಸಹೊಸದು ಮಿಂಚುತ್ತಿರುತ್ತದೆ; ಬುದ್ಧಿಯ ಪ್ರಕಾಶ ಹೊಳೆಯುತ್ತಿರುತ್ತದೆ. ನಾವು ಎಂದೂ ಕೇಳಿರದ ಸೂಕ್ಷ ್ಮವಿಚಾರದ ಧ್ವನಿತರಂಗಗಳು ಅನುರಣಿಸುತ್ತಿರುತ್ತವೆ. ಅತಿ ಭಾರವೂ ಅಲ್ಲದ, ಅತಿ ಪೇಲವವೂ ಅಲ್ಲದ ಅವರ ವಾಕ್ಸರಣಿಯಲ್ಲಿ ಅಗಾಧವಾದ ತತ್ತ್ವಚಿಂತನೆ ಅಡಗಿಕೊಂಡಿರುತ್ತದೆ.
ಕನ್ನಡ ಮತ್ತು ಸಂಸ್ಕೃತ ಭಾಷೆಯ ಮೇಲಿನ ಅಸಾಧಾರಣ ಹಿಡಿತದಿಂದಾಗಿ ಅವರು ಚಿಂತನೆ, ಭಾವ, ವಿಚಾರಗಳನ್ನು ತಮಗೆ ಬೇಕಾದಂತೆ ಲೀಲಾಜಾಲವಾಗಿ ಅಭಿವ್ಯಕ್ತಿಗೊಳಿಸಬಲ್ಲರು. ವಿಷಯಸಾಮಗ್ರಿಯ ಹವಣಿಕೆ, ಅದನ್ನು ವಿಂಗಡಿಸಿ ಜೋಡಿಸುವ ಕ್ರಮ, ಅಚ್ಚುಕಟ್ಟುತನ, ನಿರೂಪಣೆಯ ರೀತಿಯಲ್ಲಿ ಚಮತ್ಕಾರ, ಉಚಿತೋಚಿತವಾಗಿ ಸಹಜವಾಗಿ ಒದಗಿಬರುವ ಪ್ರಾಸ, ಗಂಭೀರವೂ ಅಲ್ಲದ ಸರಳವೂ ಅಲ್ಲದ ವಾಕ್ಯರಚನೆ, ಹೇಳುವುದರಲ್ಲಿ ಅಸಂದಿಗ್ಧತೆ, ಸ್ಫುಟತೆ, ನಿರ್ಭೀತತೆ ಮೊದಲಾದವು ಅವರ ಬರವಣಿಗೆಗೆ ವಿನೂತನತೆಯನ್ನೂ, ಸೊಬಗನ್ನೂ ತಂದಿವೆ. ಒಂದೊಂದು ವಾಕ್ಯವೂ ಒಂದು ಅಚ್ಚುಕಟ್ಟಾದ ಪೊಟ್ಟಣದಂತೆ, ಒಂದೊಂದು ವಾಕ್ಯಸಮುಚ್ಚಯವೂ ಅಂದವಾಗಿ ಪೇರಿಸಿದ ಸಣ್ಣ ಪೆಟ್ಟಿಗೆಗಳ ಸಾಲಿನಂತೆ ಶೋಭಿಸುತ್ತದೆ. ಅವರ ಬರವಣಿಗೆಯ ಇನ್ನೊಂದು ವಿಶೇಷತೆಯೆಂದರೆ ಅದು ಸೂತ್ರರೀತಿಯದು.
‘‘ಅಲ್ಪಾಕ್ಷ ರಮಸಂದಿಗ್ಧಂ ಸಾರವದ್ವಿಶ್ವತೋಮುಖಮ್ | ಅಸ್ತೋಭಮನವದ್ಯಂ ಚ ಸೂತ್ರಂ ಸೂತ್ರವಿದೋ ವಿದುಃ ||’’ ‘‘ಕಡಿಮೆ ಪದಗಳುಳ್ಳ, ಗೋಜಲಿಲ್ಲದ, ಸಾರವತ್ತಾದ, ವ್ಯಾಪಕವಾದ, ವ್ಯರ್ಥವಲ್ಲದ, ದೋಷವಿಲ್ಲದ ವಾಕ್ಯಸರಣಿಗೆ ಸೂತ್ರ’’ವೆಂದು ಕರೆಯುತ್ತಾರೆ. ಬನ್ನಂಜೆಯವರದು ಇಂತಹ ಶೈಲಿ.
ಭಾಷೆಯ ಬಗ್ಗೆ, ಭಾಷಾಶೈಲಿಯ ಬಗ್ಗೆ ಹೇಳುವಾಗ ‘ಪದ’ಗಳ ಬಗ್ಗೆಯೂ ಹೇಳಿದರೆ ‘ಪದಸಂಪತ್ತಿ’ನ ಮಹತ್ವ ಗೊತ್ತಾಗುತ್ತದೆ. ಪದಸಮುದಾಯವೇ ವಾಕ್ಯರಚನೆಯ ಮೂಲ. ಭಾಷೆಗೆ ಸ್ವಾರಸ್ಯ ಬರುವುದೇ ಪದಗಳಿಂದ. ಭಾಷೆಯ ಪ್ರತಿಯೊಂದು ಪದಕ್ಕೂ ಚರಿತ್ರೆಯಿರುತ್ತದೆ; ಬದುಕಿರುತ್ತದೆ; ಐತಿಹ್ಯವಿರುತ್ತದೆ; ಕಥೆಯಿರುತ್ತದೆ. ಭೂಗೋಳ, ವಿಜ್ಞಾನ, ಸಮಾಜಶಾಸ್ತ್ರ, ಮನಃಶಾಸ್ತ್ರ ಇವೆಲ್ಲವೂ ಅದರಲ್ಲಿ ಅಡಕವಾಗಿರುತ್ತದೆ. ಪದಗಳೇ ಸಾಗರವಿದ್ದ ಹಾಗೆ. ಅದರಲ್ಲಿ ಧುಮುಕಬೇಕು. ಆಳಕ್ಕೆ ಇಳಿಯಬೇಕು. ಪದ-ಅರ್ಥಗಳೆಂಬ ಚಿಂತಾಮಣಿಯನ್ನು ಹೆಕ್ಕಿ ತೆಗೆಯಬೇಕು. ಅದರ ಒಡಲನ್ನು ಒಡೆಯಬೇಕು. ಆ ಪುಟ್ಟ ಪದದ ಒಡಲೊಳಗೆ ಹುದುಗಿರುವ ಅರ್ಥವನ್ನು ಕೆದಕಬೇಕು. ಆಗ ಸಿಗುತ್ತದೆ ನಮಗೆ ರೋಚಕವಾದ ಸಂಗತಿಗಳು. (ಹೀಗೆ ಹೇಳಿದವರು ಬನ್ನಂಜೆಯವರೇ.) ಇದನ್ನು ‘ಪದಾರ್ಥ ಅಧ್ಯಯನ’- ‘Wordlore’ ಎಂದು ಕರೆಯುತ್ತಾರೆ.
ಈ ‘ಪದಾರ್ಥ ಅಧ್ಯಯನ’ವನ್ನು ಸ್ವತಃ ಬನ್ನಂಜೆಯವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯಲ್ಲಿ, ಪ್ರವಚನಗಳಲ್ಲಿ ಶಬ್ದದ ಮೂಲವನ್ನರಸುತ್ತಾ ಅದರ ಬೆನ್ನು ಹತ್ತಿ ಅದರ ಗರ್ಭದಲ್ಲಿ ಅಡಗಿರುವ ರೋಚಕ ಸಂಗತಿಗಳನ್ನು ಅನಾವರಣಗೊಳಿಸುತ್ತಾ ಪದಜಿಜ್ಞಾಸುಗಳಿಗೆ ಮಹೋಪಕಾರವೆಸಗಿದ್ದಾರೆ. ನಮ್ಮಲ್ಲಿ ಬಹಳಮಂದಿಗೆ ಪದದ ಅರ್ಥಗಳ ಚಿಂತೆಯೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಬನ್ನಂಜೆಯವರ ‘ಪದಾರ್ಥಮೀಮಾಂಸಾ’ ಕೈಂಕರ್ಯ ಗಮನಾರ್ಹವಾದುದು. ಉದಾಹರಣೆಗೆ- ದುಃಷಂತ, ಗೋದಾವರೀ, ಅಹಲ್ಯಾ, ಅಕ್ಷೋಹಿಣೀ, ಬಾಹುಷಾಳಿ, ಶೂದ್ರ ಮುಂತಾದ ಪದಗಳ ಸಾಧು-ಅಸಾಧುತ್ವದ ಬಗ್ಗೆ, ಅವುಗಳ ಹಿನ್ನೆಲೆಯ ಬಗ್ಗೆ, ಚರಿತ್ರೆಯ ಬಗ್ಗೆ ರೋಚಕವಾಗಿ ಚರ್ಚಿಸಿದ್ದಾರೆ.
ನಮ್ಮ ಪ್ರಾಚೀನ ಸಾಹಿತ್ಯಗಳಲ್ಲಿ ಭಗವದ್ಗೀತೆಗೆ ಇರುವ ಸ್ಥಾನ ಬಹುದೊಡ್ಡದು. ಅದೊಂದು ಧಾರ್ಮಿಕಗ್ರಂಥವೆಂದೇ ಪ್ರತಿಪಾದಿತವಾಗಿದೆ. ತತ್ತ್ವಶಾಸ್ತ್ರದಲ್ಲಿ ಅದಕ್ಕೆ ಎಣೆಯಾಗಬಲ್ಲ ಇನ್ನೊಂದು ಗ್ರಂಥ ಇಲ್ಲವೆಂದೇ ಹೇಳಬೇಕು. ಗಾತ್ರದಲ್ಲಿ ತುಂಬಾ ಕಿರಿದು. ಆದರೆ ಗುಣದಲ್ಲಿ ಹಿರಿದಕಿಂತಲೂ ಹಿರಿದು. ಆದರೆ ಇಂತಹ ಗ್ರಂಥವನ್ನು ನಾವು ನೋಡುವ ರೀತಿ ಹೇಗೆ? ಓದುವ ಬಗೆ ಹೇಗೆ? ಸ್ವಲ್ಪ ಯೋಚಿಸಿದರೆ ಈ ಕ್ರಮ ರೀತಿಗಳ ಬಗೆಗೆ ಖೇದವಾಗುತ್ತದೆ. ಅರ್ಥದ ಮೇಲೆ ಗಮನವಿಲ್ಲದ ಶುಕಪಠಿತ ಪದ್ಧತಿಯೇ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಮೇಲಾಗಿ ಅದನ್ನು ಪುಣ್ಯ ಕಾರ್ಯವೆಂದೇ ಭಾವಿಸಿ ಪಾರಾಯಣ ಮಾಡುವವರೇ ಹೆಚ್ಚು.
ಆದರೆ ಬನ್ನಂಜೆಯವರು ಭವದ್ಗೀತೆಯನ್ನು ನೋಡಿದ ಬಗೆಯೇ ಬೇರೆ. ಭಗವದ್ಗೀತೆಯನ್ನು ಪ್ರಖರವಾದ ವಿಮರ್ಶೆಯ ಹೊಳಪಿನಲ್ಲಿ, ಅದನ್ನು ‘ಜೀವನಧರ್ಮ ಯೋಗ’ವೆಂದು ಪ್ರತಿಪಾದಿಸಿದ ಡಿವಿಜಿಯವರನ್ನು ಬಿಟ್ಟರೆ ಆ ಹೆಜ್ಜೆಯಲ್ಲಿ ಸ್ವಲ್ಪ ಭಿನ್ನವಾಗಿ ಮುಂದುವರಿದವರೆಂದರೆ ಬನ್ನಂಜೆಯವರೇ. ಗೀತೆಯ ಮೇಲೆ ಆಚಾರ್ಯತ್ರಯರು ರಚಿಸಿದ ಭಾಷ್ಯ ಮತ್ತು ಅವರ ನಿಲುವುಗಳೊಂದಿಗೆ ತಮ್ಮ ಅನ್ನಿಸಿಕೆಯನ್ನು ಸ್ವತಂತ್ರ ವಿಚಾರವಿಮರ್ಶೆಗಳೊಂದಿಗೆ ಪ್ರತಿಪಾದಿಸಿದ ಬನ್ನಂಜೆಯವರು ಕನ್ನಡಿಗರಿಗೆ ಒಂದು ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಇದೊಂದು ವಿನೂತನ ಹೆಜ್ಜೆ. ಹಳೆಯ ಕಾವ್ಯವನ್ನು ಹೊಸ ಭಾವನೆ ಹೊಸ ಜ್ಞಾನಗಳ ಹೊಸಬೆಳಕಿನಲ್ಲಿ ಪುನರ್ವಿಮರ್ಶೆ ಮಾಡಿ ಅದಕ್ಕೆ ಹೊಸ ಬೆಲೆ ಕಟ್ಟಿದ್ದಾರೆ. ಇದೇ ರೀತಿಯಲ್ಲಿ ವಾಲ್ಮೀಕಿ ಕಂಡ ರಾಮಾಯಣ, ವ್ಯಾಸರು ಕಂಡಂತೆ ಭೀಮಸೇನ, ತಲವಕಾರೋಪನಿಷತ್ತು, ಭಾಗವತ ಸಂಗ್ರಹ, ಪ್ರಾಚೀನ ಭಾರತದಲ್ಲಿ ಕಾಮಶಾಸ್ತ್ರ, ಮಹಾಭಾರತ ತಾತ್ಪರ್ಯ, ತಂತ್ರಸಾರ, ಜಯಂತಿಕಲ್ಪ, ಆಚಾರ್ಯ ಮಧ್ವ, ಮಂಗಲಾಷ್ಟಕ ಮೊದಲಾದ ಕೃತಿಗಳು ಬನ್ನಂಜೆಯವರ ಪ್ರತಿಭೆಯ ಮೂಸೆಯಲ್ಲಿ ಹೊಸಪ್ರಭೆಯನ್ನು ಪಡೆದುಕೊಂಡಿವೆ.
ಬನ್ನಂಜೆಯವರ ಭಾಷಾಂತರಪ್ರಪಂಚವೂ ಬಹು ದೊಡ್ಡದು. ಭಾಷಾಂತರದ ಮೂಲಕ ಸಂಸ್ಕೃತದ ಮಧುವನ್ನು ಕನ್ನಡಕ್ಕೆ ಉಣಬಡಿಸಿದ ಬನ್ನಂಜೆಯವರ ಭಾಷಾಂತರದ ಸೇವೆಯು ಕನ್ನಡ ಸಾಹಿತ್ಯಪ್ರಪಂಚಕ್ಕೇ ಒಂದು ಮೈಲುಗಲ್ಲೆನಿಸಿಕೊಂಡಿದೆ. ಅವರು ಕನ್ನಡಕ್ಕೆ ಅನುವಾದಿಸಿದ ಬಾಣ ಭಟ್ಟನ ಕಾದಂಬರಿ, ಅಭಿಜ್ಞಾನ ಶಾಕುಂತಲ, ಉತ್ತರರರಾಮ ಚರಿತಮ್, ಮೃಚ್ಛಕಟಿಕ ಸಂಸ್ಕೃತ ಹಾಗೂ ಕನ್ನಡ ಸಾಹಿತ್ಯಭಕ್ತರಲ್ಲಿ ವಿಶೇಷ ಗೌರವಾದರ, ಮನ್ನಣೆಗಳಿಗೆ ಪಾತ್ರವಾಗಿವೆ. ಕನ್ನಡದ ಬನಿ, ಸೊಗಡು, ಅದರ ಜಾಯಮಾನ, ಸ್ವಭಾವಗಳನ್ನು ಹೊತ್ತು ಬರುವ ಅವರ ಭಾಷಾಂತರ ಕನ್ನಡ ಆವರಣವನ್ನೇ ನಿರ್ಮಿಸುತ್ತದೆ. ಅವು ಸಂಸ್ಕೃತ ಕೃತಿಗಳ ಅನುವಾದವಾದರೂ ಸಂಸ್ಕೃತದ ಪ್ರಭಾವದಿಂದ ಹೊಗುಳಿಯುವುದು ಅವರ ಭಾಷಾಂತರದ ವೈಶಿಷ್ಟ್ಯ. ಅಚ್ಚ, ಸುಂದರ ಕನ್ನಡವನ್ನು ಬಳಸುವುದು ಅವರ ಹೆಚ್ಚಗಾರಿಕೆ. ಸಂಸ್ಕೃತ ಕೃತಿಗಳ ಶಿರೊನಾಮವನ್ನೂ ಅಷ್ಟೇ ಸ್ವಾರಸ್ಯಕರವಾಗಿ ಅನುವಾದಿಸುವುದು ಅವರ ಇನ್ನೊಂದು ವಿಶೇಷ. ಅಭಿಜ್ಞಾನ ಶಾಕುಂತಲ- ‘ನೆನಪಾದಳು ಶಕುಂತಲೆ’ಯಾಗುತ್ತದೆ. ಮೃಚ್ಛಕಟಿಕ ‘ಆವೆಯ ಮಣ್ಣಿನ ಆಟದ ಬಂಡಿ’ಯಾಗುತ್ತದೆ. ಉತ್ತರರಾಮ ಚರಿತೆ ‘ಮತ್ತೆ ರಾಮನ ಕತೆ’ಯಾಗುತ್ತದೆ. ಭಾಷಾಂತರಕರ್ತನ ಬೆರಳಿಗೆ ಸಿಗದೆ ನುಣುಚಿಕೊಳ್ಳುವ ಅನೇಕ ಸೊಗಸು, ಭಾವ, ಬೆಡಗು, ವಯ್ಯಾರ, ಧ್ವನಿಗಳು, ಆಶಯಗಳು ಬನ್ನಂಜೆಯವರ ಬಳಿ ತಲೆತಗ್ಗಿಸಿ ನಿಲ್ಲುತ್ತವೆ.
ಬನ್ನಂಜೆಯವರು ಉತ್ತಮ ಕವಿಯೂ ಕೂಡಾ ಹೌದು. ಅವರಿಗೆ ಅರುವತ್ತು ತುಂಬಿದಾಗ ಅವರು ಬರೆದ ‘ಆಯಿತೇ ಅರುವತ್ತು’ ಎಂಬ ಪದ್ಯದಲ್ಲಿ ಇಡೀ ಬದುಕಿನ ಮರ್ಮ ಅದೆಷ್ಟು ಮನೋಜ್ಞವಾಗಿ ಸೊಗಸಾಗಿ ಪ್ರಕಟಗೊಂಡಿದೆಯೆಂದರೆ ಅದರಲ್ಲಿ ಅಧ್ಯಾತ್ಮವೂ ಇದೆ; ಶೃಂಗಾರವು ಇದೆ; ಚಾಟಿಯೇಟಿನ ಬಿಸುಪೂ ಇದೆ; ಮಡಿಮೈಲಿಗೆಯ ಬಿಸಿ ಬಿಸಿ ಚರ್ಚೆಯೂ ಇದೆ; ಚಂದ್ರ-ಬುಧ, ಋುಷ್ಯಶೃಂಗ, ಶಕುಂತಲಾ, ಕಾಯುವ ಕಾಯಕ, ಹೀಗೆ ಸಾಗುತ್ತವೆ ಅವರ ಕವನಮಾಲಿಕೆಗಳು. ಇವಲ್ಲದೆ ಬನ್ನಂಜೆಯವರ ಬಿಡಿ ಬರಹಗಳು, ಸಾರಸ್ವತ ಸಂಪತ್ತು ಮುಂತಾದವು ನಾಲ್ಕೈದು ಸಂಪುಟಗಳಲ್ಲಿ ಹೊರಬಂದಿವೆ.
(ಲೇಖಕರು ಉಪನ್ಯಾಸಕರು)