ಎಪಿಎಂಸಿಗಾಗಿ ಹೋರಾಟ – ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್‌ ಎಚ್ಚರಿಕೆ

– ಸುಗ್ರೀವಾಜ್ಞೆ ಜಾರಿಗೆ ತಂದರೆ 18ರಿಂದ ಬಂದ್‌ ಎಚ್ಚರಿಕೆ
– ಸರಕಾರದ ಮೇಲೆ ಒತ್ತಡ, ಇಂದು ಸಂಪುಟದಲ್ಲಿ ಚರ್ಚೆ

ವಿಕ ಸುದ್ದಿಲೋಕ ಬೆಂಗಳೂರು
ಎಪಿಎಂಸಿ ಕಾಯಿದೆ ತಿದ್ದುಪಡಿ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ಕಾಣಿಸಿಕೊಂಡಿದೆ. ಈ ನಡುವೆ, ರಾಜ್ಯ ಸರಕಾರವು ಕೇಂದ್ರದ ಒತ್ತಡಕ್ಕೆ ಮಣಿದು ಅವಸರದಿಂದ ಕಳುಹಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಬುಧವಾರ ವಾಪಸ್‌ ಕಳಿಸಿದ್ದಾರೆ. ಗುರುವಾರ ಸಂಪುಟದಲ್ಲಿ ಚರ್ಚೆ ನಡೆಸಿಯೇ ಸುಗ್ರೀವಾಜ್ಞೆಯನ್ನು ಅಂತಿಮಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಸರಕಾರದ ನಡೆ ಕುತೂಹಲ ಮೂಡಿಸಿದೆ.

ಬುಧವಾರ ಎಪಿಎಂಸಿ ವರ್ತಕರು ರಾಜ್ಯದ ಬಹುತೇಕ ಕಡೆ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕೆಲವು ಕಡೆ ಇಡೀ ದಿನ ವ್ಯವಹಾರವನ್ನು ಬಂದ್‌ ಮಾಡಲಾಗಿತ್ತು. ಒಂದೊಮ್ಮೆ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಯನ್ನು ಮತ್ತೊಮ್ಮೆ ರಾಜ್ಯಪಾಲರಿಗೆ ಕಳುಹಿಸಲು ಮುಂದಾದರೆ ಮೇ 18ರಿಂದ ಅನಿರ್ದಿಷ್ಟ ಕಾಲ ರಾಜ್ಯದ ಎಲ್ಲ 177 ಎಪಿಎಂಸಿ ಮಾರುಕಟ್ಟೆಗಳ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಹೋರಾಟ ನಡೆಸಲು ಎಫ್‌ಕೆಸಿಸಿಐ ಮತ್ತು ಎಪಿಎಂಸಿ ವರ್ತಕರು ಎಚ್ಚರಿಕೆ ನೀಡಿದ್ದಾರೆ. ಎಪಿಎಂಸಿಯನ್ನು ಅವಲಂಬಿಸಿರುವ 20 ಲಕ್ಷಕ್ಕೂ ಅಧಿಕ ಮಂದಿ ಇದಕ್ಕೆ ಬೆಂಬಲವಾಗಿದ್ದಾರೆ ಎಂದು ಹೇಳಲಾಗಿದೆ. ಬುಧವಾರದ ಒಂದೇ ದಿನದ ಬಂದ್‌ನಿಂದ 100 ಕೋಟಿ ರೂ. ವಹಿವಾಟಿಗೆ ಧಕ್ಕೆ ಉಂಟಾಗಿದೆ.

ಬುಧವಾರ ರಾಜ್ಯದ ಹಲವು ಎಪಿಎಂಸಿಗಳನ್ನು ಸಾಂಕೇತಿಕವಾಗಿ ಒಂದು ದಿನ ಬಂದ್‌ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಎಪಿಎಂಸಿ ಕಾಯಿದೆ ತಿದ್ದುಪಡಿ ವಿಚಾರವನ್ನು ಕೈಬಿಡಬೇಕು. ಇಲ್ಲದಿದ್ದರೆ ಮೇ 18ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದೆ.
– ರಮೇಶ್‌ ಚಂದ್ರ ಲಹೋಟಿ, ಎಫ್‌ಕೆಸಿಸಿಐನ ಎಪಿಎಂಸಿ ಸಮಿತಿ ಅಧ್ಯಕ್ಷ

ಕಾರ್ಪೊರೇಟ್‌ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ರೈತರ ಹೊಟ್ಟೆ ಮೇಲೆ ಹೊಡೆಯಬೇಕೆ? ಎಪಿಎಂಸಿಯಲ್ಲಿ ಇದೀಗ ಒಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಅದನ್ನು ಹಾಳು ಮಾಡಿ ಕಾರ್ಪೊರೇಟ್‌ ಸಂಸ್ಥೆಗಳ ಪರ ನಿಲ್ಲುವುದು ಸರಿಯಲ್ಲ. ಇದು ರೈತರಿಗೆ ದೊಡ್ಡ ಮಾರಕವಾಗಲಿದೆ. ಇದನ್ನು ಖಂಡಿಸಿ ಬುಧವಾರ ಕಲ್ಬುರ್ಗಿ ಎಪಿಎಂಸಿಯನ್ನು ಬಂದ್‌ ಮಾಡಿದ್ದೆವು.
– ಅಮರನಾಥ ಪಾಟೀಲ್‌, ಅಧ್ಯಕ್ಷರು, ಹೈ-ಕ ಚೇಂಬರ್‌ ಆಫ್‌ ಕಾಮರ್ಸ್‌

ರಾಜ್ಯಪಾಲರಿಂದ ತಪರಾಕಿ
ಬೆಂಗಳೂರು: ಯಾವುದೇ ಸುಗ್ರೀವಾಜ್ಞೆಯನ್ನು ಸಂಪುಟದ ಒಪ್ಪಿಗೆ ಪಡೆದೇ ರಾಜ್ಯಪಾಲರ ಸಹಿಗೆ ಕಳುಹಿಸಬೇಕು ಎಂಬುದು ನಿಯಮ. ಆದರೆ, ಕೇಂದ್ರದ ಸೂಚನೆಯಿಂದ ಒತ್ತಡಕ್ಕೊಳಗಾದ ರಾಜ್ಯ ಸರಕಾರ ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆಯನ್ನು ನೇರವಾಗಿ ರಾಜ್ಯಪಾಲರಿಗೆ ಕಳುಹಿಸಿತ್ತು. ಬುಧವಾರ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ವಾಪಸ್‌ ಕಳುಹಿಸಿ, ಸಂಪುಟದ ಅನುಮೋದನೆ ಪಡೆದು ಮರಳಿ ತಮಗೆ ಕಳುಹಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಾನೂನು ಹಾಗೂ ಸಂಸದೀಯ ನಡಾವಳಿಗಳ ಬಗ್ಗೆ ಉತ್ತಮ ಜ್ಞಾನವಿರುವ ಸಚಿವರು, ಅಧಿಕಾರಿಗಳು ಇದ್ದರೂ ಇಂಥ ಎಡವಟ್ಟು ಸಂಭವಿಸಲು ಕೇಂದ್ರದ ಒತ್ತಡ ಕಾರಣವೆಂದು ಹೇಳಲಾಗುತ್ತಿದೆ. ರಾಜ್ಯ ಸಂಪುಟದ ಸಭೆ ಕೊನೆಯ ಬಾರಿಗೆ ನಡೆದಿದ್ದು ಏಪ್ರಿಲ್‌ 30ರಂದು. ಮೇ 5ರಂದು ಕೇಂದ್ರದ ಸೂಚನೆ ಬರುತ್ತಿದ್ದಂತೆಯೇ ಅವಸರಕ್ಕೆ ಬಿದ್ದ ಸರಕಾರ ಈ ಎಡವಟ್ಟು ಮಾಡಿಕೊಂಡಿದೆ. ಹೀಗಾಗಿ ಗುರುವಾರ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚೆ ನಡೆಸಿ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ. ಆದರೆ ರಾಜ್ಯಾದ್ಯಂತ ಭುಗಿಲೆದ್ದಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸರಕಾರ ಯಾವ ತೀರ್ಮಾನಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಸ್ತಾವನೆ ಕೈಬಿಡಲು ಸಿದ್ದರಾಮಯ್ಯ ಆಗ್ರಹ
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಬುಧವಾರ ದೂರವಾಣಿ ಕರೆ ಮಾಡಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅವರು, ಕಾಯಿದೆ ತಿದ್ದುಪಡಿ ತಂದರೆ ಆಗಬಹುದಾದ ತೊಂದರೆಗಳ ಬಗ್ಗೆ ವಿವರಿಸಿ ಪ್ರಸ್ತಾವನೆ ಕೈಬಿಡುವಂತೆ ಒತ್ತಾಯಿಸಿದರು. ಬಹುರಾಷ್ಟ್ರೀಯ ಕಂಪನಿಗಳು ಕೃಷಿ ಮಾರುಕಟ್ಟೆಯನ್ನು ಪ್ರವೇಶಿಸಿದರೆ ಸರಕಾರದ ಹಿಡಿತ ಇಲ್ಲದಂತೆ ಆಗುತ್ತದೆ. ಕೃಷಿ ಉತ್ಪನ್ನಗಳಿಗೆ ದರ ನಿಗದಿ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಲು ಅವಕಾಶ ಇಲ್ಲದಂತಾಗುತ್ತದೆ ಎಂದು ತಿಳಿಸಿರುವ ಅವರು ಸರಕಾರ ರೈತರ ಪರವಾಗಿರಬೇಕು ಎಂದಿದ್ದಾರೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top