ಚೆನ್ನಮ್ಮ ಬೇಕೊ? ಔರಂಗಜೇಬ ಬೇಕೊ? ನೀವೇ ನಿರ್ಧರಿಸಿ : ವಿಸ್ತಾರ ಅಂಕಣ

“ದೇಶದಲ್ಲಿರುವ ಮುಸಲ್ಮಾನರಿಗೆ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಅಸಹನೆ ಉಂಟಾಗಿದೆ. ಅಲ್ಪಸಂಖ್ಯಾತರನ್ನು ಮೋದಿ ತುಳಿಯುತ್ತಿರುವ ಕಾರಣ ಅವರು ಈಗ ರೊಚ್ಚಿಗೆದ್ದು ಸಂಘಟಿತರಾಗಿದ್ದಾರೆ”…. ಹೀಗೆ ದೇಶದ ಮುಸಲ್ಮಾನ್ ಸಮುದಾಯದ ಕೆಲವರು ಅಲ್ಲಲ್ಲಿ ನಡೆಸುತ್ತಿರುವ, ಮೇಲ್ನೋಟಕ್ಕೆ ಅಸಂಘಟಿತ, ಆದರೆ ಗಮನಿಸಿ ನೋಡಿದರೆ ಸಂಘಟಿತ ಗಲಭೆಗಳಿಗೆ ಅನೇಕರು ಸಮಜಾಯಿಷಿ ನೀಡುವುದನ್ನು ಕೇಳಿದ್ದೇವೆ. ಕೋವಿಡ್ ಸಮಯದಲ್ಲಿ ಪಾದರಾಯನಪುರದಲ್ಲಿ ಗಲಭೆ ಆದಾಗ ಕೆಲವು ಕಿಡಿಗೇಡಿಗಳ ಕೆಲಸ ಎನ್ನುವುದು; ಕೆಜಿ ಹಳ್ಳಿ-ಡಿಜೆ ಹಳ್ಳಿಯಲ್ಲಿ ಪೊಲೀಸ್ ಠಾಣೆಗೇ ಬೆಂಕಿ ಇಟ್ಟಾಗ ಕೆಲವು ಕಿಡಿಗೇಡಿಗಳ ಮಂಗಾಟ ಎನ್ನುವುದು; ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಹಿಂದುಗಳ ಮನೆಯನ್ನೇ ಟಾರ್ಗೆಟ್ ಮಾಡಿ ಕಲ್ಲು ಹೊಡೆದಾಗ ಕೆಲವು ಕಿಡಿಗೇಡಿಗಳ ಉಡಾಳತನ ಎನ್ನುವುದು- ಇನ್ನೂ ಎಷ್ಟು ದಿನ ? ಈ ಗಲಭೆಗಳನ್ನು ನಾವು ʼಕೆಲವು ಕಿಡಿಗೇಡಿಗಳುʼ ಎಸಗಿದ ಕೆಲಸ ಎಂದು ಇನ್ನೂ ಎಷ್ಟು ದಿನ ಸಮರ್ಥಿಸಿಕೊಳ್ಳಬೇಕು? ಈ ಎಲ್ಲವೂ ಮಂಗಾಟ, ಉಡಾಳತನ, ರಂಪಾಟವಲ್ಲ. ವಿಧ್ವಂಸಕ ಕೃತ್ಯಗಳು. ಇದನ್ನು ಯಾರೇ ಮಾಡಿದರೂ ಕಾನೂನು ಕ್ರಮಕ್ಕೆ ಗುರಿಯಾಗಿಸಬೇಕು.
ನಾವು ಕೆಲವೊಂದು ಸತ್ಯವನ್ನು ಅರ್ಥ ಮಾಡಿಕೊಳ್ಳಲೇಬೇಕು. ಸಮುದಾಯದ ಕೆಲವರು ಮಾತ್ರ ಹೀಗೆ ಕೃತ್ಯಗಳನ್ನು ಮಾಡುತ್ತಾರೆ ಎಂದು ಹೇಳುವುದು ಇತಿಹಾಸದ ಕಣ್ಣಿಗೆ ಎರಚುವ ಮಣ್ಣಷ್ಟೆ ಕೋಲಾರದ ಐತಿಹಾಸಿಕ ಕ್ಲಾಕ್ ಟವರ್ ಬಳಿಯಲ್ಲಿ ಬೃಹತ್ ಖಡ್ಗವನ್ನು ಪ್ರದರ್ಶಿಸಲಾಯಿತು. ಖಡ್ಗವನ್ನು ಝಳಪಿಸುವುದು ಯಾವ ಶಾಂತಿಯ ಸಂಕೇತ? ಈದ್ ಹಬ್ಬಕ್ಕೂ ಇದಕ್ಕೂ ಏನು ಸಂಬಂಧ? ಕತ್ತಿಯ ಮೇಲೆ ಬರೆದಿದ್ದು ಅಪ್ಪಟ ಇಸ್ಲಾಮಿಕ್ ಬರಹ. “ಅಲ್ಲಾಹನನ್ನು ಬಿಟ್ಟು ಬೇರೆ ದೇವರಿಲ್ಲ, ಮೊಹಮ್ಮದರು ದೇವರ ಪ್ರವಾದಿ ಎನ್ನುವುದಕ್ಕೆ ನಾನೆ ಸಾಕ್ಷಿ” ಎಂದು ಕತ್ತಿಯ ಮೇಲೆ ಬರೆಯಲಾಗಿತ್ತು. ದೇವರು ಮತ್ತು ದೇವರ ಪ್ರವಾದಿಯ ಹೆಸರನ್ನು ಹೀಗೆ ಬಿಂಬಿಸುವುದು ಅಲ್ಲಾಹು ಮತ್ತು ಪ್ರವಾದಿಗೆ ಮಾಡುವ ಅಪಚಾರ.
ಹಾಗೆ ನೋಡಿದರೆ, ಈ ಧರ್ಮವನ್ನು ವಿಶ್ವದಾದ್ಯಂತ ಹಬ್ಬಿಸಿದ್ದು ಕತ್ತಿಯ ಅಲಗಿನಿಂದಲೆ. ಒಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಧರ್ಮಗ್ರಂಥ ಹಿಡಿದಿದ್ದರು. ಧರ್ಮಗ್ರಂಥ ಬೇಕೊ ಅಥವಾ ಕತ್ತಿಯಿಂದ ನಿನ್ನ ಕತ್ತನ್ನು ಕತ್ತರಿಸಲೋ ಎನ್ನುವುದು ಸ್ಪಷ್ಟ ಸಂದೇಶ. ಇಂತಹ ದಾಳಿ ಮಾಡಿದವರ ಪಟ್ಟಿಯಲ್ಲಿ ಔರಂಗಜೇಬನೂ ಒಬ್ಬ.
ಔರಂಗಜೇಬ, ಅಕ್ಬರ್ ಸೇರಿ ಅನೇಕ ಮುಸ್ಲಿಮರು ಭಾರತವನ್ನು ಆಕ್ರಮಿಸಿಕೊಂಡು ಆಳುತ್ತಿದ್ದರು. ಈ ಭೂಮಿಯನ್ನು ದಾರ್ ಉಲ್ ಹರಬ್ (ಯುದ್ಧ ಭೂಮಿ) ಅನ್ನು ದಾರ್ ಉಲ್ ಇಸ್ಲಾಂ (ಇಸ್ಲಾಂ ಭೂಮಿ) ಆಗಿ ಪರಿವರ್ತಿಸಲು ಮುಂದಾಗಿದ್ದರು. ಈ ವಿಚಾರವನ್ನು ಆಕ್ರಮಣ ಮಾಡಿದವರಾಗಲಿ, ಇತಿಹಾಸಕಾರರಾಗಲಿ ಎಲ್ಲೂ ಮುಚ್ಚಿಟ್ಟಿಲ್ಲ. ಆದರೆ ತಮ್ಮ ನೆರೆಹೊರೆಯಲ್ಲಿ, ಕಚೇರಿಯಲ್ಲಿ ಕೆಲಸ ಮಾಡುವ ಮುಸ್ಲಿಮರನ್ನು, ʼಇವನೊಬ್ಬ ದಾಳಿಕೋರʼ ಎನ್ನುವಂತೆ ಯಾರೂ ನೋಡಲು ಇಷ್ಟಪಡುವುದಿಲ್ಲ. ಹಿಂದೆಲ್ಲ ನಡೆದಿದ್ದು ನಡೆದುಹೋಯಿತು. ಮುಂದಿನ ಜೀವನ ನೋಡೋಣ ಎನ್ನುವ ವರ್ಗವೇ ಹಿಂದುಗಳಲ್ಲಿ ಹೆಚ್ಚು. ಉತ್ತರ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಜಾತ್ರೆಗಳನ್ನೂ ಮುಸ್ಲಿಮರೊಂದಿಗೆ ಆಚರಿಸುವ ಸಂಪ್ರದಾಯವಿದೆ. ಇದೊಂದು ಒಳ್ಳೆ ಸಂಪ್ರದಾಯ. ಆದರೆ ಮುಸ್ಲಿಂ ಸಮುದಾಯದ ಕೆಲವು ನಾಯಕರಿಗೆ ಈ ಸದ್ಭಾವನೆ ,ಸದ್ಯ ಚುಕ್ಕಾಣಿ ಹಿಡಿದವರಲ್ಲೂ ಈ ಮನೋಭಾವನೆ ಇಲ್ಲ. ಇವರಲ್ಲಿ ಮತೀಯ ಮುಖಂಡರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಶಾಮೀಲಾಗಿದ್ದಾರೆ.
ಮುಸ್ಲಿಂ ರಾಜರು ಆಳ್ವಿಕೆ ಮಾಡುತ್ತಿದ್ದ ಭೂಮಿಯನ್ನು ಬ್ರಿಟಿಷರು ಕಿತ್ತುಕೊಂಡರು. ಆದರೆ ನಂತರ ದೇಶ ಮತ್ತೆ ʼಕಾಫೀರರʼ ಕೈಗೆ ಹೋಯಿತು. ಇದನ್ನು ಮತ್ತೆ ಇಸ್ಲಾಮಿಕ್ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂಬ ಅಂಡರ್ ಕರೆಂಟ್ ಬಹು ಜೋರಾಗಿಯೇ ಇನ್ನೂ ಇದೆ. ಇದೀಗ ಶಿವಮೊಗ್ಗದ ರಾಗಿ ಗುಡ್ಡದಲ್ಲಿ ಹಾಕಲಾಗಿದ್ದ ಔರಂಗಜೇಬನ ಬೃಹತ್ ಕಟೌಟ್, ಅಖಂಡ ಭಾರತ ಸಾಮ್ರಾಜ್ಯ ಕಟ್ಟಿದ ಮಹಾನ್ ದೊರೆ ಎಂಬ ಶಬ್ದಗಳನ್ನು ಬಳಸಿರುವುದೂ ಈ ಮಾನಸಿಕತೆಯ ಮುಂದುವರಿಕೆ. ಅಖಂಡ ಭಾರತವನ್ನು ಕಟ್ಟಿದ ದೊರೆ ಔರಂಗಜೇಬ ಎನ್ನುವವರು ಕನ್ನಡಿಗರಿಗೆ ಏನು ಉತ್ತರ ಕೊಡುತ್ತಾರೆ? ಶಿವಮೊಗ್ಗದ ಈಗಿನ ಸಾಗರ ತಾಲೂಕಿನಲ್ಲಿರುವ ಕೆಳದಿ, ಆ ಸಂಸ್ಥಾನದ ರಾಣಿ ಚೆನ್ನಮ್ಮನಿಗೆ ಏನು ಉತ್ತರ ಕೊಡುತ್ತಾರೆ?
ಕೆಳದಿಯ ರಾಜ ರಾಜ ಸೋಮಶೇಖರನಾಯಕ ಪ್ರಾರಂಭದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೂ ದುರ್ಜನರ ಸಹವಾಸದಿಂದ ದುಶ್ಚಟಗಳಿಗೆ ಬಲಿಯಾದ. 1671ರಲ್ಲಿ ಕೊಲೆಯಾದ. ಅವನಿಗೆ ಮಕ್ಕಳಿರಲಿಲ್ಲ. ಕೆಳದಿ ಸಂಸ್ಥಾನದಲ್ಲಿ ಅರಾಜಕತೆಯುಂಟಾಯಿತು. ನಾಯಕ ಮನೆತನದ ವಿರೋಧಿಗಳು ತಮಗೆ ಬೇಕಾದವನೊಬ್ಬನನ್ನು ನಾಯಕಪಟ್ಟಕ್ಕೆ ತರಲು ಹವಣಿಸಿದರು. ಅಂಥ ಸನ್ನಿವೇಶದಲ್ಲಿ ಚೆನ್ನಮ್ಮ ಆಡಳಿತವನ್ನು ವಹಿಸಿಕೊಂಡು ಅಸಾಧಾರಣ ಜಾಣ್ಮೆಯಿಂದ ಸಂಸ್ಥಾನದಲ್ಲಿ ಶಾಂತಿ ಸ್ಥಾಪಿಸಿದಳು. ಕೆಳದಿಯಲ್ಲಿ ಉಂಟಾಗಿದ್ದ ದುಃಸ್ಥಿತಿಯನ್ನು ಉಪಯೋಗಿಸಿಕೊಂಡು ಬಿಜಾಪುರದ ಸುಲ್ತಾನ ಮತ್ತು ಇತರ ಪಾಳೆಯಗಾರರು ಕೆಳದಿಯನ್ನು ಕಬಳಿಸಲು ಹೊಂಚು ಹಾಕಿದ್ದರು. ವೈರಿಗಳ ಸಂಚಿನಿಂದಾಗಿ ಚೆನ್ನಮ್ಮ ಒಮ್ಮೆ ರಾಜಧಾನಿಯಿಂದ ತಲೆತಪ್ಪಿಸಿಕೊಳ್ಳಬೇಕಾಯಿತು. ಅವಳು ತನ್ನ ನೆಚ್ಚಿನ ಸಚಿವನಾದ ಗುರು ಬಸಪ್ಪದೇವ ಮತ್ತು ದಂಡನಾಯಕರಾದ ಕೃಷ್ಣಪ್ಪಯ್ಯ ಹಾಗೂ ತಿಮ್ಮರಸಯ್ಯ ಇವರ ಸಹಾಯದಿಂದ ವೈರಿಗಳನ್ನು ಸದೆಬಡಿದು ಸಂಸ್ಥಾನವನ್ನು ವಿಪತ್ತಿನಿಂದ ರಕ್ಷಿಸಿದಳು.
ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಿಧನದ ನಂತರ ಮರಾಠಾ ರಾಜ್ಯವನ್ನು ಕೈವಶ ಮಾಡಿಕೊಳ್ಳುವ ಉದ್ದೇಶದಿಂದ ಔರಂಗಜೇಬನು ಶಿವಾಜಿ ಪುತ್ರ ಸಂಭಾಜಿಯನ್ನು ಕೊಲ್ಲಿಸಿದ. ಶಿವಾಜಿಯ ಎರಡನೆಯ ಮಗ ರಾಜಾರಾಮನು ಔರಂಗಜೇಬನ ಬೃಹತ್ ಸೈನ್ಯವನ್ನು ಎದುರಿಸಲು ಆಗಿಲ್ಲ. ಕೊನೆಗೆ ಆಶ್ರಯಕ್ಕಾಗಿ ಚೆನ್ನಮ್ಮನ ಬಳಿ ಬಂದನು. ಮೊಘಲರ ಬೃಹತ್ ಸೈನ್ಯದ ಎದುರು ತಾನು ಸೆಣೆಸುವುದು ಕಷ್ಟ ಎಂಬ ಪ್ರಾಕ್ಟಿಕಲ್ ಆಲೋಚನೆ ಚೆನ್ನಮ್ಮನಿಗಿತ್ತು. ಹಾಗೂ ಅವರೇನು ತನ್ನ ರಾಜ್ಯದ ಮೇಲೆ ದಂಡೆತ್ತಿ ಬಂದಿರಲಿಲ್ಲ. ಆದರೆ ಆಶ್ರಿತರ ರಕ್ಷಣೆಯ ಕರ್ತವ್ಯದಿಂದ ರಾಣಿ ವಿಮುಖಳಾಗಲಿಲ್ಲ. ಅವಳು ರಾಜಾರಾಮನನ್ನು ಗೌರವಾದರಗಳಿಂದಲೂ ರಾಜೋಚಿತ ಮರ್ಯಾದೆಯಿಂದಲೂ ಬರಮಾಡಿಕೊಂಡು ಅವನಿಗೆ ಅಭಯಹಸ್ತ ನೀಡಿದಳು. ಇದರಿಂದ ಕುಪಿತನಾದ ಔರಂಗ್ಜೇಬ, ಕೆಳದಿಯ ವಿರುದ್ಧ ಪಡೆಯೊಂದನ್ನು ಕಳುಹಿಸಿದ. ಚೆನ್ನಮ್ಮನು ರಾಜಾರಾಮನನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಟ್ಟಳು. ಔರಂಗಜೇಬನ ಎರಡನೆಯ ಮಗ ಆಝಮ್ ಶಹಾನ ನೇತೃತ್ವದ ವಿಶಾಲ ಸೈನ್ಯ ಕೆಳದಿಯನ್ನು ಕೈವಶ ಮಾಡಿಕೊಳ್ಳಲು ಬಂದಿತು. 1690ರಲ್ಲಿ ಕೆಳದಿ ಮತ್ತು ಮೊಘಲ್ ಸೈನ್ಯಗಳ ನಡುವೆ ಯುದ್ಧ ನಡೆಯಿತು. ಕದನದಲ್ಲಿ ಮೊಘಲ್ ಸೇನೆ ಪರಾಭವಗೊಂಡು ಪಲಾಯನ ಮಾಡಿತು.
ಈಗ ಕಟೌಟ್ ಹಾಕಿರುವ ಕಿಡಿಗೇಡಿಗಳಿಗೆ ಈ ಇತಿಹಾಸದ ಅರಿವು ಇದೆಯೇ ? ಅಸಲು ಈ ಎಲ್ಲರನ್ನೂ ಕಿಡಿಗೇಡಿಗಳು ಎಂದು ಹೇಳಲು ಆಗುತ್ತದೆಯೇ? ಈ ಕಿಡಿಗೇಡಿಗಳು ಅರಿವುಗೇಡಿಗಳೇ ಆದರೂ, ಇವರ ಹಿಂದೆ ನಿಂತಿರುವ ಮತೀಯ ಹಾಗೂ ರಾಜಕೀಯ ಮುಖಂಡರೇನು ಇತಿಹಾಸದ ಅರಿವು ಗೇಡಿಗಳೇ ? ಇವರಿಗೆ ಎಲ್ಲವೂ ಚೆನ್ನಾಗಿಯೇ ಗೊತ್ತಿದೆ. ಈ ಪಟ್ಟಿಯಲ್ಲಿ ಕೆಲವು ಮುಸ್ಲಿಂ ಉದ್ಯಮಿಗಳೂ ಇದ್ದಾರೆ. ಕಿಡಿಗೇಡಿಗಳ ಕೃತ್ಯಕ್ಕೆ ಈ ಮಂದಿಯ ಬೆಂಬಲ ಇದ್ದೇ ಇದೆ. ಹಾಗಾಗಿ, ಇಂತಹ ಕೃತ್ಯಗಳನ್ನು ಕೇವಲ ʼಕೆಲ ಕಿಡಿಗೇಡಿಗಳʼ ಮೇಲೆ ಹೊತ್ತುಹಾಕಿ ಇಡೀ ಮುಸ್ಲಿಂ ಸಮಾಜ ಸುಮ್ಮನಿರಬಾರದು. ಇಲ್ಲಿ ಇನ್ನೊಂದು ಪ್ರಶ್ನೆಯನ್ನು ನಾವು ಹಾಕಿಕೊಂಡರೆ ಮೇಲಿನ ಮಾತಿಗೆ ಪುಷ್ಟಿ ಸಿಗುತ್ತದೆ. ಇದೇ ಮುಸ್ಲಿಂ ಸಮುದಾಯ, ಔರಂಗಜೇಬನಂಥವನನ್ನು ಬಿಟ್ಟು ಕಲಾಂ ಅಂಥವರನ್ನೇಕೆ ಮೆರೆಸುವುದಿಲ್ಲ? ತಬಲಾ ವಾದಕ ಜಾಕಿರ್ ಹುಸೇನ್ ಏಕೆ ಇವರಿಗೆ ಮಾದರಿ ಆಗುವುದಿಲ್ಲ? ಶಹನಾಯಿ ಮಾಂತ್ರಿಕ ಉಸ್ತಾದ್ ಮಿಸ್ಮಿಲ್ಲಾ ಖಾನ್ ಏಕೆ ಆದರ್ಶವಾಗುವುದಿಲ್ಲ? ಇಡೀ ಸಮುದಾಯ, ಅದರ ಮುಖಂಡರು ಈ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲೇ ಬೇಕು. ಇದೇ ತಿಂಗಳು 15ನೇ ತಾರೀಖು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜನ್ಮದಿನವಿದೆ. ಅದೇ ದಿನದಿಂದ, ದುಷ್ಟಶಕ್ತಿಯ ಸಂಹಾರದ ಪ್ರತೀಕ, ಸಮೃದ್ಧಿಯ ಪ್ರತೀಕವಾದ ಶರನ್ನವರಾತ್ರಿಯೂ ಆರಂಭವಾಗುತ್ತಿದೆ.
ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಇದರಲ್ಲಿ ಸ್ಪಷ್ಟತೆಯನ್ನು ತಳೆಯಲೇಬೇಕು. ಮುಸ್ಲಿಂ ಸಮಾಜವನ್ನು ನಿಜವಾಗಲೂ ಉದ್ಧಾರ ಮಾಡಲೇಬೇಕು ಎಂಬ ಪ್ರಾಮಾಣಿಕ ಕಳಕಳಿ ಇದ್ದರೆ ಇಂತಹ ಕೃತ್ಯಗಳನ್ನು ಖಂಡಿಸಬೇಕು, ಅದನ್ನು ಸದೆಬಡಿಯಬೇಕು. ಅದನ್ನು ಬಿಟ್ಟು, ಇದು ಸಣ್ಣ ಘಟನೆ, ಎಲ್ಲಾ ಸಮಯದಲ್ಲೂ ಆಗುತ್ತದೆ ಎನ್ನುವುದು ಉಡಾಫೆ ಹೇಳಿಕೆ. ನಿಮಗೆ ದಾಳಿಕೋರ ಔರಂಗಜೇಬನಂಥವರು ಬೇಕೆ ಅಥವಾ ಕೆಳದಿಯ ಚೆನ್ನಮ್ಮನಂಥವರು ಬೇಕೆ? ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅವಶ್ಯಕತೆ ಇದೆ.
ಕಡೆಯದಾಗಿ, ಈಗ ಭಾರತದಲ್ಲಿರುವ ಎಲ್ಲ ಮುಸ್ಲಿಮರದ್ದೂ, ಭಾರತೀಯರದ್ದೇ ಡಿಎನ್ಎ ಎಂಬುದು ಸತ್ಯವಾದ ಮಾತೇ. ಇದನ್ನು ವೈಜ್ಞಾನಿಕವಾಗಿಯೂ ಸಾಬೀತು ಮಾಡಬಹುದು. ಇದನ್ನೇ ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರೂ ಹೇಳಿದ್ದಾರೆ. ಈ ಮಾತಿನಲ್ಲಿ ಯಾವುದೇ ಸಂಶಯ ಇಲ್ಲ. ಹಿಂದೂಗಳು ಕೂಡ ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಜೀವನ ಮಾಡುತ್ತಿಲ್ಲ. ಆದರೆ, ಕೆಲವು ಕಿಡಿಗೇಡಿಗಳ ಕೃತ್ಯ ಹಾಗೂ ಆ ಕೃತ್ಯದ ಹಿಂದಿರುವ ಮತಿಗೇಡಿಗಳ ಮತಾಂಧತೆ ಇಡೀ ಮುಸ್ಲಿಂ ಸಮುದಾಯವನ್ನು ಕಟಕಟೆಗೆ ನಿಲ್ಲಿಸುತ್ತಿದೆ. ಮುಸ್ಲಿಂ ಸಮುದಾಯದ ಪ್ರಜ್ಞಾವಂತರು ಇದನ್ನು ಯೋಚಿಸಬೇಕಿದೆ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top