ಚೀನಾ ಗಡಿಯಲ್ಲಿ ಗುಂಡು ಹಾರಲಿಲ್ಲವೇಕೆ?

ನಲವತ್ತು ವರ್ಷಗಳಿಂದ ಈಚೆಗೆ ಗಲ್ವಾನ್‌ ಪ್ರಕರಣ ನಡೆಯುವವರೆಗೆ ಭಾರತ- ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಲ್ಲ, ಒಬ್ಬನೇ ಒಬ್ಬ ಯೋಧ ಮೃತಪಟ್ಟಿಲ್ಲ. ಇದಕ್ಕೆ ಕಾರಣವಾಗಿರುವುದು ಮೂರು ಒಪ್ಪಂದಗಳು. ಚೀನಾ ಈಗ ಈ ಮೂರೂ ಒಪ್ಪಂದಗಳನ್ನು ಸಾರಾ ಸಗಟಾಗಿ ಉಲ್ಲಂಘಿಸಿದೆ. ಯಾವುವೀ ಮೂರು ಒಪ್ಪಂದ?

1993ರ ಒಪ್ಪಂದ
ಭಾರತ ಹಾಗೂ ಚೀನಾದ ಗಡಿ ಭದ್ರತೆಯ ವಿಚಾರದಲ್ಲಿ ಮೊದಲ ಬಾರಿ ಏರ್ಪಟ್ಟ ಒಪ್ಪಂದ 1993ರದ್ದು. ಈ ಒಪ್ಪಂದಕ್ಕೆ ಸಹಿ ಹಾಕಿದವರು ಆಗಿನ ಭಾರತ ಪ್ರಧಾನಿ ಪಿ.ವಿ. ನರಸಿಂಹರಾವ್‌. ಇದಕ್ಕೂ ಮುನ್ನ 1988ರಲ್ಲಿ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿಯವರು, ಚೀನಾಕ್ಕೆ ಭೇಟಿ ನೀಡಿ, ಉಭಯ ದೇಶಗಳ ನಡುವಿನ ತಣ್ಣಗಿನ ಸಂಬಂಧವನ್ನು ಬೆಚ್ಚಗಿರಿಸುವ ಯತ್ನ ಮಾಡಿದ್ದರು. ಅದಕ್ಕೂ ಮುನ್ನ 1954ರಲ್ಲಿ ಪ್ರಧಾನಿ ನೆಹರೂ ಅವರು ಚೀನಾಕ್ಕೆ ನೀಡಿದ ಭೇಟಿಯಲ್ಲಿ ಗಡಿಯ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ.
1993ರ ಒಪ್ಪಂದದಲ್ಲಿ ಸ್ಪಷ್ಟವಾಗಿ ಹೀಗೆ ಹೇಳಲಾಗಿದೆ: ‘‘ಉಭಯ ದೇಶಗಳ ಯಾವುದೇ ಚಟುವಟಿಕೆ ವಾಸ್ತವಿಕ ಗಡಿ ರೇಖೆಯನ್ನು ಉಲ್ಲಂಘಿಸುವಂತಿಲ್ಲ. ಯಾವುದೇ ದೇಶದ ಯೋಧ ಒಂದು ವೇಳೆ ಗಡಿ ರೇಖೆಯನ್ನು ಉಲ್ಲಂಘಿಸಿದಲ್ಲಿ, ಹಾಗೆಂದು ಇನ್ನೊಂದು ದೇಶದವರು ಎಚ್ಚರಿಕೆ ನೀಡಿದಲ್ಲಿ, ಉಲ್ಲಂಘಿಸಿದವರು ಕೂಡಲೇ ತಮ್ಮ ಗಡಿಯೊಳಗೆ ಮರಳಬೇಕು. ಅಗತ್ಯ ಬಿದ್ದಲ್ಲಿ, ರೇಖೆಯ ನಿಖರತೆಯ ಬಗ್ಗೆ ಗೊಂದಲ ಇದ್ದ ಸಂದರ್ಭದಲ್ಲಿ, ಎರಡೂ ಕಡೆಯವರೂ ಸೇರಿ ಚರ್ಚಿಸಿ ಅದನ್ನು ಅಂತಿಮಗೊಳಿಸಿಕೊಳ್ಳಬೇಕು.’’
ಆದರೆ ಚೀನಾ ಸದಾ ಈ ಒಪ್ಪಂದವನ್ನು ಉಲ್ಲಂಘಿಸುವಲ್ಲಿ ಚಾಂಪಿಯನ್‌ ಆಗಿದೆ. ಮೊದಲು ಚೀನಾದ ಸೈನಿಕರೇ ವಾಸ್ತವಿಕ ಗಡಿ ರೇಖೆ ಉಲ್ಲಂಘಿಸಿ ಟೆಂಟ್‌ ಹಾಕುತ್ತಾರೆ ಅಥವಾ ರಸ್ತೆ ನಿರ್ಮಾಣ ಮಾಡುತ್ತಾರೆ. ಗಲ್ವಾನ್‌ನಲ್ಲಿ ಆಗಿದ್ದೂ ಅದೇ.

1996ರ ಒಪ್ಪಂದ
1993ರ ಒಪ್ಪಂದ ಸಾಕಷ್ಟು ಗಟ್ಟಿಯಾಗಿಲ್ಲ ಎಂದು ಭಾವಿಸಿದ ಉಭಯ ಕಡೆಗಳವರೂ 1996ರಲ್ಲಿ ಇನ್ನೊಂದು ವಿಸ್ತೃತವಾದ ಒಪ್ಪಂದ ಮಾಡಿಕೊಂಡರು. ಇದಕ್ಕೆ ಆಗಿನ ಪ್ರಧಾನಿ ಎಚ್‌.ಡಿ.ದೇವೇಗೌಡ ಸರಕಾರ ಸಹಿ ಮಾಡಿತು.
1996ರ ಒಪ್ಪಂದದಲ್ಲಿ ಹೀಗೆ ನಿರ್ದೇಶಿಸಲಾಗಿದೆ: ‘‘ಗಡಿ ರೇಖೆಯ ಬಗ್ಗೆ ಗೊಂದಲ ಅಥವಾ ಇನ್ಯಾವುದೇ ಕಾರಣಗಳಿಂದಾಗಿ ಉಭಯ ದೇಶಗಳ ಯೋಧರ ನಡುವೆ ಮುಖಾಮುಖಿ ಚಕಮಕಿ ಏರ್ಪಟ್ಟಲ್ಲಿ, ಸನ್ನಿವೇಶದ ಉದ್ವಿಗ್ನತೆಯನ್ನು ಶಮನ ಮಾಡುವಂಥ ಸಂಯಮವನ್ನು ಉಭಯ ಕಡೆಯವರೂ ಪ್ರದರ್ಶಿಸಬೇಕು. ಎರಡೂ ಕಡೆಯವರೂ ಮಾತುಕತೆಯ ಅಥವಾ ಇತರ ಶಾಂತಿಯುತ ಸಾಧ್ಯತೆಗಳ ಮೂಲಕ ಸನ್ನಿವೇಶದ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕು.’’
‘‘ವಾಸ್ತವಿಕ ಗಡಿ ರೇಖೆಯ ಉಭಯ ಕಡೆಗಳ ಎರಡು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಯಾರೂ ಗುಂಡು ಹಾರಿಸುವುದಾಗಲೀ, ಜೈವಿಕ ತ್ಯಾಜ್ಯದ ಸಮಸ್ಯೆ ಉಂಟುಮಾಡುವುದಾಗಲೀ, ವಿಷಕಾರಿ ರಾಸಾಯನಿಕ ಉಪಯೋಗಿಸುವುದಾಗಲೀ, ಯಾವುದೇ ಸ್ಫೋಟ ನೆರವೇರಿಸುವುದಾಗಲೀ, ಬಂದೂಕು ಅಥವಾ ಸ್ಫೋಟಕಗಳನ್ನು ಉಪಯೋಗಿಸಿ ಬೇಟೆಯಾಡುವುದಾಗಲೀ ಮಾಡಕೂಡದು. ಆದರೆ ದಿನನಿತ್ಯದ ಹಗುರ ಬಂದೂಕುಗಳ ಸೀಮಿತ ವ್ಯಾಪ್ತಿಯ ಅಭ್ಯಾಸಕ್ಕೆ ಇದು ಅನ್ವಯಿಸದು.’’
ಆದರೆ ಚೀನಾ ಸಾಕಷ್ಟು ಸಲ ಈ ಒಪ್ಪಂದವನ್ನು ಉಲ್ಲಂಘಿಸಿದೆ. ಸಿಕ್ಕಿಂನ ಬಳಿಯ ಡೋಕ್ಲಾಮ್‌ನಲ್ಲಿ ಮೊದಲು ಗಡಿ ರೇಖೆಯ ಬಳಿ ರಸ್ತೆ ಮಾಡಲು ಶುರುಮಾಡಿದವರೇ ಚೀನಾದವರು. ಇದನ್ನು ಭಾರತೀಯರು ಪ್ರಶ್ನಿಸಿದಾಗ ಚೀನೀಯರು ಏರಿಬಂದಿದ್ದರು. ಗಡಿರೇಖೆಯವರೆಗೂ ಮಿಲಿಟರಿ ಟ್ರಕ್ಕುಗಳು ಸಲೀಸಾಗಿ ಸಾಗಿ ಬರಬಲ್ಲಂಥ ಸರ್ವಋುತು ರಸ್ತೆಗಳನ್ನು ಚೀನಾ ಮಾಡಿಕೊಂಡಿದೆ. ವಿವಾದಿತ ಆಕ್ಸಾಯ್‌ ಚಿನ್‌ನಲ್ಲಿ ಕಾರಕೋರಂ ಹೆದ್ದಾರಿಯನ್ನು ಕೂಡ ನಿರ್ಮಿಸಿಕೊಂಡಿದೆ.
‘‘ಗಡಿಗೆ ಹತ್ತಿರದಲ್ಲಿ ಡಿವಿಷನ್‌ ಗಾತ್ರಕ್ಕಿಂತ ಹೆಚ್ಚಿನ(15,000 ಸೈನಿಕರಿಗಿಂತ ಹೆಚ್ಚು) ಸೈನಿಕರಿರುವ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಬಾರದು. ಅಂಥ ಯಾವುದೇ ವ್ಯೂಹಾತ್ಮಕ ಮಿಲಿಟರಿ ಡ್ರಿಲ್‌ ನಡೆಯುವುದಾದರೆ, ಅವುಗಳ ದಿಕ್ಕು ನಿರ್ದೇಶನ ಇನ್ನೊಂದು ದೇಶವನ್ನು ಗುರಿಯಾಗಿಸಿರಬಾರದು.’’
ಇದನ್ನೂ ಚೀನಾ ಉಲ್ಲಂಘಿಸುತ್ತದೆ. ಬೇಸಿಗೆಯಲ್ಲಿ ಲಡಾಖ್‌ನಲ್ಲಿ ಭಾರತವನ್ನು ಹೆದರಿಸುವಂಥ ಮಿಲಿಟರಿ ಡ್ರಿಲ್‌ ಅನ್ನು ಏರ್ಪಡಿಸುತ್ತದೆ.

2013ರ ಒಪ್ಪಂದ
2013ರ ಅಕ್ಟೋಬರ್‌ 23ರಂದು ಭಾರತದ ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಚೀನಾದ ಪ್ರಧಾನಿ ಲೀ ಕೆಕಿಯಾಂಗ್‌ ಭೇಟಿಯಾಗಿ, ಗಡಿ ಭದ್ರತೆ ಸಹಕಾರ ಒಪ್ಪಂದಕ್ಕೆ (ಬಿಡಿಸಿಎ) ಸಹಿ ಹಾಕಿದರು. ಗಲ್ವಾನ್‌ನಂಥ ಪ್ರದೇಶಗಳಲ್ಲಿ ವಾಸ್ತವಿಕ ಗಡಿ ರೇಖೆ ಯಾವುದೆಂಬ ಬಗ್ಗೆಯೇ ಉಭಯ ದೇಶಗಳಿಗೆ ಒಪ್ಪಿಗೆಯಿಲ್ಲ. ಇಂಥ ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಕೂಡ ಸ್ಪಷ್ಟವಾಗಿ ಈ ಒಪ್ಪಂದದಲ್ಲಿ ಇದೆ: ‘‘ಭಾರತ- ಚೀನಾದ ವಾಸ್ತವಿಕ ಗಡಿ ರೇಖೆಯ ಬಗ್ಗೆ ಒಂದು ಸಮಾನ ಒಪ್ಪಿಗೆ ಇಲ್ಲದಂಥ ಪ್ರದೇಶಗಳಲ್ಲಿ ಪಹರೆ ನಡೆಸುವುದಾಗಲೀ, ಇನ್ನೊಂದು ದೇಶ ನಡೆಸಿದ ಪಹರೆಯನ್ನು ಹಿಂಬಾಲಿಸಿ ಹೋಗುವುದಾಗಲೀ ಮಾಡಕೂಡದು.’’
‘‘ಗಡಿ ರೇಖೆಯ ಬಗ್ಗೆ ಗೊಂದಲವಿದ್ದ ಸಂದರ್ಭದಲ್ಲಿ ಮುಖಾಮುಖಿ ಪರಿಸ್ಥಿತಿ ಉಂಟಾದರೆ, ಎಲ್ಲರೂ ಗರಿಷ್ಠ ಸಂಯಮ ಪ್ರದರ್ಶಿಸಬೇಕು. ಯಾವುದೇ ಪ್ರಚೋದನೆ ಉಂಟುಮಾಡುವುದು, ಬಲಪ್ರಯೋಗ ಮಾಡುವುದು ಅಥವಾ ಮಾಡುವ ಬೆದರಿಕೆ ಒಡ್ಡುವುದು ಮಾಡಕೂಡದು. ಉಭಯರನ್ನೂ ಗೌರವದಿಂದ ಕಾಣಬೇಕು ಹಾಗೂ ಗುಂಡಿನ ಚಕಮಕಿ ಅಥವಾ ಯಾವುದೇ ಬಗೆಯ ಸಶಸ್ತ್ರ ಚಕಮಕಿಯನ್ನು ತಡೆಯಬೇಕು.’’ ಇದೆಲ್ಲವನ್ನೂ ಚೀನಾ ಉಲ್ಲಂಘಿಸಿದೆ.

ಹಾಟ್‌ಲೈನ್‌ ರಚನೆಯಾಗಿಲ್ಲ
ಗಡಿ ಪ್ರದೇಶದಲ್ಲಿ ಎಲ್ಲ ಔಪಚಾರಿಕ ಶಿಸ್ತು ಕ್ರಮಗಳನ್ನು ಚೀನಾದ ಯೋಧರು ಉಲ್ಲಂಘಿಸುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಇಂಥ ಸನ್ನಿವೇಶದಲ್ಲಿ ಚೀನಾ ಅಧಿಕಾರಿಗಳ ಗಮನಕ್ಕೆ ಅದನ್ನು ತರಲು ಉದ್ದೇಶಿಸಿ, ಒಂದು ಹಾಟ್‌ಲೈನ್‌ ರಚನೆ ಮಾಡುವುದಕ್ಕೆ ಭಾರತ ಆಸಕ್ತಿ ತೋರಿಸಿತ್ತು. ಆದರೆ ಅದಕ್ಕೂ ತಗಾದೆ ತೆಗೆದ ಚೀನಾ, ಇದನ್ನು ಮೊದಲು ದಿಲ್ಲಿಯಲ್ಲಿರುವ ರಾಯಭಾರ ಕಚೇರಿ ಒಪ್ಪಬೇಕು ಎಂದಿತು. ಎನ್‌ಕ್ರಿಪ್ಷನ್‌ ಕೋಡ್‌ಗಳು ಹಾಗೂ ಅನುವಾದದ ಸಮಸ್ಯೆ ತಲೆದೋರಿತು. ಕಡಗೂ ಅದು ರಚನೆಯಾಗಲಿಲ್ಲ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top