ಕೋಟ್ಯಂತರ ಭಾರತೀಯರ ಶ್ರದ್ಧೆ- ನಂಬಿಕೆಗಳ ನೆಲೆಯಾಗಿ, ಆಸ್ತಿಕತೆಯ ಅಸ್ತಿಭಾರವಾಗಿ ರೂಪುಗೊಳ್ಳಲಿರುವ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸದ ಕಾರ್ಯಕ್ರಮ ಇಂದು ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಈ ಜಾಗ ದಾಖಲೆಗಳಲ್ಲಿ ವಿವಾದಿತವಾಗಿಯೇ ಉಳಿದಿತ್ತು; ಆದರೆ ಭಾರತೀಯರ ಭಾವಕೋಶದಲ್ಲಿ ಅದು ಯಾವತ್ತಿಗೂ ಶ್ರೀ ರಾಮಚಂದ್ರನಿಗೆ ಸೇರಿದ್ದಾಗಿತ್ತು. ಪುರಾತತ್ವ ಇಲಾಖೆಯ ಉತ್ಖನನ ಸಾಕ್ಷ್ಯಗಳು, ಸುಪ್ರೀಂ ಕೋರ್ಟ್‌ನ ತೀರ್ಪು ನಿಸ್ಸಂಶಯವಾಗಿ ಅದನ್ನು ದೃಢಪಡಿಸಿದವು. ಈಗ ಭವ್ಯ ರಾಮಮಂದಿರ ನಿರ್ಮಾಣವೊಂದೇ ಅಲ್ಲಿ ನಡೆಯಬೇಕಿರುವುದು. ಇಂದು ಅದರ ಮೊದಲ ಹೆಜ್ಜೆ.
ಭಾರತೀಯರು ಶ್ರೀರಾಮನ ಮೇಲಿಟ್ಟಿರುವ ಶ್ರದ್ಧೆ, ನಂಬಿಕೆ, ಭಕ್ತಿಗಳು ಅಪರಿಮಿತ. ಹಾಗಾಗಿಯೇ ಶ್ರೀರಾಮನ ಜನ್ಮಸ್ಥಾನ ಕೂಡ ಹಿಂದೂಗಳಿಗೆ ಪರಮ ಪವಿತ್ರ. ಮುಸ್ಲಿಮರಿಗೆ ಮೆಕ್ಕಾ, ಕ್ರೈಸ್ತರಿಗೆ ಜೆರುಸಲೇಂ ಹೇಗೋ ಹಾಗೆಯೇ ಹಿಂದೂಗಳಿಗೆ ಅಯೋಧ್ಯೆ. ಇತರೆಡೆ ಸಾವಿರಾರು ಮಸೀದಿ- ಚರ್ಚ್‌ಗಳಿದ್ದರೂ ಈ ತಾಣಗಳು ಹೇಗೆ ಈ ಮತೀಯರ ನಂಬಿಕೆಯ ಮುಖ್ಯತಾಣಗಳಾಗಿವೆಯೋ ಹಾಗೆಯೇ ದೇಶದಲ್ಲಿ ಸಾವಿರಾರು ಮಂದಿರಗಳಿದ್ದರೂ ರಾಮಜನ್ಮಭೂಮಿ ನಮ್ಮೆಲ್ಲರ ಶ್ರದ್ಧೆಯ ಕೇಂದ್ರಸ್ಥಾನ. ಶ್ರೀರಾಮ ಆಸ್ತಿಕರ ಶ್ರದ್ಧಾಬಿಂದು. ಆದ್ದರಿಂದಲೇ ಕೋರ್ಟ್ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವೀಕರಿಸಿ ಮಂದಿರ ನಿರ್ಮಾಣವನ್ನು ಸ್ವಾಗತಿಸಿದ್ದಾರೆ. ಶ್ರೀರಾಮಮಂದಿರದ ಶಿಲಾಪೂಜನ ಕಾರ್ಯಕ್ರಮ ದೇಶಾದ್ಯಂತ ಸಂಭ್ರಮದ ಅಲೆ ಹಬ್ಬಿಸಲು ಇನ್ನೊಂದು ಕಾರಣ, ಈ ಕುರಿತಾದ ಚಳವಳಿ ದೇಶವಿಡೀ ಮೂಡಿಸಿದ್ದ ಏಕತೆಯ ಭಾವ. ನೂರಾರು ಶ್ರದ್ಧೆ ನಂಬಿಕೆಗಳಲ್ಲಿ ಹಂಚಿಹೋಗಿರುವ ಭಾರತೀಯರು ಶ್ರೀರಾಮನೆಂಬ ಒಂದೇ ಬಿಂದುವಿನೆಡೆಗೆ ಕೇಂದ್ರೀಕರಿಸಿ, ಪ್ರಬಲವಾದ ಧಾರ್ಮಿಕ ಹೋರಾಟವೊಂದನ್ನು ರೂಪಿಸಿದ್ದು ಸ್ವಾತಂತ್ರ್ಯ ಹೋರಾಟದ ನಂತರದ ಪ್ರಮುಖ ಐತಿಹಾಸಿಕ ಘಟನೆಯೇ. ಭಾರತೀಯರೆಲ್ಲರನ್ನೂ ಹೀಗೆ ಕೇಂದ್ರೀಕರಿಸಬಲ್ಲ, ಒಗ್ಗೂಡಿಸಬಲ್ಲ ವಿಚಾರವೊಂದಿದ್ದರೆ ಅದು ಶ್ರೀರಾಮ ಮಾತ್ರ ಎಂಬುದು ರುಜುವಾತಾಯಿತು.
ಅಯೋಧ್ಯೆಯಲ್ಲಿ ರಾಮಮಂದಿರ ಯಾಕಿರಬೇಕು ಎಂಬ ಪ್ರಶ್ನೆಗೆ ಮುನ್ನ ಭಾರತೀಯರಿಗೆ ಶ್ರೀರಾಮನೆಂದರೆ ಏನು ಎಂಬುದನ್ನೂ ಉತ್ತರಿಸಿಕೊಳ್ಳಬೇಕು. ಶ್ರೀರಾಮನನ್ನು ಹೊರತುಪಡಿಸಿದ ಭಾರತವನ್ನಾಗಲೀ, ಭಾರತವಿಲ್ಲದೆ ಶ್ರೀರಾಮನನ್ನಾಗಲೀ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿನ ಭಾಷೆ, ಆಚರಣೆ, ಸ್ಮೃತಿ, ಸಂಸ್ಕೃತಿ, ಜಾನಪದ, ಸ್ಥಳಪುರಾಣ, ಸಾಹಿತ್ಯಗಳಲ್ಲಿ ರಾಮ ಹಾಸುಹೊಕ್ಕಾಗಿದ್ದಾನೆ. ಉತ್ತಮ ಆಡಳಿತವನ್ನು ರಾಮರಾಜ್ಯವೆಂದು ಹೆಸರಿಸಲಾಗುತ್ತದೆ. ರಾಮನ ಹೆಸರಿಲ್ಲದ ಹಿಂದೂ ಕುಟುಂಬ ಒಂದೂ ಇರಲಾರದು. ರಾಮಾಯಣದ ನಂಟು ಹೊಂದಿಲ್ಲದ ಭಾಗವೂ ದೇಶದಲ್ಲಿಲ್ಲ. ಅಯೋಧ್ಯೆಯ ಪ್ರಕರಣವನ್ನು ಕೋಟ್ಯಂತರ ಹಿಂದೂಗಳ ಶ್ರದ್ಧೆ ಹಾಗೂ ಆದರ್ಶದ ವಿಚಾರವಾಗಿ ನೋಡಿದ್ದರಿಂದಲೇ, ಕೋರ್ಟ್ ಪೀಠ ನೀಡಿದ 116 ಪುಟಗಳ ತೀರ್ಪಿನಲ್ಲೂ ಶ್ರೀರಾಮನ ಪೌರಾಣಿಕ, ಐತಿಹಾಸಿಕ ಹಾಗೂ ಧಾರ್ಮಿಕ ಅಸ್ತಿತ್ವದ ಕುರಿತು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನಾಗಿ, ಆದರ್ಶ ರಾಜನಾಗಿ ನಮ್ಮ ಸಮಾಜ ಅಂಗೀಕರಿಸಿದೆ. ಆತನ ಕುಟುಂಬವಾತ್ಸಲ್ಯ, ಭ್ರಾತೃಪ್ರೇಮ, ಧರ್ಮಪರತೆ, ನ್ಯಾಯನಿಷ್ಠುರತೆಗಳನ್ನು ಸಾರ್ವಕಾಲಿಕ ಮೌಲ್ಯಗಳಾಗಿ ಸ್ವೀಕರಿಸಿದೆ. ನೈತಿಕತೆ ಜೀವನಮೌಲ್ಯಗಳಿಗೂ ಆತ ಇನ್ನೊಂದು ಹೆಸರಾಗಿದ್ದಾನೆ. ಮನದನ್ನೆ ಸೀತೆಯ ಪ್ರೀತಿಪಾತ್ರ ಪತಿಯಾಗಿ, ಲಕ್ಷ್ಮಣ ಭರತ ಶತ್ರುಘ್ನರಿಗೆ ಮಾರ್ಗ ತೋರಬಲ್ಲ ಸಹೋದರನಾಗಿ, ದಶರಥ ಕೌಸಲ್ಯೆಯರ ಪ್ರೇಮದ ಕಂದನಾಗಿ, ವಸಿಷ್ಠ ವಿಶ್ವಾಮಿತ್ರರ ನಿಷ್ಠೆಯ ಶಿಷ್ಯನಾಗಿ, ಭಾವುಕ ಹನುಮಂತನ ನೆಚ್ಚಿನ ಸ್ವಾಮಿಯಾಗಿ- ರಾಮನು ಎಲ್ಲ ಉನ್ನತ ಕೌಟುಂಬಿಕ ಮೌಲ್ಯಗಳ ನೆಲೆಯಾಗಿದ್ದಾನೆ. ಇಂಥ ವ್ಯಕ್ತಿತ್ವವನ್ನು ನಮ್ಮ ತಲೆಮಾರಿನ ಅಧ್ಯಾತ್ಮಿಕ ಪ್ರೇಮದ ಕೇಂದ್ರವಾಗಿ ಕಾಪಾಡಿಕೊಳ್ಳುವುದು ಹಾಗೂ ಮುಂದಿನ ತಲೆಮಾರಿಗೆ ಮೌಲ್ಯಗಳ ಖನಿಯಾಗಿ ದಾಟಿಸುವುದು ಅಗತ್ಯವಾಗಿದೆ.
ಶ್ರೀರಾಮಮಂದಿರ ನಿರ್ಮಾಣದ ಆರಂಭವೆಂದರೆ ಬರಿಯ ಶಿಲಾನ್ಯಾಸವಲ್ಲ; ಭಾರತೀಯ ಜನಜೀವನದ ಧಾರ್ಮಿಕ ಜಾಗರಣದ, ಆಧ್ಯಾತ್ಮಿಕ ಎಚ್ಚರದ, ನೈತಿಕ ಪುನರುತ್ಥಾನದ ಪ್ರತೀಕ. ಅದು ನಮ್ಮ ಶ್ರದ್ಧೆಯ ಶಿಖರಸ್ಥಾನ. ಭರತವರ್ಷದ ಹೆಮ್ಮೆಯ ಕಳಸ. ಮಂದಿರದ ಕನಸು ಶೀಘ್ರ ನನಸಾಗಲು ನಾವೆಲ್ಲರೂ ಕೈಜೋಡಿಸೋಣ.