ಅವರಿಗೆ ಪಂಡಿತ್​ಜಿ, ಇವರಿಗೇಕೆ ಭೀಮರಾವ್ ಎಂದಷ್ಟೇ ಕರೆದರು?

ಈ ಲೇಖನದ ತಲೆಬರಹ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಭಾಷಣದಿಂದ ಆಯ್ದುಕೊಂಡದ್ದು. ಈ ಪ್ರಶ್ನೆ ಮತ್ತು ಅದರೊಳಗಿನ ಅರ್ಥದ ಹಿನ್ನೆಲೆಯಲ್ಲಿ ಆಲೋಚನೆ ಮಾಡಿದರೆ ಈಗ ನಮಗೆ ಕಾಡುವ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆ.

 ಭಾರತದ ಸಂವಿಧಾನಕ್ಕೆ ನೂರಾರು ಬಾರಿ ತಿದ್ದುಪಡಿ ಮಾಡಿದ ನಂತರ ಇದೀಗ ಅದೇ ವಿಚಾರ ಏಕಾಏಕಿ ಚರ್ಚೆಯ ಮುನ್ನೆಲೆಗೆ ಬಂದು ನಿಂತುಕೊಂಡಿದೆ. ಸಂವಿಧಾನದ ಆಶಯಗಳನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸಿ ಅದರ ಮೂಲ ಆಶಯ ಸಂರಕ್ಷಿಸಬೇಕಾದ ಸುಪ್ರೀಂಕೋರ್ಟ್ ತೀರ್ಪು ಕೂಡ ದೇಶದಲ್ಲಿ ಹಿಂಸೆಯ ಜ್ವಾಲೆ ಉರಿಯಲು ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವೊಂದು ಐತಿಹಾಸಿಕ ಘಟನಾವಳಿಗಳ ಕುರಿತು ಆರೋಗ್ಯಕರ ಚರ್ಚೆ ಮಾಡುವ ಪ್ರಸಂಗ ಈಗ ಎದುರಾಗಿದೆ.

ಅಂಬೇಡ್ಕರ್ ಅವರಿಗೆ ಮತ್ತು ಅವರ ವಿಚಾರಕ್ಕೆ ಈಗ ಅನ್ಯಾಯ ಆಗುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ ಇತಿಹಾಸದಲ್ಲಿ ಅದರಲ್ಲೂ ಅಂಬೇಡ್ಕರ್ ಅವರ ಜೀವಿತಾವಧಿಯಲ್ಲೇ ಅವರಿಗೆ ಹಲವು ವಿಧದಲ್ಲಿ ಅನ್ಯಾಯ ಮಾಡಲಾಗಿತ್ತು, ಅಪಮಾನ, ಅಸಡ್ಡೆ, ಉದಾಸೀನ ಮಾಡಲಾಗಿತ್ತು ಎಂಬ ಸತ್ಯ ಹಲವರಿಗೆ ಗೊತ್ತಿಲ್ಲ. ಕೆಲವರಿಗೆ ಅದು ಗೊತ್ತಿದ್ದರೂ ಅವರು ಹೇಳುವ ಸ್ಥಿತಿಯಲ್ಲಿಲ್ಲ.

ಅಂಬೇಡ್ಕರ್ ಅವರಿಗೆ ಅತಿಹೆಚ್ಚು ಅನ್ಯಾಯ ಆಗಿದ್ದು ಕಾಂಗ್ರೆಸ್ ಪಕ್ಷ ಮತ್ತು ನೆಹರು ಅವರಿಂದ ಎಂಬುದನ್ನು ಡಾ. ಸುಬ್ರಮಣಿಯನ್ ಸ್ವಾಮಿ ನಿದರ್ಶನ ಸಹಿತ ಹೇಳುತ್ತಾರೆ. ಡಾ. ಸ್ವಾಮಿ ಅವರು ಕೊಡುವ ಉದಾಹರಣೆಗಳ ಪೈಕಿ ಒಂದು ಉದಾಹರಣೆ ಬಹಳ ಆಸಕ್ತಿಕರವಾಗಿದೆ.

‘ದಲಿತ ಸಮುದಾಯಕ್ಕೆ ಸೇರಿದ ಭೀಮರಾವ್ ಅಂಬೇಡ್ಕರ್ ಪಿಎಚ್​ಡಿ ಅಧ್ಯಯನಕ್ಕಾಗಿ 1916ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ತೆರಳುತ್ತಾರೆ. ಅರ್ಥಶಾಸ್ತ್ರದಲ್ಲಿ ಪಿಎಚ್​ಡಿ ಪದವಿ ಪಡೆಯುತ್ತಾರೆ. ಆ ನಂತರ ಡಾ. ಅಂಬೇಡ್ಕರ್ ಕಾನೂನು ವ್ಯಾಸಂಗಕ್ಕಾಗಿ ಲಂಡನ್​ಗೆ ತೆರಳುತ್ತಾರೆ. ಟಾಪ್ ಕ್ಲಾಸ್​ನಲ್ಲಿ ಕಾನೂನು ಪದವಿ ಪಡೆದು ಭಾರತಕ್ಕೆ ಹಿಂದಿರುಗುತ್ತಾರೆ. ಕಾನೂನು ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರಾದ ಅಂಬೇಡ್ಕರ್ ಭಾರತದ ಸಂವಿಧಾನದ ಕರಡನ್ನು ಸಿದ್ಧಪಡಿಸುತ್ತಾರೆ’. ಇದು ಒಂದು ವಿಚಾರ. ಹಾಗೇನೆ ‘ಜವಾಹರಲಾಲ್ ನೆಹರು ಉನ್ನತ ವ್ಯಾಸಂಗಕ್ಕಾಗಿ ಕೇಂಬ್ರಿಜ್ ವಿವಿಗೆ ಸೇರುತ್ತಾರೆ. ಆದರೆ ಅವರು ಪರೀಕ್ಷೆಯಲ್ಲಿ ಫೇಲಾಗುತ್ತಾರೆ. ವಿಚಿತ್ರ ಎಂದರೆ ಪದವಿ ಪರೀಕ್ಷೆಯಲ್ಲಿ ಫೇಲಾದ ನೆಹರು ಅವರನ್ನು ಪಂಡಿತ್​ಜಿ ಎಂದು ಕರೆದ ಕಾಂಗ್ರೆಸ್ಸಿಗರು, ಉನ್ನತ ರ್ಯಾಂಕ್​ನಲ್ಲಿ ಡಬಲ್ ಡಿಗ್ರಿ ಪಡೆದಿದ್ದ ಅಂಬೇಡ್ಕರ್ ಅವರನ್ನು ಭೀಮರಾವ್ ಅಂತ ಮಾತ್ರ ಕರೆಯುತ್ತಿದ್ದರು’. ಕಾಂಗ್ರೆಸ್ಸಿಗರು ಅಂಬೇಡ್ಕರ್ ಅವರನ್ನು ಹೇಗೆ ಉಪೇಕ್ಷೆ ಮಾಡಿದ್ದರು ಎಂಬುದಕ್ಕೆ ಉದಾಹರಣೆ ಕೊಡುವ ಸ್ವಾಮಿ ಭಾಷಣದ ವಿಡಿಯೋ ಯುಟ್ಯೂಬಲ್ಲಿ ಲಭ್ಯವಿದೆ. ಆಸಕ್ತರು ನೋಡಬಹುದು.

ನೆಹರು ಅವಕೃಪೆಗೆ ತುತ್ತಾಗಿದ್ದಂತಹ ಡಾ. ಅಂಬೇಡ್ಕರ್ ಅದೆಷ್ಟೇ ಪ್ರಯತ್ನಪಟ್ಟರೂ, ಎಲ್ಲ ಅರ್ಹತೆಗಳನ್ನು ಹೊಂದಿದ್ದರೂ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಲೇ ಇಲ್ಲ ಎಂಬುದು ಕಹಿಯಾದ ಸತ್ಯ. ನೆಹರು ಅಂಬೇಡ್ಕರ್​ರನ್ನು ಮಾತ್ರ ಅಲ್ಲ, ಸಮರ್ಥರಾದಂಥ ಒಬ್ಬನೇ ಒಬ್ಬ ಬೇರೆ ನಾಯಕ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಬಿಡಲಿಲ್ಲ ಎಂಬುದನ್ನು ಅನೇಕರು ಉಲ್ಲೇಖಿಸುತ್ತಾರೆ. ಆ ರೀತಿ ನೆಹರು ಅವರಿಂದ ಸಂತ್ರಸ್ತರಾದವರಲ್ಲಿ ಅಂಬೇಡ್ಕರ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಮುಖರು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮಧ್ಯಂತರ ಸರ್ಕಾರ ರಚನೆ ಆಯಿತು. ನೆಹರು ಪ್ರಧಾನಿ ಆದರು. ಆ ಸರ್ಕಾರದ ಸಂಪುಟದಲ್ಲಿ ಅಂಬೇಡ್ಕರ್​ಗೆ ಉದ್ದೇಶಪೂರ್ವಕವಾಗಿ ಸ್ಥಾನ ನೀಡಲಿಲ್ಲ. ಮುಂದೆ 1951-52ರ ನಡುವೆ ಐದು ತಿಂಗಳ ಅವಧಿಯಲ್ಲಿ ಲೋಕಸಭೆಗೆ ಚುನಾವಣೆ ನಡೆಯಿತು. ಆ ಚುನಾವಣೆ ನಡೆಯುವ ಪೂರ್ವದಲ್ಲಿ ನೆಹರು ಸಂಪುಟದಲ್ಲಿ ಕೈಗಾರಿಕೆ ಮಂತ್ರಿಯಾಗಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ನೆಹರು ಧೋರಣೆ ಧಿಕ್ಕರಿಸಿ ಹೊರಬಂದು ಜನಸಂಘ ಸ್ಥಾಪನೆ ಮಾಡಿದರು. ಡಾ. ಅಂಬೇಡ್ಕರ್ ಸ್ವತಂತ್ರವಾಗಿ ‘ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್’ ಎಂಬ ರಾಜಕೀಯೇತರ ಸಂಸ್ಥೆ ಸ್ಥಾಪನೆ ಮಾಡಿದರು. ನಂತರ ಅದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಎಂಬ ಹೆಸರಲ್ಲಿ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡಿತು. ಅಂಬೇಡ್ಕರ್ ಮಾತ್ರವಲ್ಲ, ಸ್ವಾಭಿಮಾನ, ಸ್ವಸಾರ್ಮರ್ಥ್ಯ ಹೊಂದಿದ ಇನ್ನೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರಹೋದರು. ಅಂಥವರಲ್ಲಿ ಜೆ.ಬಿ. ಕೃಪಲಾನಿ ಕಿಸಾನ್ ಮಜದೂರ್ ಪಾರ್ಟಿ ಕಟ್ಟಿದರು. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ(ಜೆಪಿ) ಅವರ ಮುಂದಾಳುತ್ವದಲ್ಲಿ ಸೋಷಲಿಸ್ಟ್ ಪಾರ್ಟಿ ಸ್ಥಾಪನೆ ಆಯಿತು. ಇಷ್ಟಾದರೂ ನೆಹರು ಪಾರುಪತ್ಯಕ್ಕೆ ಯಾವುದೇ ಭಂಗ ಬರುವುದಿಲ್ಲ. ನೆಹರು ಬಹುಮತ ಪಡೆದು ಅಧಿಕಾರ ಹಿಡಿಯುತ್ತಾರೆ. ಎಷ್ಟೆಂದರೆ ಲೋಕಸಭೆಯಲ್ಲಿ ಪ್ರತಿಪಕ್ಷವೇ ಇಲ್ಲದಂತಹ ಶೂನ್ಯ ಆವರಿಸಿಬಿಡುತ್ತದೆ!

ವಿಶೇಷ ಅಂದರೆ ತಮ್ಮ ನಡೆಯಿಂದ ಅಂಬೇಡ್ಕರ್ ಮುನಿಸಿಕೊಂಡಿರುವುದು ಗೊತ್ತಾದರೂ ನೆಹರು ಕ್ಯಾರೆ ಎನ್ನುವುದಿಲ್ಲ. ಮೊದಲ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್​ಗೆ ನೆಹರು ಕಾಂಗ್ರೆಸ್ ಟಿಕೆಟ್ ನೀಡುವುದಿಲ್ಲ. ಆಗ ಅಂಬೇಡ್ಕರ್ ಅವರು ಷೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಷನ್ನಿಂದಲೇ ಬಾಂಬೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಆಗ ಅಂಬೇಡ್ಕರ್ ವಿರುದ್ಧ ನಾರಾಯಣ ಕಜರೋಲ್​ಕರ್ ಎಂಬುವರನ್ನು ನೆಹರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸುತ್ತಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಕಜರೋಲ್​ಕರ್ ಲೋಕಸಭೆಗೆ ಆಯ್ಕೆಯಾಗುತ್ತಾರೆ. ಆಗ ಕಾಂಗ್ರೆಸ್ ಪಕ್ಷದಲ್ಲಿದ್ದ ಬಹುತೇಕ ದಲಿತ ನಾಯಕರು ಬಾಬು ಜಗಜೀವನರಾಮ್ ಅವರ ಡಿಪ್ರೆಸ್ಡ್ ಕ್ಲಾಸ್ ಲೀಗಿಗೆ ಸೇರ್ಪಡೆಗೊಳ್ಳುತ್ತಾರೆ.

ಇನ್ನೂ ಒಂದು ವಿಚಾರ ಇದೆ. 1952ರ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುವುದಕ್ಕೂ ಪೂರ್ವದಲ್ಲಿ ಅಂದರೆ 1946ರಲ್ಲಿ ಪ್ರಾಂತೀಯ ಶಾಸನಸಭೆಗಳಿಗೆ ಚುನಾವಣೆ ನಡೆಯುತ್ತದೆ. ಆ ಚುನಾವಣೆಯಲ್ಲಿ ಕೂಡ ಅಂಬೇಡ್ಕರ್ ಅವರಿಗೆ ಅಪಾರ ಜನಬೆಂಬಲ ಹೊಂದಿರುವ ಮುಂಬೈ ಪ್ರಾಂತೀಯ ಸಭೆ ಬದಲು ಜನಬೆಂಬಲ ಇಲ್ಲದ ಬಂಗಾಳ ಪ್ರಾಂತ್ಯದಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಆ ಚುನಾವಣೆಯಲ್ಲಿ ಅಂಬೇಡ್ಕರ್ ಕೊನೆಗೆ ಸೋಲನುಭವಿಸುತ್ತಾರೆ. ಅಂಬೇಡ್ಕರ್ ಅವರ ಜೀವನದಲ್ಲಿ ಅದೊಂದೇ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವುದು. ಅದು ಕೂಡ ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರಕ್ಕೋಸ್ಕರವಾಗಿ!

ಇದೆಲ್ಲದರ ಹಿಂದೆ ಕೆಲಸ ಮಾಡಿದ್ದು ಕ್ಯಾಬಿನೆಟ್ ಮಿಷನ್ ಪ್ಲಾನ್ ನೀಡಿದ ನೆಹರು ಆಪ್ತ ಲಾರ್ಡ್ ಮೌಂಟ್ ಬ್ಯಾಟನ್. ಇಷ್ಟಾದರೂ ಸರ್ದಾರ್ ಪಟೇಲ್, ಎಸ್.ಕೆ. ಪಾಟೀಲ, ಆಚಾರ್ಯ ದೋಂಡೆ ಅವರ ಪ್ರಯತ್ನದಿಂದ ಕೆಲ ವರ್ಷ ಅಂಬೇಡ್ಕರ್ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುತ್ತಾರೆ ಮತ್ತು ಸಂವಿಧಾನ ರಚನೆಯಲ್ಲಿ ಸಂಪೂರ್ಣ ಯೋಗದಾನ ನೀಡುತ್ತಾರೆ ಎಂದು ಅಂಬೇಡ್ಕರ್ ಅವರ ಜೀವನಚರಿತ್ರೆ ಬರೆದ ಧನಂಜಯ ಕೀರ್ ಅವರು ಹೇಳುತ್ತಾರೆ. ಇದಿಷ್ಟು ಅಂಬೇಡ್ಕರ್ ಅವರಿಗೆ ಅವರ ಜೀವಿತಾವಧಿಯಲ್ಲೇ ಮಾಡಿದ ಅಪಚಾರದ ಪ್ರಮುಖ ಉಲ್ಲೇಖಗಳು.

ಭಾರತದ ಸಂವಿಧಾನ ತಿದ್ದುಪಡಿಗೆ ಹೊರತಾದದ್ದೇ?:ಭಾರತದ ಸಂವಿಧಾನಕ್ಕೆ ತಿದ್ದುಪಡಿ ತರುವ ಪ್ರಸ್ತಾಪ ಮಹಾನ್ ಅಪಚಾರ ಎಂಬಂತೆ ಈಗ ಚರ್ಚೆ ನಡೆಯುತ್ತಿದೆ. ಈ ವಾದವನ್ನು ಕೇಳಿದರೆ ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಇದುವರೆಗೆ ಒಂದೂ ತಿದ್ದುಪಡಿ ಆಗಿಲ್ಲವೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಆದರೆ ವಾಸ್ತವದಲ್ಲಿ ಇದುವರೆಗೆ ಒಟ್ಟು 122 ಬಾರಿ ನಮ್ಮ ಸಂವಿಧಾನ ತಿದ್ದುಪಡಿಗೆ ಒಳಪಟ್ಟಿದೆ. ತಿದ್ದುಪಡಿಗೆ ಭಾರತದ ಸಂವಿಧಾನ ಆತ್ಮದಂತಿರುವ ಪೀಠಿಕೆ (PREAMBLE) ಕೂಡ ಹೊರತಾಗಿಲ್ಲ. 1976ನೇ ಇಸವಿಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ವೇಳೆ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ದಾರ್ ಸ್ವರ್ಣ ಸಿಂಗ್ ನೇತೃತ್ವದ ಸಮಿತಿ ನೇಮಕ ಮಾಡಿ ಸಮಾಜವಾದಿ ಮತ್ತು ಸೆಕ್ಯುಲರ್ ಎಂಬ ಎರಡು ಪದಗಳನ್ನು ಪೀಠಿಕೆಯಲ್ಲೇ ಸೇರ್ಪಡೆ ಮಾಡಿಸುತ್ತಾರೆ. ಈ ಎರಡೂ ಪದಗಳು ಈಗ ಹೇಗೆ ಹಾಸ್ಯಾಸ್ಪದವಾಗಿವೆ ಮತ್ತು ಅರ್ಥಹೀನ ಆಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಸಂವಿಧಾನದ ಸಂರಕ್ಷಕನಿಗೇ ಕಂಟಕ: ತಾಂತ್ರಿಕವಾಗಿ ನಮ್ಮ ಸಂವಿಧಾನ ಮತ್ತು ಸಂವಿಧಾನದ ಆಶಯಗಳ ಸಂರಕ್ಷಣೆಯ ಹೊಣೆ ಭಾರತದ ಸಂಸತ್ತಿಗೆ ಇದೆ. ಅಕಸ್ಮಾತ್ ಸಂಸತ್ತು ಹೊಣೆಗಾರಿಕೆ ನಿಭಾಯಿಸಲು ವಿಫಲವಾದರೆ ಅಂತಿಮವಾಗಿ ಸಂವಿಧಾನದ ಆಶಯಗಳ ರಕ್ಷಣೆಯ ವಾಸ್ತವಿಕ ಹೊಣೆ ಭಾರತದ ಸುಪ್ರೀಂಕೋರ್ಟಿಗಿದೆ. ಆದರೆ 1985ರಲ್ಲಿ ಶಾಬಾನೋ ಪ್ರಕರಣದ ತೀರ್ಪು ಬಂದಾಗ ಅಂದಿನ ರಾಜೀವ ಗಾಂಧಿ ಸರ್ಕಾರ ಸಂಸತ್ತಿನಲ್ಲಿ ಹೊಸ ಕಾಯ್ದೆ ರೂಪಿಸುವ ಮೂಲಕ ಸುಪ್ರೀಂಕೋರ್ಟ್ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿತು. ನಿಜಾರ್ಥದಲ್ಲಿ ಇದು ಭಾರತದ ಸಂವಿಧಾನದ ಮೂಲ ಆಶಯಕ್ಕೆ ನೀಡಿದ ಮರ್ವಘಾತವಾಗಿತ್ತು.

ನ್ಯಾ.ದೀಪಕ್ ಮಿಶ್ರಾ ಪ್ರಕರಣದ ಒಳಸುಳಿ ಏನು?:ನ್ಯಾ.ದೀಪಕ್ ಮಿಶ್ರಾ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಯನ್ನಾಗಿ ಮಾಡಿದ್ದು, ನಂತರ ಸುಪ್ರೀಂಕೋರ್ಟ್​ಗೆ ಬಡ್ತಿ ನೀಡಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರ. ಆದರೆ ಅದೇ ದೀಪಕ್ ಮಿಶ್ರಾ ವಿರುದ್ಧ ಸುಪ್ರೀಂಕೋರ್ಟ್​ನ ನಾಲ್ವರು ನ್ಯಾಯಮೂರ್ತಿಗಳು ಆರೋಪ ಮಾಡಿದರು ಎಂಬ ನೆಪ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಇತರ ಮಿತ್ರಪಕ್ಷಗಳು ಮಿಶ್ರಾ ಅವರನ್ನು ಪದಚ್ಯುತಿಗೊಳಿಸುವ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಿದ್ದವು. ಇಷ್ಟೆಲ್ಲ ಬೆಳವಣಿಗೆಗೆ ವಾಸ್ತವಿಕ ಕಾರಣ ಎಂದರೆ ನ್ಯಾ.ದೀಪಕ್ ಮಿಶ್ರಾ ಅವರು ಅಯೋಧ್ಯೆ ಪ್ರಕರಣದ ವಿಚಾರಣೆಯನ್ನ ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ಮುಂದಾದದ್ದು. ಹಾಗಾದರೆ ಇವರು ಮಾಡುತ್ತಿರುವ ಕೆಲಸ ಸಂವಿಧಾನದ ಹಿತಾಸಕ್ತಿಗೆ ಪೂರಕವೇನು?

ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ವಿವಾದ: ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ ಆಗುತ್ತಿದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಹೀಗೆ-‘ದಲಿತರ ಮೇಲೆ ದೌರ್ಜನ್ಯ ನಡೆದಿರುವುದು ಮೇಲ್ನೋಟಕ್ಕೆ ಮನವರಿಕೆ ಆಗದೆ ಇದ್ದಲ್ಲಿ, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಬೇಕು. ದೂರು ನೀಡಿದ ತಕ್ಷಣ ಆರೋಪಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತಿಲ್ಲ. ಆರೋಪಿಯನ್ನು ಬಂಧಿಸುವ ಪೂರ್ವದಲ್ಲಿ ಸಕ್ಷಮ ಮೇಲಧಿಕಾರಿಯ ಅನುಮತಿ ಪಡೆಯಬೇಕು. ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಸರ್ಕಾರಿ ಅಧಿಕಾರಿಯೊಬ್ಬನ ವಿರುದ್ಧ ದೂರು ನೀಡಿದರೆ ನೋಡಲ್ ಅಧಿಕಾರಿಯ ಅನುಮತಿ ಪಡೆದೇ ಪ್ರಕರಣ ದಾಖಲಿಸಿಕೊಳ್ಳಬೇಕು. ಕಾಯ್ದೆ ನೆಪದಲ್ಲಿ ಅಮಾಯಕರಿಗೆ ತೊಂದರೆ ಆಗಬಾರದು’. ವಾಸ್ತವದಲ್ಲಿ ಕೇಂದ್ರ ಸರ್ಕಾರಕ್ಕೂ ಈ ತೀರ್ಪಿಗೂ ಯಾವ ಸಂಬಂಧವೂ ಇಲ್ಲ. ಆದರೂ ತೀರ್ಪು ಬಂದ ಮರುಕ್ಷಣದಲ್ಲಿ ಕೇಂದ್ರ ಸರ್ಕಾರ ಮರುಪರಿಶೀಲನೆ ಅರ್ಜಿ ಹಾಕಿತು. ಆದರೂ ಕೇಂದ್ರದ ವಿರುದ್ಧ ಭಾರತ್ ಬಂದ್​ಗೆ ಕರೆ ನೀಡಲಾಯಿತು. ಕರೆ ನೀಡಿದ್ದು ಭಾರತ್ ಬಂದ್​ಗೆ ಆದರೂ, ಬಂದ್, ಹಿಂಸಾಚಾರದ ಮೂಲಕ ಅಮಾಯಕರ ಸಾವು ಆಗಿದ್ದು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ಮಹಾರಾಷ್ಟ್ರ ಮುಂತಾದ ಒಂದು ನಿರ್ದಿಷ್ಟ ಪಕ್ಷದ ಆಳ್ವಿಕೆ ಇರುವ ರಾಜ್ಯಗಳಲ್ಲಿ ಮಾತ್ರ. ಬೇರೆ ರಾಜ್ಯಗಳಲ್ಲಿ ಪ್ರತಿಭಟನೆ ಏಕೆ ನಡೆಯಲಿಲ್ಲ? ಇದು ಸಂವಿಧಾನ/ನ್ಯಾಯಪೀಠದ ನಿಷ್ಠೆಯೋ ಅವಕಾಶವಾದದ ಪರಾಕಾಷ್ಠೆಯೋ?

ಮಾಯಾವತಿ ಈಗೇಕೆ ರಾಗ ಬದಲಿಸುತ್ತಾರೆ?: ಕಳೆದ 2007ರಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ಆ ವರ್ಷದ ಮೇ 20ರಂದು ಮತ್ತು ಅಕ್ಟೋಬರ್ 29ರಂದು ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಹೊರಡಿಸಿ ಇಂದು ಸುಪ್ರೀಂಕೋರ್ಟ್ ಏನು ಹೇಳಿದೆಯೋ ಅದನ್ನೇ ಮಾಯಾವತಿ ತಮ್ಮ ಅಧಿಕಾರಿಗಳಿಗೆ ಆದೇಶ ಮಾಡಿದ್ದರು. ಆದರೆ ಇಂದು ಅದೇ ಮಾಯಾವತಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಬೀದಿಗಿಳಿದಿದ್ದಾರೆ. ಈ ದ್ವಂದ್ವ ಯಾಕಾಗಿ?

ಒಂದು ಸಂಗತಿಯನ್ನು ಅರಿತುಕೊಳ್ಳಬೇಕು. ಅಸ್ಪಶ್ಯತೆ ನಿವಾರಣೆ, ಅಂಬೇಡ್ಕರ್ ಅವರ ಆಶಯಗಳ ಸಂರಕ್ಷಣೆ, ಸಂವಿಧಾನದ ಪಾವಿತ್ರ್ಯ ಕಾಪಾಡುವ ಸಂದರ್ಭದಲ್ಲಿ ಮಹಾನ್ ಚಿಂತಕ ಅಂಬೇಡ್ಕರ್ ಅವರ ಜೀವನವೇ ನಿಜವಾಗಿ ಆದರ್ಶವಾಗಬೇಕು.

ಉದಾಹರಣೆಗೆ ಜಾತಿ ವ್ಯವಸ್ಥೆಯಿಂದ ಕುದ್ದುಹೋಗಿದ್ದ ಅಂಬೇಡ್ಕರ್ ಬೌದ್ಧಮತ ಸ್ವೀಕಾರ ಮಾಡುವ ಮುನ್ನ 20 ವರ್ಷಕಾಲ ಗಾಢವಾದ ಅಧ್ಯಯನ ಮಾಡಿದ್ದರು. ಆ ವೇಳೆ ಅಂಬೇಡ್ಕರ್ ತಳೆದ ಸ್ಪಷ್ಟ ನಿಲುವುಗಳೇ ಈಗಲೂ ಆದರ್ಶವಾಗಬೇಕು.

ಅಂಬೇಡ್ಕರ್ ಹಿಂದೂಧರ್ಮ ತೊರೆಯುತ್ತಾರೆಂಬುದು ಗೊತ್ತಾದಾಗ ಮುಸ್ಲಿಂ ಮತ್ತು ಕ್ರೈಸ್ತ ಮತದವರು ತಮ್ಮ ತಮ್ಮ ಮತಕ್ಕೆ ಸೇರುವಂತೆ ಆಹ್ವಾನ ನೀಡುತ್ತಾರೆ. ಆಗ ಅಂಬೇಡ್ಕರ್ ಹೇಳಿದ್ದು ಎಲ್ಲೇ ಹೋದರೂ ನಮ್ಮ ಒಳಿತಿಗಾಗಿ ಮಾತ್ರ ನಾವು ಹೋರಾಡುತ್ತೇವೆ ಎಂದು (‘We are fully conscious of the fact that go anywhere we will, we would have to fight for our welfare if we took to Christianity or Islam’.)

ಅದರ ಜತೆಗೆ ಈಗ ಆಗುತ್ತಿರುವ ಅನ್ಯಾಯ ಪ್ರತಿಭಟಿಸಿ ಪರಕೀಯ ಧರ್ಮ, ಸಂಸ್ಕೃತಿ ಅಪ್ಪಿಕೊಳ್ಳುವುದರಿಂದ ಭಾರತದ ನಿಮ್ನವರ್ಗಕ್ಕೆ ಏನು ಲಾಭ ಆಗುತ್ತದೆ ಎಂದು ಅಂಬೇಡ್ಕರ್ ಪ್ರಶ್ನೆ ಮಾಡಿದ್ದರá– ‘ನಿಮ್ನವರ್ಗದವರು ಒಂದೊಮ್ಮೆ ಇಸ್ಲಾಂ ಅಥವಾ ಕ್ರೖೆಸ್ತಮತವನ್ನು ಸೇರಿಕೊಂಡರೆ, ಅವರು ಹಿಂದೂ ಧರ್ಮದಿಂದ ಮಾತ್ರವಲ್ಲದೆ ಹಿಂದೂ ಸಂಸ್ಕೃತಿಯಿಂದಲೂ ಆಚೆಗೆ ಹೋಗುತ್ತಾರೆ. ಇಂಥದೊಂದು ಮತಾಂತರವು ಒಟ್ಟಾರೆಯಾಗಿ ದೇಶದ ಮೇಲೆ ಬೀರುವ ಪರಿಣಾಮವೇನು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ್ದು ಸೂಕ್ತ’ ಎಂದಿದ್ದರು.

‘ಭಾರತದಲ್ಲಿರುವ ಕೆಲವು ಜನರು, ಹಿಂದೂಧರ್ಮದಲ್ಲಿರುವ ಕೆಲವರು ನಮಗೆ ಅನ್ಯಾಯ ಮಾಡಿದ್ದಾರೆ. ಆ ಕಾರಣಕ್ಕಾಗಿ ನಾವು ನಮ್ಮ ರಾಷ್ಟ್ರನಿಷ್ಠೆಯನ್ನು ಎಂದಿಗೂ ಬದಲಿಸಲಾಗದು’ ಎಂದು ಅಂಬೇಡ್ಕರ್ ಖಡಾಖಂಡಿತವಾಗಿ ಹೇಳಿದ್ದರು ಎಂಬುದನ್ನು ಅಂಬೇಡ್ಕರ್ ಜೀವನಚರಿತ್ರೆ ಬರೆದ ಧನಂಜಯ ಕೀರ್ ಅಭಿಪ್ರಾಯ ಆಧರಿಸಿ ಶಚಿ ರೈರಿಕರ್ ಎಂಬ ಲೇಖಕರು ಬರೆದಿದ್ದಾರೆ. ಸಹೋದರಿ ಮಾಯಾವತಿ ಆದಿಯಾಗಿ, ರಾಹುಲ್ ಗಾಂಧಿ, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿವರೆಗೆ ಎಲ್ಲರೂ ಅಂಬೇಡ್ಕರರ ಈ ಚಿಂತನೆಯ ಹಿನ್ನೆಲೆಯಲ್ಲಿ ಆಲೋಚನೆ ಮಾಡುವುದು ಒಳಿತಲ್ಲವೇ?

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top