ಬವಣೆಯ ಬೆಂಕಿಯಲ್ಲಿ ಬೆಂದು ಬದಲಾವಣೆ ತಂದಾಕೆ (May 6, 2017)

ರಾಷ್ಟ್ರ ರಾಜಧಾನಿಯಲ್ಲಿ ಆ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಮಾರಣಾಂತಿಕ ಹಲ್ಲೆ ದೇಶದ ಅಂತಸ್ಸಾಕ್ಷಿಯನ್ನೇ ಕಲಕಿತು. ಆಕೆಯ ನೋವು ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಯಿತು. ಈ ಪರಿಣಾಮ ಶಾಶ್ವತವಾಗಿರಲಿ, ಮಹಿಳೆಯನ್ನು ದೇವತೆಯಂತೆ ಕಾಣುವ ಈ ದೇಶದ ಪರಂಪರೆ ಮಾಯವಾಗದಿರಲಿ ಎಂಬುದು ಈ ಹೊತ್ತಿನ ಆಶಯ.

ಪ್ರತಿ ವರ್ಷ ಮೇ 5ನ್ನು ಮಹಿಳಾ ಸುರಕ್ಷಾ ದಿನ ಎಂದು ಆಚರಿಸಿದರೆ ಹೇಗೆ? ಸರ್ಕಾರಗಳು ಈ ನಿಟ್ಟಿನಲ್ಲಿ ಆಲೋಚನೆ ಮಾಡಬಹುದು. ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರೆ, ಕೆಟ್ಟ ದೃಷ್ಟಿಯಿಂದ ನೋಡಿದರೆ ಅಥವಾ ಯಾವುದೇ ರೀತಿಯಿಂದ ಅಗೌರವ ತೋರಿದರೆ, ಅಪಮಾನ ಮಾಡಿದರೆ ಎಂತಹ ಶಾಸ್ತಿ ಆಗುತ್ತದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದಕ್ಕಾಗಿ ಮಹಿಳಾ ಸುರಕ್ಷಾ ದಿನವೆಂದು ಆಚರಿಸುವುದು ಸೂಕ್ತ ಎಂಬುದು ನನ್ನ ಭಾವನೆ. ಹಾಗೆಯೇ ಮುಂದೆಂದೂ ಇಂತಹ ದುರ್ಘಳಿಗೆ ಮರುಕಳಿಸಬಾರದು ಎಂಬ ಎಚ್ಚರಿಕೆಯನ್ನು ಸದಾ ಕಾಲ ಇಟ್ಟುಕೊಳ್ಳುವುದಕ್ಕಾಗಿ ಅಮಾಯಕಿ ನಿರ್ಭಯಾಳ ಮೇಲೆ ಅತ್ಯಾಚಾರ ನಡೆದ ಡಿಸೆಂಬರ್ 16ನ್ನು ಕರಾಳ ದಿನವೆಂದು ಆಚರಿಸಿದರೆ ಅರ್ಥಪೂರ್ಣ ಆದೀತು ಎಂಬುದು ಒಟ್ಟು ತಾತ್ಪರ್ಯ. ಆಗ ಆಗಬೇಕಾದ ಜಾಗೃತಿ ಆದೀತು. ಇರಲಿ…

ಕೊನೆಗೂ ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿರಲು ಸಾಕು. ಆ ಕ್ಷಣಗಳಲ್ಲಿ ಆ ಅಮಾಯಕಿ ಅದೆಷ್ಟು ಯಾತನೆ ಪಟ್ಟಳೋ. ಕೊನೆಗೂ ಇಪ್ಪತ್ತು ದಿನಗಳ ಸಾವು ಬದುಕಿನ ಹೋರಾಟದಲ್ಲಿ ನಿರ್ಭಯಾ ಸಿಂಗಾಪುರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಐದು ವರ್ಷಗಳ ತರುವಾಯ, ನಾಲ್ಕು ಅಪರಾಧಿಗಳಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯುವ ಮೂಲಕ ನಮ್ಮ ನ್ಯಾಯಾಂಗ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ನೆಟ್ಟಿದೆ ಎಂಬುದು ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶ.

ನಿರ್ಭಯಾ ಪ್ರಕರಣಕ್ಕೆ ಸಂಬಂಧಪಟ್ಟು ಈ ಕೆಳಗಿನ ಕೆಲ ಪ್ರಮುಖಾಂಶಗಳನ್ನು ಅವಲೋಕನ ಮಾಡುವುದು ಸೂಕ್ತ ಎನಿಸುತ್ತದೆ.

ಇಂತಹ ಪ್ರಕರಣಗಳು ಈ ಹಿಂದೆ ನಡೆದಿರಲಿಲ್ಲವೇ?: ಖಂಡಿತ ಹಾಗೆ ಹೇಳುವ ಹಾಗಿಲ್ಲ. ಈ ಹಿಂದೆ ನೂರಾರು, ಸಾವಿರಾರು ಅತ್ಯಾಚಾರ ಪ್ರಕರಣಗಳು ನಡೆದಿವೆ. ಅದೆಷ್ಟೋ ಮಂದಿ ನಮ್ಮ ಸಹೋದರಿಯರು ಪ್ರಾಣ ಕಳೆದುಕೊಂಡಿದ್ದಾರೆ; ಎಷ್ಟೋ ಮಂದಿ ಕಾಮುಕರ ಕ್ರೌರ್ಯಕ್ಕೆ ಸಿಲುಕಿ ಜೀವಚ್ಛವದಂತೆ ಬದುಕುತ್ತಿದ್ದಾರೆ; ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆದರೆ ಆ ದಿನ ಅಂದರೆ 2012ರ ಡಿಸೆಂಬರ್ 16ರ ಸಾಯಂಕಾಲ ಇಂಥ ಮನಸ್ಥಿತಿಯವರ ಪ್ರತಿನಿಧಿಗಳಂತಿದ್ದ ಕಾಮುಕರ ಪಾಪದ ಕೊಡ ಭರ್ತಿ ಆಗಿತ್ತು ಎನ್ನಬಹುದಷ್ಟೆ.

ನ್ಯಾಯದಾನದ ಶ್ರೇಯಸ್ಸು ಮಾಧ್ಯಮಕ್ಕೆ ಸಲ್ಲಬೇಕು: ಯಾವುದೇ ಅಕ್ರಮ, ಅನ್ಯಾಯ ನಡೆದಾಗ ಪ್ರಬಲ ಧ್ವನಿ ಎತ್ತಿದರೆ ‘ವೈಭವೀಕರಣ’ದ ಅಪವಾದಕ್ಕೆ ಮಾಧ್ಯಮಗಳು ಸಿಲುಕುವುದು ಸರ್ವೆಸಾಮಾನ್ಯ. ಅದು ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಈಗಲೂ ನಡೆಯುತ್ತಿದೆಯೆನ್ನಿ. ಆದರೆ ನಿರ್ಭಯಾ ಪ್ರಕರಣದಲ್ಲಿ ಹಾಗೆನ್ನುವಂತೆಯೇ ಇಲ್ಲ. ಆ ಯುವತಿಯ ಮೇಲೆ ಅತ್ಯಾಚಾರ ನಡೆದ ಮರುಕ್ಷಣದಿಂದ ಪ್ರಕರಣ ಈಗಿನ ರ್ತಾಕ ಅಂತ್ಯ ಕಾಣುವ ಹಂತ ತಲುಪುವವರೆಗೆ ಮುಂಚೂಣಿಯಲ್ಲಿ ನಿಂತು ಕ್ರಿಯಾಶೀಲ ಪಾತ್ರ ವಹಿಸಿದ್ದು ಈ ದೇಶದ ಮಾಧ್ಯಮಗಳು ಎಂಬುದರಲ್ಲಿ ಅನುಮಾನಕ್ಕೆ ಅವಕಾಶವೇ ಇಲ್ಲ. ಮೊದಲೇ ಹೇಳಿದಂತೆ, ನಿರ್ಭಯಾ ಪ್ರಕರಣದ ಮುಂಚೆಯೂ ಲೆಕ್ಕವಿಲ್ಲದಷ್ಟು ಅತ್ಯಾಚಾರ/ಕೊಲೆ ಇತ್ಯಾದಿ ಕ್ರೌರ್ಯಗಳು ನಡೆದಿವೆ. ಆದರೆ ಬೆಳಕಿಗೆ ಬರುತ್ತಿದ್ದುದು ಬೆರಳೆಣಿಕೆಯಷ್ಟು. ನಿರ್ಭಯಾ ಪ್ರಕರಣದಲ್ಲಿ ಮಾಧ್ಯಮಗಳು ತೆಗೆದುಕೊಂಡ ನಿಲುವಿನಿಂದ, ಹೋರಾಟದ ಧೋರಣೆಯಿಂದ ಏನೆಲ್ಲ ಸಕಾರಾತ್ಮಕ ಪರಿಣಾಮಗಳಾದವು ಎಂಬುದನ್ನೂ ಇಲ್ಲಿ ಅವಲೋಕಿಸಬೇಕಿದೆ.

ಮಹಿಳೆಗೆ ಬಂತು ಧೈರ್ಯ: ಮುಂಚೆ, ಅತ್ಯಾಚಾರವೆಂದರೆ ಹೆಣ್ಣಿನ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿತ್ತು. ಅಂಥ ಯುವತಿ/ಮಹಿಳೆಯರನ್ನು ಸಮಾಜದಲ್ಲಿ ಅತಿ ನಿಕೃಷ್ಟವಾಗಿ ನೋಡಲಾಗುತ್ತಿತ್ತು, ಅಂತಹ ಹೆಣ್ಣು ಸಾಮಾಜಿಕ ವ್ಯವಸ್ಥೆಯಲ್ಲಿ ತಿರಸ್ಕಾರಕ್ಕೆ ಒಳಗಾಗುತ್ತಿದ್ದಳು. ಪರಿಣಾಮವಾಗಿ ಲೈಂಗಿಕ ಶೋಷಣೆ, ಅತ್ಯಾಚಾರಕ್ಕೆ ಒಳಗಾದ ಯುವತಿಯರು ಅಥವಾ ಮಹಿಳೆಯರು ತಮಗಾದ ಅನ್ಯಾಯವನ್ನು ಯಾರ ಮುಂದೆಯೂ ಬಹಿರಂಗವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ವಹಿಸಿದ ಕ್ರಿಯಾಶೀಲ ಪಾತ್ರದಿಂದಾಗಿ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ನಿರ್ಭೀತಿಯಿಂದ ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತುವ ಶಕ್ತಿ ಮತ್ತು ಕೆಚ್ಚನ್ನು ಗಳಿಸಿಕೊಂಡರು ಎಂದರೆ ಅತಿಶಯೋಕ್ತಿ ಅಲ್ಲ. ಈಗ ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಆಗಿರುವುದು ಈ ಮಾತಿಗೆ ಪುಷ್ಟಿ ನೀಡುತ್ತದೆ.

ಕಾಮುಕರ ದಂಡಿಸುವ ಕಾನೂನಿಗೆ ಬಲ: ನಿರ್ಭಯಾ ಪ್ರಕರಣಕ್ಕೂ ಪೂರ್ವದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ಒಂದು ಸಾಮಾನ್ಯ ಅಪರಾಧವಾಗಿತ್ತು. ಪೊಲೀಸ್ ಠಾಣೆಗಳಲ್ಲಾಗಲಿ, ನ್ಯಾಯಾಲಯಗಳಲ್ಲಾಗಲಿ ಅದೊಂದು ಪ್ರಮುಖ ಪ್ರಕರಣ ಎಂದು ಪರಿಗಣಿಸುವ ಪ್ರಸಂಗ ತೀರಾ ಕಡಿಮೆ ಆಗಿತ್ತು. ಆದರೆ ನಿರ್ಭಯಾ ಪ್ರಕರಣದ ಬಳಿಕ ಸಂಸತ್ತಿನಲ್ಲಿ ಅತ್ಯಾಚಾರ ತಡೆ ಕಾನೂನಿಗೆ ತಿದ್ದುಪಡಿ ತಂದು ಅದೊಂದು ಕಠಿಣಾತಿ ಕಠಿಣ ಶಿಕ್ಷೆಗೆ ಒಳಪಡಿಸಬಹುದಾದ, ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಯಿತು. ಹೀಗಾಗಿ ತದನಂತರದಲ್ಲಿ ನ್ಯಾಯಾಲಯಗಳಲ್ಲಿ ಅತ್ಯಾಚಾರ ಪ್ರಕರಣಗಳು ತ್ವರಿತವಾಗಿ ವಿಚಾರಣೆಗೊಳಪಟ್ಟು ಶಿಕ್ಷೆಗೆ ಗುರಿಪಡಿಸುವ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ನಿರ್ಭಯಾಳ ಜೀವನವನ್ನು ನಾಶಗೊಳಿಸಿದವರಿಗೆ ಗಲ್ಲು ಶಿಕ್ಷೆ ವಿಧಿಸಿ ಕೆಳ ನ್ಯಾಯಾಲಯಗಳು ನೀಡಿದ ತೀರ್ಪನ್ನು ಸುಪ್ರೀಂಕೋರ್ಟ್ ಇದೀಗ ಎತ್ತಿ ಹಿಡಿದದ್ದನ್ನು ನಾವು ಪ್ರಮುಖವಾಗಿ ಪರಿಗಣಿಸಬೇಕಿದೆ. ಈ ತೀರ್ಪು ಮುಂದೆ ಇಂಥ ಪ್ರಕರಣಗಳಲ್ಲಿ ಮೈಲಿಗಲ್ಲು ಮತ್ತು ನಿದರ್ಶನ ಆಗುವುದರಲ್ಲಿ ಅನುಮಾನವಿಲ್ಲ. ಇದಲ್ಲದೆ 400 ತ್ವರಿತಗತಿ ನ್ಯಾಯಾಲಯಗಳು ರಚನೆಯಾಗಿವೆ.

ನಿರ್ಭಯಾ ಫಂಡ್ ರಚನೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತ್ಯಾಚಾರ ಸಂತ್ರಸ್ತರ ನೆರವಿಗೆ ‘ನಿರ್ಭಯಾ ಫಂಡ್’ ಹೆಸರಿನಲ್ಲಿ ಅಂದಾಜು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿವೆ. ನಿಜ, ಈ ನಿಧಿ ಸರಿಯಾಗಿ ಬಳಕೆ ಆಗುತ್ತಿಲ್ಲ ಎಂಬ ಆಕ್ಷೇಪವಿದೆ. ಅದಕ್ಕೆ ಕಾರಣವೂ ಇದೆ. ಅಪಾರ ಪ್ರಮಾಣದ ನಿಧಿಯನ್ನು ತೆಗೆದಿರಿಸಿರುವ ಸರ್ಕಾರ ಅದರ ವಿನಿಯೋಗಕ್ಕೆ ಸರಿಯಾದ ಕಾರ್ಯಕ್ರಮ ರೂಪಿಸುವಲ್ಲಿ ನಿಧಾನಗತಿ ತೋರುತ್ತಿದೆ. ಇದೊಂದು ಕಾಟಾಚಾರದ ಕ್ರಮವಾಗದೆ, ಮಹಿಳಾ ರಕ್ಷಣೆಯ ಉಪಕ್ರಮಗಳಿಗೆ ಖರ್ಚು ಮಾಡುವಂತಾದರೆ ನಿರ್ಭಯಾ ನಿಧಿ ಕಾಯ್ದಿರಿಸಿದ್ದು ಸಾರ್ಥಕವಾಗುತ್ತದೆ.

ಮಹಿಳಾ ಠಾಣೆಗಳು ಹೆಚ್ಚಾದವು: ಮೊದಲು ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳಾ ಠಾಣೆಗಳು ನಾಮ್ೆವಾಸ್ತೆ ಎನ್ನುವಂತಿದ್ದವು; ಇಲಾಖೆಯಲ್ಲಿ ಮಹಿಳಾ ನೇಮಕಾತಿಗೆ ಸಿಗಬೇಕಾದ ಆದ್ಯತೆ ಸಿಕ್ಕಿರಲಿಲ್ಲ. ಈ ಪ್ರಕರಣದ ಬಳಿಕ ದೇಶಾದ್ಯಂತ ಮೂರುಸಾವಿರ ಮಹಿಳಾ ಠಾಣೆಗಳು ಹೊಸದಾಗಿ ಕಾರ್ಯಾರಂಭ ಮಾಡಿವೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ನೇಮಕಾತಿ ಹೆಚ್ಚಳ ಕಂಡಿದೆ.

ತಂತ್ರಜ್ಞಾನದ ಬಳಕೆ: ನಿರ್ಭಯಾ ಪ್ರಕರಣ ಜರುಗುವವರೆಗೆ ಅಥವಾ ಬೆಳಕಿಗೆ ಬರುವವರೆಗೆ ಮಹಿಳಾ ಸುರಕ್ಷತೆ ಕಡೆಗೆ ಯಾರೂ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ನಂತರದಲ್ಲಿ ಈ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಗಾಧವಾಗಿ ಬಳಸಲಾಯಿತು. ಮೊಬೈಲ್ ಫೋನ್ಗಳಲ್ಲಿ ಎಮರ್ಜೆನ್ಸಿ ಬಟನ್ ಅಳವಡಿಕೆಯಿಂದ ಹಿಡಿದು ಹತ್ತು ಹಲವು ಸುರಕ್ಷಾ ಕ್ರಮಗಳನ್ನು ಸಾಧ್ಯವಾಗಿಸಲಾಗಿದೆ. ಸಹಾಯವಾಣಿ, ಮೊಬೈಲ್ ಆಪ್ಗಳು ತಯಾರಾಗಿವೆ. ಮುಖ್ಯವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಫೇಸ್ಬುಕ್/ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕವೂ ಪೊಲೀಸ್ ದೂರು ದಾಖಲಿಸುವ ವ್ಯವಸ್ಥೆಯನ್ನು ಕಲ್ಪಿಸಿರುವುದು ಗಣನೀಯ ಪ್ರಮಾಣದಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬರಲು ಮತ್ತು ಸಂತ್ರಸ್ತರಿಗೆ ನ್ಯಾಯ, ರಕ್ಷಣೆ ಒದಗಿಸಲು ಅನುಕೂಲವಾಗಿದೆ.

ತನಿಖೆಯಲ್ಲಿ ಸುಧಾರಣೆ: ಬಹುತೇಕ ಸಂದರ್ಭಗಳಲ್ಲಿ ಅತ್ಯಾಚಾರ ಸಂತ್ರಸ್ತೆಯರು ತಮಗಾದ ಅನ್ಯಾಯದ ವಿರುದ್ಧ ದೂರು ದಾಖಲಿಸಲು ಹಿಂದೇಟು ಹಾಕುತ್ತಾರೆ. ಇಂಥ ಪ್ರಕರಣಗಳ ವಿಚಾರಣೆ ಮತ್ತು ತನಿಖಾ ಪದ್ಧತಿಯಲ್ಲಿ ಅನುಸರಿಸುತ್ತಿದ್ದ ಅಮಾನವೀಯ ವಿಧಾನ ಕೂಡ ಈ ಪ್ರವೃತ್ತಿಗೆ ಕಾರಣವಾಗಿತ್ತು. ನಿರ್ಭಯಾ ಪ್ರಕರಣದ ಬಳಿಕ ಥ್ರೀ ಫಿಂಗರ್ ಟೆಸ್ಟ್ನಂತಹ ಅವೈಜ್ಞಾನಿಕ ಮತ್ತು ಅಮಾನವೀಯ ತನಿಖಾ ವಿಧಾನದಿಂದ ಹಿಡಿದು ಅತ್ಯಾಚಾರ ಸಂತ್ರಸ್ತೆಯ ಗೌಪ್ಯತೆ ಕಾಪಾಡುವವರೆಗೆ ಅನೇಕ ವಿಧಾನಗಳಲ್ಲಿ ಗಣನೀಯ ಮಾರ್ಪಾಡು ತರಲಾಯಿತು. ಇದೂ ಕೂಡ ಮಹಿಳೆಯರು ತಮಗಾದ ಅನ್ಯಾಯವನ್ನು ಪೊಲೀಸ್ ಮತ್ತು ತನಿಖಾ ಸಂಸ್ಥೆಗಳ ಮುಂದೆ ಹೇಳಿಕೊಳ್ಳುವುದಕ್ಕೆ ಪ್ರಮುಖ ಕಾರಣಗಳಲ್ಲೊಂದು ಎಂಬುದರಲ್ಲಿ ಸಂಶಯವಿಲ್ಲ.

ಜನಶಕ್ತಿಗೆ ಸಿಕ್ಕ ವಿಜಯ: ಒಟ್ಟಾರೆಯಾಗಿ ಹೇಳುವುದಾದರೆ, ನಿರ್ಭಯಾ ಪ್ರಕರಣದಲ್ಲಿ ನ್ಯಾಯ ಸಿಕ್ಕಿರುವುದು ದೇಶದ ಜಾಗೃತ ಜನಶಕ್ತಿಗೆ ಸಿಕ್ಕ ವಿಜಯ, ಮಾನವೀಯತೆಯ ಜಾಗೃತಿಗೆ ಸಿಕ್ಕ ಜಯ ಎನ್ನಬಹುದು. ಕಾರಣ ಇಷ್ಟೆ, ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಮುಖವಾಗಿ ಪ್ರಕಟವಾಗುತ್ತಿದ್ದಂತೆ ದೆಹಲಿಯಿಂದ ಹಳ್ಳಿಯವರೆಗೆ ಇಡೀ ಸಮಾಜ ಒಂದಾಗಿ ಒಗ್ಗಟ್ಟಿನಿಂದ ಬೀದಿಗೆ ಇಳಿಯಿತು. ಇದು ಸರ್ಕಾರ, ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ಎಲ್ಲದರ ಮೇಲೆ ಒತ್ತಡ ನಿರ್ವಿುಸಿತು. ಅದರ ಪರಿಣಾಮ ಸಾಮಾಜಿಕ ವ್ಯವಸ್ಥೆಯಲ್ಲೂ ಸಾಕಷ್ಟು ಜಾಗೃತಿ ಉಂಟಾಯಿತು. ಇದೀಗ ಅದರ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಿರ್ಭಯಾಗೆ ಜೀವಂತ ನರಕ ತೋರಿಸಿದ ಕಾಮುಕರು ನೇಣು ಕುಣಿಕೆಗೆ ಕೊರಳೊಡ್ಡಲೇಬೇಕಾಗುತ್ತದೆ.

ಗೌರವದ ಗುಣ ಬೆಳೆಸಬೇಕಿದೆ: ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸುವ ವೇಳೆ ನ್ಯಾ.ಭಾನುಮತಿ ಅವರು ಒಂದು ಪ್ರಮುಖ ಅಂಶವನ್ನು ಉಲ್ಲೇಖಿಸಿದ್ದಾರೆ. ಅದೆಂದರೆ ಶಾಲಾ ಶಿಕ್ಷಣದಲ್ಲಿ ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಸಬೇಕು ಎನ್ನುವುದು. ಅವರ ಆಶಯವನ್ನು ನಾವು ಇನ್ನೂ ಒಂದಿಷ್ಟು ವಿಸ್ತರಿಸಿ ಆಲೋಚಿಸಬಹುದು. ಮಹಿಳೆ ಉಪಭೋಗದ ವಸ್ತು, ಮಾರಾಟದ ಸರಕು ಎಂದು ಸಿನಿಮಾಗಳಲ್ಲಿ, ವಾಣಿಜ್ಯಿಕ ಜಾಹೀರಾತುಗಳಲ್ಲಿ ಬಿಂಬಿಸುವುದನ್ನು ತಡೆಯಬೇಡವೇ? ಆ ಬಗ್ಗೆ ಸ್ವತಃ ಮಹಿಳೆಯರಾದರೂ ಆಲೋಚಿಸಬೇಡವೇ? ಈ ನಿಟ್ಟಿನಲ್ಲಿ ಗಮನಾರ್ಹ ಬದಲಾವಣೆಯಾದಲ್ಲಿ ಮಹಿಳೆಯರನ್ನು ತಾಯಿ, ತಂಗಿ ಇತ್ಯಾದಿ ಗೌರವದಿಂದ ನೋಡುವ ಪರಂಪರೆಯ ಭಾರತದಲ್ಲಿ ಮಹಿಳಾ ಗೌರವ ಮತ್ತೆ ಸ್ಥಾಪನೆಯಾಗಲು, ಅತ್ಯಾಚಾರ, ದೌರ್ಜನ್ಯಗಳು ಕಡಿಮೆ ಆಗಲು ದೊಡ್ಡ ಕಾಣಿಕೆ ನೀಡಿದಂತಾಗಬಹುದಲ್ಲವೇ?

ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ ಅವರು ಮಹಿಳೆಯರ ವಿಷಯದಲ್ಲಿ ಯಾವರೀತಿಯ ಗೌರವ ಹೊಂದಿದ್ದರು ಎಂಬುದನ್ನು ಇಂದಿನ ಯುವಜನತೆಗೆ ತಿಳಿಸಿಕೊಡಬೇಕಾದ ಅನಿವಾರ್ಯತೆಯನ್ನು ಪ್ರಸ್ತಾಪಿಸಲಾಗಿದೆ. ನಿಜ, ಎಲ್ಲದಕ್ಕಿಂತ ಮುಖ್ಯವಾಗಿ ಇಂದಿನ ಸಂದರ್ಭದಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತುಕೊಡುವ ಅವಶ್ಯಕತೆಯಿದೆ. ಹಾಗೆ ನೋಡಿದರೆ ಕೇವಲ ವಿವೇಕಾನಂದರು ಮಾತ್ರವಲ್ಲ, ಭಾರತೀಯ ಪರಂಪರೆಯಲ್ಲಿ ಇಂತಹ ಹತ್ತಾರು ಮಹನೀಯರ ಮಹಾನ್ ವಿಚಾರಗಳು ನಮಗೆ ಸಿಗುತ್ತವೆ. ಆದರೆ ನಾವು ಅತ್ತ ನೋಡುವ ಮನೋಭಾವ ತೋರಬೇಕಲ್ಲ… ಆರಂಭಿಸುವುದು ಎಲ್ಲಿಂದ?

ಒಟ್ಟಾರೆ ಹೇಳುವುದಿಷ್ಟೆ. ಮಹಿಳಾ ಗೌರವ ಕಾಪಾಡುವ ನಿಟ್ಟಿನಲ್ಲಿ ನಿರ್ಭಯಾ ಪ್ರಕರಣ ಹೊಸ ಆಲೋಚನೆಗೆ ಹೊರಳಲು, ಹೊಸ ದಿಕ್ಕಿನೆಡೆಗೆ ಸಾಗಲು ಪ್ರೇರಣೆಯಾಗಲಿ… ನಿನ್ನ ಸಾವು ವ್ಯರ್ಥವಾಗದಿರಲಿ ನಿರ್ಭಯಾ…

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top