ಮೋದಿ-ಷಾ ಎಂಬ ಮೋಡಿಗಾರರ ಗುಟ್ಟೇನೆಂದರೆ… (Mar 25 2017)

ಇದುವರೆಗೆ ಸಾಮಾಜಿಕ ಸಾಮರಸ್ಯದ ಮಾತುಗಳು ಕೇಳಿಬರುತ್ತಿದ್ದವು. ಆರ್ಥಿಕ ಸಬಲೀಕರಣದ ಭಾಷಣಗಳು ಕೇಳಿಸುತ್ತಿದ್ದವು. ಈಗ ಅವೆರಡೂ ಒಟ್ಟೊಟ್ಟಿಗೇ ಅದೂ ಮೌನವಾಗಿ ಸಾಕಾರದತ್ತ ಸಾಗುತ್ತಿವೆ ಎಂಬುದು ಯಾರಿಗೆ ತಾನೆ ಖುಷಿ ಮತ್ತು ಸಮಾಧಾನ ತರುವುದಿಲ್ಲ ಹೇಳಿ?

ಯಾರು ಒಪ್ಪುತ್ತಾರೋ ಬಿಡುತ್ತಾರೋ ಎನ್ನುವುದು ಬೇರೆ ವಿಚಾರ. ಏಕೆಂದರೆ ಯಾರು ಒಪ್ಪಿದರೂ, ಒಪ್ಪದಿದ್ದರೂ ವಾಸ್ತವವೇನೂ ಬದಲಾಗದು. ಯಾಕೆ ಈ ಪೀಠಿಕೆ ಅನ್ನುವ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು. ಹೇಳ್ತೀನಿ. ಪ್ರಧಾನಿ ನರೇಂದ್ರ ಮೋದಿ ಈಗ ಬಿಜೆಪಿ, ಸಂಘ ಪರಿವಾರ, ಮಂದಿರ, ಜಾತಿಮತ, ಪಂಥಗಳನ್ನೆಲ್ಲ ಮೀರಿ ತಮ್ಮ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡಿದ್ದಾರೆ. ಇದೆಲ್ಲ ಸುಲಭದಲ್ಲಿ ಆದದ್ದೇ ಎಂಬುದು ಮೂಲಭೂತ ಪ್ರಶ್ನೆ.

ಸಾರ್ವಜನಿಕ ಜೀವನದಲ್ಲಿ ನಮಗೆ ಎರಡು ಥರದ ವ್ಯಕ್ತಿಗಳು ಸಿಗುತ್ತಾರೆ. ಆರಂಭದಿಂದ ಕೊನೆಯವರೆಗೆ ಸಂಘಟನೆಯ ನೆಲೆಯನ್ನೇ ಆಶ್ರಯಿಸಿ ನಿಲ್ಲುವವರು ಒಂದು ಕೆಟಗರಿ. ಇನ್ನು ಕೆಲವರು ಸ್ವ ಸಾಮರ್ಥ್ಯದಿಂದ ಇಡೀ ಸಂಘಟನೆಯನ್ನು ತಮ್ಮೊಟ್ಟಿಗೆ ಒಯ್ಯುವವರು. ಇಂಥವರು ಬಲು ಅಪರೂಪ. ಇವರು ಸಂಘಟನೆ, ಪಕ್ಷ, ಹೋರಾಟದ ಮೂಲಕ ಲಾಂಚ್ ಆಗಿ ಪರಿಶ್ರಮ, ಹಠ, ಸಂಕಲ್ಪಶಕ್ತಿಗಳಿಂದ ಎಲ್ಲವನ್ನೂ ಮೀರಿ ಬೆಳೆಯುವವರು. ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಈ ಎರಡನೇ ಗುಂಪಿಗೆ ಸೇರುತ್ತಾರೆ. ಆರಂಭದಲ್ಲಿ ಸಂಘಟನೆ ಮೂಲಕವೇ ಬಂದು, ಸಾವಿರಾರು ಜನರಲ್ಲಿ ಒಬ್ಬರಾಗಿದ್ದುಕೊಂಡು, ಹಂತಹಂತವಾಗಿ ಅಡೆತಡೆಗಳನ್ನು ಸರಿಸಿ ದಾರಿ ಮಾಡಿಕೊಳ್ಳುತ್ತ ಸಾಗಿ ಯಶಸ್ಸಿನ ತುತ್ತತುದಿಯನ್ನು ಏರಿ ನಿಂತವರು. ಅಲ್ಲಿಗೂ ನಿಲ್ಲದೆ ನಿರಂತರ ಮುಂದಕ್ಕೆ ಸಾಗುತ್ತಲೇ ಇದ್ದಾರೆ. ಹೀಗಾಗಿ ಮೋದಿ ಒಬ್ಬ ರಾಜಕೀಯ ನಾಯಕನಾಗಿ, ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ, ಜಾಗತಿಕ ನಾಯಕರ ನಡುವೆಯೂ ಮಿರಮಿರ ಮಿಂಚುವ ಮೂಲಕ ಆಸಕ್ತರಿಗೆ ಅಧ್ಯಯನಕ್ಕೆ ವಸ್ತುವಾಗಬಲ್ಲರು. ಉತ್ತಮ ಆಡಳಿಗಾರರಾಗಲು ಬಯಸುವವರಿಗೆ, ರಾಜಕೀಯ ತಂತ್ರಗಾರಿಕೆ ಅರಿತುಕೊಳ್ಳುವ ಆಸೆ ಇರುವವರಿಗೆ, ಪ್ರತಿಕೂಲ ಪರಿಸ್ಥಿತಿ, ಟೀಕೆ-ಟಿಪ್ಪಣಿಗಳನ್ನು ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಬಯಸುವವರಿಗೆ ಅವರೊಂದು ಕುತೂಹಲದ ಕೇಂದ್ರವಾಗಬಲ್ಲರು.

ಕೋಮುವಾದದ ಹಣೆಪಟ್ಟಿಯಿಂದ ನ್ಯೂ ಇಂಡಿಯಾ ಕನಸಿನವರೆಗೆ: ಮೋದಿ ಅಂದಾಗ ಕೆಲವರಿಗೆ ಗೋಧ್ರಾ ಹಿಂಸಾಚಾರ ನೆನಪಾಗುತ್ತದೆ. ಹಲವರಿಗೆ ಗುಜರಾತದಲ್ಲಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಣಮುಂದೆ ಬರುತ್ತದೆ. ಕೋಮುವಾದಿ ಹಣೆಪಟ್ಟಿ ವಿಷಯದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದ ಮೋದಿ, ಅಭಿವೃದ್ಧಿಯ ವರಸೆಯನ್ನೇ ಗಟ್ಟಿಯಾಗಿ ಹಿಡಿದುಕೊಂಡು ಗುಜರಾತದಿಂದ ದೆಹಲಿಯವರೆಗೆ ಸಾಗಿ ಆಡಳಿತದಲ್ಲಿ ಬಿಗಿ ಹಿಡಿತ ಸಾಧಿಸಿದ್ದು ಕಡಿಮೆ ಸಾಧನೆಯಲ್ಲ.

ಹಾಗಾದರೆ, ನ್ಯೂ ಇಂಡಿಯಾ ಕನಸಿನ ಸಾಕಾರದ ಬಗ್ಗೆ ಮಾತನಾಡುತ್ತಿರುವ ಮೋದಿಗೆ 2019ರ ಚುನಾವಣೆ ಲೆಕ್ಕಕ್ಕಿಲ್ಲವೇ? ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಮಾರನೇ ದಿನ ದೆಹಲಿಯ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಸಮಾರಂಭದಲ್ಲಿ ಮೋದಿ ಭಾಷಣ ಕೇಳಿದ ಯಾರಿಗಾದರೂ ಈ ಅನುಮಾನ ಕಾಡದಿರದು.

ವಿಜಯೋತ್ಸವದಲ್ಲಿ ಮೋದಿ ಹೇಳಿದ್ದೇನು? ‘ಒಡಿಶಾ ನಗರಪಾಲಿಕೆ ಚುನಾವಣೆಯಲ್ಲಿ, ಮಹಾರಾಷ್ಟ್ರದ ವಿವಿಧ ಪಾಲಿಕೆಗಳಲ್ಲಿ ಬಿಜೆಪಿ ಗೆಲುವು, ಉತ್ತರಪ್ರದೇಶ ಮತ್ತು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ, ಅಥವಾ ಮಣಿಪುರ ಮತ್ತು ಗೋವಾದಲ್ಲಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬುದು ನನಗೆ ಮುಖ್ಯವಲ್ಲ. 2022ಕ್ಕೆ ಭಾರತಕ್ಕೆ ಸ್ವಾತಂತ್ರ್ಯ್ರಾಪ್ತಿಯಾಗಿ 75 ವರ್ಷಗಳಾಗುತ್ತವೆ. ಆ ವೇಳೆಗೆ ಸರ್ವಶಕ್ತ ‘ನ್ಯೂ ಇಂಡಿಯಾ’ವನ್ನು ನಿರ್ವಿುಸುವುದೊಂದೇ ನನ್ನ ಆದ್ಯತೆ, ಆಲೋಚನೆ’.

ಏನಿದು ನ್ಯೂ ಇಂಡಿಯಾ?:

ಅದನ್ನು ಅವರು ಹೀಗೆ ವಿವರಿಸಿದರು: ‘ಭಾರತ ಭ್ರಷ್ಟಾಚಾರಮುಕ್ತ ದೇಶವಾಗಬೇಕು. ಕಾಳಧನದ ಪಿಡುಗು ಹೋಗಬೇಕು. ಭಯೋತ್ಪಾದನೆ ಪಿಡುಗಿನಿಂದ ದೇಶ ಮುಕ್ತವಾಗಬೇಕು. ಕೊನೇದಾಗಿ ಎಲ್ಲೆಂದರಲ್ಲಿ ಕಸಚೆಲ್ಲುವ, ಕೊಚ್ಚೆ ಹರಿಯುವುದರಿಂದ ಮುಕ್ತವಾಗಿ, ಸ್ವಚ್ಛವಾಗಿ, ಶುಭ್ರವಾಗಿ ಫಳಗುಟ್ಟುವ ದೇಶವಾಗಬೇಕು’. ಹಾಗಾದರೆ ಇದು ಸೇರಿದ ಜನರನ್ನು ಕಂಡು ಆಡಿದ ಬರೀ ಭಾವಾವೇಶದ ಮಾತೇನು?

ಮೋದಿಯ ಆಲೋಚನೆಯ ವೇಗಕ್ಕೆ ಈ ಒಂದು ಉದಾಹರಣೆ ಸಾಕು. ಅವರು ಭಾಷಣ ಮಾಡಿದ್ದು ಅಜಮಾಸು ಸಾಯಂಕಾಲ ಏಳು ಗಂಟೆಯ ಹೊತ್ತಿಗೆ. ಅರ್ಧ ಗಂಟೆ ಭಾಷಣ ಮುಗಿಸುವ ಹೊತ್ತಿಗೆ ಮೋದಿಯವರ ಅಧಿಕೃತ ಜಾಲತಾಣದಲ್ಲಿ(ವೆಬ್ ಪೇಜಲ್ಲಿ) ‘ಐ ಪ್ಲೆಜ್ ನ್ಯೂ ಇಂಡಿಯಾ’ (ನವಭಾರತಕ್ಕೆ ನನ್ನ ಸಂಕಲ್ಪ) ಎಂಬ ಬಟನ್ ಅಣಿಯಾಗಿತ್ತು. ಅದನ್ನು ಒತ್ತಿದರೆ ವೆಬ್ ಪುಟದ ‘ಐ ಆಮ್ ನ್ಯೂ ಇಂಡಿಯಾ’ ಹ್ಯಾಶ್ಟ್ಯಾಗಿಗೆ ಲಿಂಕ್ ಆಗುತ್ತಿತ್ತು. ಅದರಲ್ಲಿ ‘ನಾನು ಭ್ರಷ್ಟಾಚಾರಮುಕ್ತ ಭಾರತಕ್ಕೆ ಸಂಕಲ್ಪ ಮಾಡುತ್ತೇನೆ, ನಗದುರಹಿತ ವ್ಯವಹಾರವನ್ನು ಉತ್ತೇಜಿಸುತ್ತೇನೆ, ಸ್ವಚ್ಛಭಾರತ ಅಭಿಯಾನದಲ್ಲಿ ತೊಡಗಿಸಿಕೊಳ್ಳುತ್ತೇನೆ, ಮಾದಕವಸ್ತು ಸೇವನೆ ಮತ್ತು ಮಾರಾಟ ತಡೆಗೆ ಸಂಕಲ್ಪ ಮಾಡುತ್ತೇನೆ, ಮಹಿಳೆಯುಕ್ತ ವಿಕಾಸಕ್ಕೆ ಪ್ರೇರೇಪಿಸುತ್ತೇನೆ, ಪರಿಸರ ಮತ್ತು ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗೆ ಪಣತೊಡುತ್ತೇನೆ, ಅಶಕ್ತರಿಗೆ ನೆರವಾಗುತ್ತೇನೆ, ಕೆಲಸ ಕೇಳುವುದರ ಬದಲು ಕೆಲಸ ಕೊಡುವ ಶಕ್ತಿಯನ್ನು ಗಳಿಸುತ್ತೇನೆ, ದೇಶದಲ್ಲಿ ಶಾಂತಿ, ಏಕತೆ ಮತ್ತು ಸದ್ಭಾವನೆ ಬೆಳೆಸಲು ಈ ಕ್ಷಣದಿಂದ ಕಾರ್ಯಪ್ರವೃತ್ತನಾಗುತ್ತೇನೆ’ ಎನ್ನುವ ಸಂಕಲ್ಪಗಳ ಪೈಕಿ ಇಷ್ಟವಾದವಕ್ಕೆ ಟಿಕ್ ಮಾಡಬಹುದಾಗಿತ್ತು. ಆಲೋಚನಾ ಶಕ್ತಿ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಇಲ್ಲದಿದ್ದರೆ ಇದೆಲ್ಲ ಸಾಧ್ಯವಾಗುವ ಕೆಲಸವಾ?

ಈಗ ಇದರ ಪರೋಕ್ಷ ಪರಿಣಾಮ ಅಥವಾ ಬೇರೆಯವರು ಹೇಳುವ ಹಾಗೆ ರಾಜಕೀಯ ಲಾಭದ ವಿಷಯಕ್ಕೇ ಬರೋಣ.

‘ನ್ಯೂ ಇಂಡಿಯಾ’ ಕನಸು ಬಿತ್ತಿದ ಮೋದಿ ಅದರ ಸಾಕಾರಕ್ಕೆ ಇನ್ನು ಐದು ವರ್ಷಗಳು ಮಾತ್ರ(2022ಕ್ಕೆ) ಬಾಕಿ ಇವೆ ಎಂದು ಹೇಳಲು ಮರೆಯಲಿಲ್ಲ. ಅಲ್ಲಿಗೆ ಅವರು 2019ರ ಲೋಕಸಭಾ ಚುನಾವಣೆಯ ಪ್ರಸ್ತಾಪ ಮಾಡುವ, ಮುಂದಿನ ಚುನಾವಣೆಯಲ್ಲೂ ನನ್ನನ್ನೇ ಬೆಂಬಲಿಸಿ ಎಂದು ಹೇಳುವ ಪ್ರಮೇಯವೇ ಬರಲಿಲ್ಲ. ಇದು ದೂರದೃಷ್ಟಿಯಿರುವವರಿಗೆ ಮಾತ್ರ ಸಾಧ್ಯವಾಗುವಂಥದು. ಇಲ್ಲಿ ಇನ್ನೂ ಒಂದು ಸೂಕ್ಷ್ಮ ಸಂಗತಿಯಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ‘ಅಚ್ಛೇ ದಿನ್’ ಘೊಷಣೆಯೊಂದಿಗೆ ಸರಳ ಬಹುಮತ ಗಳಿಸಿದ ಮೋದಿ, 2019 ಚುನಾವಣೆಯ ಹೊತ್ತಿಗೆ ಸಂಸತ್ತಿನ ಎರಡೂ ಸದನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ‘ಅಚ್ಛೇ ದಿನ್’ಗಿಂತಲೂ ಬಲವಾದ ಘೊಷಣೆಯನ್ನು, ಅದಕ್ಕಿಂತಲೂ ಮಿಗಿಲಾದ ಕನಸನ್ನು ಬಿತ್ತಬೇಕಲ್ಲವೇ? ಅದರ ಬದಲಾಗಿ ‘2019ರಲ್ಲೂ ನಾವೇ ಗೆಲ್ಲುತ್ತೇವೆ, ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಹೇಳಲು ಶುರು ಮಾಡಿದರೆ, ಓಹೋ ಇವರ ಗೆಲುವಿನ ಬಗ್ಗೆ ಇವರಿಗೇ ಅನುಮಾನವಿದೆ ಎಂಬ ಸಂದೇಶ ರವಾನೆ ಆಗುತ್ತದೆ. ಅದಾಗುವುದಕ್ಕೆ ಅವಕಾಶ ಕೊಡಲು ಮೋದಿ ಸುತಾರಾಂ ತಯಾರಿಲ್ಲ ಎಂಬುದು ಸ್ಪಷ್ಟ.

ಮಣಿಪುರ/ಗೋವಾದಲ್ಲಿ ಅಧಿಕಾರದ ಹಪಾಹಪಿ ತೋರಿದ್ದೇಕೆ?: ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿದ ನಂತರವೂ ಅತಿಚಿಕ್ಕ ರಾಜ್ಯಗಳಾದ, ರಾಷ್ಟ್ರರಾಜಕಾರಣದಲ್ಲಿ ನಗಣ್ಯವೆನ್ನಬಹುದಾದ ಮಣಿಪುರ ಮತ್ತು ಗೋವಾದಲ್ಲಿ ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುವ ಸಣ್ಣತನ ತೋರಬೇಕಿತ್ತೇ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಜೂನ್ನಲ್ಲಿ ನಡೆಯುವ ರಾಷ್ಟ್ರಪತಿ/ಉಪರಾಷ್ಟ್ರಪತಿ ಚುನಾವಣೆ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣಕ್ಕೆ ಅತಿ ಮಹತ್ವದ ಮಸೂದೆಗಳ ಅನುಮೋದನೆಗೆ ಆಗುತ್ತಿರುವ ಅಡ್ಡಿ, ತ್ವರಿತ ಆಡಳಿತ ಸುಧಾರಣೆಗೆ ತೊಡಕಾಗಿರುವ ಕೆಲ ಓಬೀರಾಯನ ಕಾಲದ ಕಾಯಿದೆಗಳ ತಿದ್ದುಪಡಿಗೆ ಆಗುತ್ತಿರುವ ಅಡೆತಡೆ ಇವುಗಳನ್ನು ಗಮನಿಸಿದರೆ, ಎಲ್ಲದಕ್ಕಿಂತ ಮುಖ್ಯವಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಮಾದರಿ ಗೆಲುವಿನ ಗುರಿಯನ್ನು ಮನದಲ್ಲಿಟ್ಟುಕೊಂಡು, 2022ರ ನ್ಯೂ ಇಂಡಿಯಾ ಗುರಿ ತಲುಪಲು ದಾರಿ ನಿರ್ವಣದ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ.

ಸರ್ಜಿಕಲ್ ದಾಳಿ/ನೋಟು ರದ್ದತಿಯನ್ನು ಜನರು ಬೆಂಬಲಿಸಿದರೇ?: ಮೋದಿ ಸರ್ಕಾರ ದೂರಗಾಮಿ ಲಾಭದ ದೃಷ್ಟಿ ಇಟ್ಟುಕೊಂಡಿರುವುದರಿಂದ ಜನಪ್ರಿಯ ಯೋಜನೆಗಳನ್ನು, ಚುನಾವಣೆಯಲ್ಲಿ ವೋಟು ತರಬಲ್ಲ ಅನುತ್ಪಾದಕ ಯೋಜನೆಗಳನ್ನು ಘೊಷಿಸುವ ಗೋಜಿಗೆ ಹೋಗಿಲ್ಲ. ಸರ್ಕಾರದ ಅನುತ್ಪಾದಕ ವೆಚ್ಚವನ್ನು ತಗ್ಗಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದರಿಂದ ‘ಅರೇ, ಈ ಸರ್ಕಾರ ಏನು ಮಾಡುತ್ತಿದೆ’ ಎಂಬ ಭಾವನೆ ಬಹಳಷ್ಟು ಜನರ ಮನಸ್ಸಿನಲ್ಲಿ ಮೂಡಿರುವುದು ಸುಳ್ಳಲ್ಲ. ಅದನ್ನೇ ರಾಹುಲ್ ಗಾಂಧಿ ‘ಅಚ್ಛೇ ದಿನ್ ಆಯಾ ಕ್ಯಾ’ ಎಂದು ಪದೇಪದೆ ಕೇಳಿದ್ದು. ಈ ಹೊಡೆತದಿಂದ ಮೋದಿ ಸರ್ಕಾರವನ್ನು ಪಾರುಮಾಡಿದ್ದು ಪಾಕಿಸ್ತಾನದ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿ ಮತ್ತು ನೋಟು ರದ್ದತಿ ನಿರ್ಧಾರಗಳು. ಈ ಎರಡು ಮಾಸ್ಟರ್ಸ್ಟ್ರೋಕ್ ಇಲ್ಲದಿದ್ದರೆ ಗೋವಾ, ಮಣಿಪುರದ ಜೊತೆಗೆ ಉತ್ತರಪ್ರದೇಶವೂ ಅತಂತ್ರಕ್ಕೆ ಸಿಲುಕುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿರಲಿಲ್ಲ. ಇಂಥ ಮಹತ್ವದ, ಅತಿ ಅಪಾಯಕಾರಿ ನಿರ್ಧಾರಗಳು ಬಲಿಷ್ಠ ಮಾನಸಿಕತೆಯ ನಾಯಕತ್ವದಿಂದ ಮಾತ್ರ ಸಾಧ್ಯ. ಅಷ್ಟಕ್ಕೂ, ಕಾಳಧನ, ವಿದೇಶದಲ್ಲಿ ಬಚ್ಚಿಟ್ಟಿರುವ ಸಂಪತ್ತಿಗೆ ಕಡಿವಾಣ ಹಾಕಲು ನೋಟು ರದ್ದತಿಗಿಂತ ಉತ್ತಮ ಮಾರ್ಗ ಇರಲಿಲ್ಲ ಕೂಡ.

ತಂತ್ರಗಾರಿಕೆಯೂ ಮುಖ್ಯವಾಗುತ್ತದೆ…:

ಕೆಲವೊಮ್ಮೆ ಗೆಲುವು, ಯಶಸ್ಸು ಕೇವಲ ಪರಿಶ್ರಮದಿಂದ ಬರುವುದಿಲ್ಲ. ಅಲ್ಲಿ ತಂತ್ರಗಾರಿಕೆಯೂ ಮುಖ್ಯವಾಗುತ್ತದೆ. ಬಿಜೆಪಿ ಜಮ್ಮು-ಕಾಶ್ಮೀರದ ಸರ್ಕಾರದಲ್ಲಿ ಪಾಲು ಪಡೆದದ್ದರಿಂದ ಹಿಡಿದು ಉತ್ತರಪ್ರದೇಶ, ಉತ್ತರಾಖಂಡದಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದ್ದರ ಹಿಂದೆ, ಗೋವಾ ಹಾಗೂ ಮಣಿಪುರದಲ್ಲಿ ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸಿದ್ದರ ಹಿಂದೆ ಪರಿಶ್ರಮದ ಜೊತೆಗೆ ತಂತ್ರಗಾರಿಕೆಯೂ ಕೆಲಸ ಮಾಡಿದೆ. ಎರಡು ವರ್ಷದ ಹಿಂದೆ ಮಹಾರಾಷ್ಟ್ರದಲ್ಲಿ ಬಹುತೇಕ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಕಾರಣವಾದ ಉತ್ತರಪ್ರದೇಶ ಉಸ್ತುವಾರಿ ಓಂ ಮಾಥೂರ್ ಅವರು ಅಮಿತ್ ಷಾ ಸೂಚನೆಯಂತೆ ಮುಂಬೈನಿಂದ ಲಖನೌಗೆ ಹಾರಿದರು. ಚುನಾವಣಾ ವ್ಯೂಹ ಹೆಣೆದರು. ಮಂದಿರ, ಜಾತಿ, ಮತಗಳ ಲೆಕ್ಕಾಚಾರಗಳನ್ನೆಲ್ಲ ಮೀರಿ ಗೆಲ್ಲುವ ತಂತ್ರಗಾರಿಕೆ ರೂಪಿಸಿದರು. ಅದರಲ್ಲಿ ‘ಉಜ್ವಲಾ’ ಯೋಜನೆಯಡಿ ಉಚಿತ ಎಲ್ಪಿಜಿ ಫಲಾನುಭವಿಗಳ ಪಟ್ಟಿ ಮಾಡಿ ಯೋಜನೆ ತಲುಪಿಸುವುದರಿಂದ ಹಿಡಿದು ಜನಧನ ಖಾತೆಗಳನ್ನು ಅತಿ ಹೆಚ್ಚು ತೆರೆಯುವುದರವರೆಗೆ ಎಲ್ಲವೂ ಸೇರುತ್ತವೆ. ಉತ್ತರಪ್ರದೇಶದ ಗೆಲುವಿನ ನಂತರ ಮತ್ತೊಂದು ಹೆಜ್ಜೆ ಮುಂದಿಡಲು ಹೊರಟಿರುವ ಬಿಜೆಪಿ ಚಿಂತಕರ ಚಾವಡಿ, ಇದೀಗ ಹಿಂದುಳಿದ ವರ್ಗಗಳ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಸಾಮಾಜಿಕವಾಗಿ ಮಾತ್ರವಲ್ಲ ಆರ್ಥಿಕವಾಗಿ ಹಿಂದುಳಿದವರಿಗೂ ಸರ್ಕಾರಿ ನೆರವು ಸಿಗುವ ನಿಟ್ಟಿನಲ್ಲಿ ಆಲೋಚಿಸಿದೆ.

ಹಿಂದುಳಿದ ವರ್ಗಗಳ ಆಯೋಗ ರದ್ದತಿ ಹಿಂದೇನಿದೆ?:

ಬಡತನ ಜಾತಿಗೆ ಸೀಮಿತವಲ್ಲ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೂ ಸರ್ಕಾರ ನೆರವು ನೀಡಬೇಕೆಂಬುದು ಬಹು ಹಿಂದಿನ ಬೇಡಿಕೆ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿರುವುದು ಮುಂದಿನ ಗುಜರಾತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು. ಗುಜರಾತದಲ್ಲಿ ಬಿಜೆಪಿಗೆ ಕಾಂಗ್ರೆಸ್ ಎದುರಾಳಿಯಲ್ಲ. ಪಟೇಲ್ ಸಮುದಾಯಕ್ಕೆ ಮೀಸಲಾತಿ ಕೇಳುತ್ತಿರುವ ಹಾರ್ದಿಕ ಪಟೇಲ್ ನಿಜವಾದ ಎದುರಾಳಿ. ಹರಿಯಾಣದಲ್ಲಿ ಜಾಟರ ಚಳವಳಿ ಬಿಜೆಪಿಗೆ ಬಿಸಿತುಪ್ಪ. ಹೀಗಾಗಿ ಚಳವಳಿ ಮಾಡುವ ಪ್ರಬಲ ಜಾತಿಗೆ ಮೀಸಲಾತಿ ಕೊಡುವ ಬದಲು ಆರ್ಥಿಕವಾಗಿ ಅಶಕ್ತರಾಗಿರುವ ಎಲ್ಲರಿಗೂ ಸರ್ಕಾರ ನೆರವು ನೀಡಿದರೆ ಇಂತಹ ಸೊಲ್ಲೇ ಇರುವುದಿಲ್ಲ ಎಂಬುದು ಮೂಲ ಉದ್ದೇಶ. ಜಾತಿ, ಮತಗಳನ್ನು ಮೀರಿ ಉತ್ತರಪ್ರದೇಶದಲ್ಲಿ ಚುನಾವಣೆ ಗೆದ್ದಿರುವುದು ಬಿಜೆಪಿ ಸರ್ಕಾರ ತುರ್ತಾಗಿ ಇಂತಹ ನಿಲುವು ತಾಳಲು ಕಾರಣವಾಗಿದೆ. ನಿಜವಾಗಿ ಸಮಾನತೆಯ ಸಮಾಜ ನಿರ್ವಣವಾಗಲು, ಅರ್ಹತೆ ಆಧಾರದಲ್ಲಿ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಸರ್ಕಾರಿ ಸ್ಥಾನಮಾನಗಳನ್ನು ನೀಡುವಂತಾಗಲು ಎಲ್ಲೋ ಕಡೆ ಒಂದು ಶುಭಾರಂಭ ಆಗಬೇಕಿತ್ತು. ಅದೀಗ ಆಗುತ್ತಿದೆ. ಕೆಲ ಉದಾಹರಣೆ ಗಮನಿಸಿ. ಪಂಜಾಬಿ ಮೂಲದ ಖಟ್ಟರ್ ಹರಿಯಾಣದ ಮುಖ್ಯಮಂತ್ರಿ ಆದರು. ಮರಾಠಿ ಮಾಣುಸ್ ಘೊಷಣೆಯಿಂದ ಆಚೆ ಬಂದು ಫಡ್ನವಿಸ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡಲಾಯಿತು. ಬುಡಕಟ್ಟು ಸಮುದಾಯಕ್ಕೆ ಸೇರದ ರಘುವರ ದಾಸ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಆದರು. ಉತ್ತರಪ್ರದೇಶದಲ್ಲಿ ಕ್ಷಾತ್ರತೇಜದ ಓರ್ವ ಸಂನ್ಯಾಸಿ ಸಿಎಂ ಪಟ್ಟ ಅಲಂಕರಿಸಿದರು. ಇದರಿಂದ ಒಳ್ಳೆಯ ಸಂದೇಶ ರವಾನೆ ಆಗದೇನು?

ಕೇವಲ ತಂತ್ರಗಾರಿಕೆ ಮತ್ತು ದಾಳ ಪ್ರಯೋಗ ಎಲ್ಲ ಸಾರಿಯೂ ಕೈ ಹಿಡಿಯುವುದಿಲ್ಲ. ಇದಕ್ಕೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್-ಎಸ್ಪಿಯನ್ನು ಮಣ್ಣು ಮುಕ್ಕಿಸಿದ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಉದಾಹರಣೆಯೊಂದೇ ಸಾಕು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸಂಘಟನಾ ಚತುರ. 2002ರಿಂದ ಗುಜರಾತದಲ್ಲಿ ಅವರು ಆರಂಭಿಸಿದ ಬೂತ್ ಕಮಿಟಿ ರಚನೆ, ಬೂತ್ವುಟ್ಟದಲ್ಲಿ ಸಾಮಾಜಿಕ ನ್ಯಾಯ, ಸ್ವಸಾಮರ್ಥ್ಯ ಆಧರಿಸಿ 21 ಮಂದಿ ತಂಡ ಕಟ್ಟಿದ ಅವರ ಪರಿಶ್ರಮ ಗುಜರಾತ್, ಮಹಾರಾಷ್ಟ್ರ, ಹರಿಯಾಣದಿಂದ ಉತ್ತರಪ್ರದೇಶದವರೆಗೆ ಉಪಯೋಗಕ್ಕೆ ಬರುತ್ತಿದೆ ಅಷ್ಟೆ. ದಣಿವಿನ ಅರಿವೇ ಇಲ್ಲದ ಮೋದಿ-ಷಾ ಜೋಡಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬರುವ ಹಿಂದಿನ ದಿನ ಗುಜರಾತದ ಸೋಮನಾಥ ಮಂದಿರಕ್ಕೆ ತೆರಳಿ ಪೂಜಾ ಕೈಂಕರ್ಯ ಕೈಗೊಂಡಿದೆ. ಇದರ ಸೂಚನೆ ಏನು? ಈ ಇಬ್ಬರೂ ಗುಜರಾತದ ಸವಾಲನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಅಂತ. ಇಷ್ಟೆಲ್ಲ ಪ್ರವರದ ಉದ್ದಿಶ್ಯ ಇಷ್ಟೆ, ರಾಜಕೀಯ ಬಲವರ್ಧನೆ ಉತ್ತಮ ಸಮಾಜದ ನಿರ್ವಣಕ್ಕೂ ಕಾರಣ ಆಗುತ್ತಿದೆ ಎಂಬುದಕ್ಕಾಗಿ…

ಇನ್ನಷ್ಟು ಅಚ್ಛೇ ದಿನಗಳು ಬರಲಿ, ಅಲ್ಲವೇ?

(ಲೇಖಕರು ‘ವಿಜಯವಾಣಿ’ ಸಂಪಾದಕರು)

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top