ಕಾಂಗ್ರೆಸ್ಸಿನ ಅಪೂರ್ಣ ಕಾರ್ಯವನ್ನು ಪೂರ್ಣಗೊಳಿಸುವುದೇ ಸಮಾನ ನಾಗರಿಕ ಸಂಹಿತೆ ಜಾರಿಯ ಗುರಿ! : ವಿಸ್ತಾರ ಅಂಕಣ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲಿನಿಂದ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಸಂವಾದ ನಡೆಸಿದರು. ಈ ಸಂವಾದದಲ್ಲಿ ನರೇಂದ್ರ ಮೋದಿಯವರು ಪ್ರಸ್ತಾಪಿಸಿದ ಒಂದು ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದೆಂದರೆ ಸಮಾನ ನಾಗರಿಕ ಸಂಹಿತೆ (Uniform Civil Code – UCC) ಜಾರಿ ಮಾಡಬೇಕಾದ ಅವಶ್ಯಕತೆ.

ದೇಶ ಮೊದಲು ಎಂದು ಬಂದಾಗ ಹಿಂದುವಾದರೇನು? ಮುಸ್ಲಿಮನಾದರೇನು? ಕ್ರೈಸ್ತನಾದರೇನು? ಏಕರೂಪ ನಾಗರಿಕ ಸಂಹಿತೆಯ ಈ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷ ಕಾಯಬೇಕು? ಇದೇ ಸರಿಯಾದ ಸಮಯ.

*********************************************

ಸ್ವತಂತ್ರ ಭಾರತದಲ್ಲಿ ಬಗೆಹರಿಯದ ಅನೇಕ ವಿಚಾರಗಳಿದ್ದವು. ಅವುಗಳಲ್ಲಿ ಯುಸಿಸಿ ಸಹ ಒಂದು. ಸ್ವಾತಂತ್ರ್ಯ ಲಭಿಸಿದ ಕೂಡಲೆ ಅಂದಿನ ನಾಯಕರು ಭಾರತವನ್ನು ಮುಂದಕ್ಕೆ ಕೊಂಡೊಯ್ಯಲು ಅನೇಕ ಕ್ರಮಗಳನ್ನು ಕೈಗೊಂಡರು. ದೇಶದಲ್ಲಿ ಕೈಗಾರಿಕಾ ಕ್ರಾಂತಿ ಆಗಬೇಕು ಎಂದು ಉತ್ತೇಜನ ನೀಡಲಾಯಿತು. ಜಲಾಶಯಗಳೇ ಆಧುನಿಕ ದೇವಾಲಯಗಳು ಎಂದಿದ್ದ ಪ್ರಧಾನಿ ಜವಾಹರಲಾಲ್ ನೆಹರೂ, ಎಲ್ಲೆಡೆ ಜಲಾಶಯ ನಿರ್ಮಾಣಕ್ಕೆ ಒತ್ತು ನೀಡಿದರು. ಭಾರತದಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದ ಬ್ರಿಟಿಷರು, ಭಾರತದಿಂದ ತೆರಳುವಾಗ ಭಾರತದಲ್ಲಿ ಕೇವಲ ಶೇ.12 ಶಿಕ್ಷಿತರಿದ್ದರು. ಶಿಕ್ಷಣ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಗಳು ನಿರಂತರ ಪ್ರಯತ್ನ ನಡೆಸಿದವು. ಇದೆಲ್ಲದರ ನಡುವೆ ಕೆಲವು ಅಪೂರ್ಣ ಕಾರ್ಯಗಳನ್ನೂ ಉಳಿಸಿ ಹೋಗಿದ್ದಾರೆ.

ಇದರಲ್ಲಿ ಕೆಲವು ಉದಾಹರಣೆಗಳೆಂದರೆ ಗೋಹತ್ಯೆ ನಿಷೇಧವನ್ನು ಸ್ಪಷ್ಟ ಕಾನೂನಾಗಿ ರೂಪಿಸದೆ ಅದನ್ನು ರಾಜ್ಯನೀತಿಯ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಗಿದೆ. ಇದಾದರೂ ಪರವಾಗಿಲ್ಲ, ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ಎಂಬ ವಿಚಿತ್ರ ಹಾಗೂ ವಿಚ್ಛಿದ್ರಕಾರಿ ಕಾನೂನನ್ನು ದಶಕಗಳ ಕಾಲ ಉಳಿಸಿಕೊಂಡು ಬಂದರು. ಅದರ ಜತೆಗೆ, ಇಂಥದ್ದೇ ಇನ್ನೊಂದು ಅಪೂರ್ಣ ಕೆಲಸ- ಸಮಾನ ನಾಗರಿಕ ಸಂಹಿತೆ. ಈಗ ಪ್ರಸ್ತಾಪಿಸಿರುವ ಈ ಮೂರು ʼಅಪೂರ್ಣʼ ಕೆಲಸಗಳನ್ನು ಸುಮ್ಮನೆ ಗಮನಿಸಿದರೆ ಒಂದು ಸಮಾನ ಅಂಶ ಕಾಣುವುದಿಲ್ಲವೇ? ಅದೇನು? ಮೂರೂ ವಿಚಾರಗಳು ಒಂದಲ್ಲ ಒಂದು ರೀತಿಯಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಬೆಸೆದುಕೊಂಡಿವೆ.

ಗೋಹತ್ಯೆ ನಿಷೇಧ ಮಾಡಬೇಕು ಎನ್ನಲು ಹಿಂದೂ ಸಮಾಜದಲ್ಲೂ ಇನ್ನೂ ಏಕಾಭಿಪ್ರಾಯ ಬಂದಿಲ್ಲ ಎನ್ನುವುದು ಸರಿ. ಅನೇಕ ರಾಜ್ಯಗಳಲ್ಲಿ ಹಿಂದು ಮುಸ್ಲಿಮರೆಂಬ ಭೇದವಿಲ್ಲದೆ ಗೋಮಾಂಸ ಸೇವನೆ ನಡೆದು ಬಂದಿದೆ, ಹಿಂದುಗಳಲ್ಲೇ ಕೆಲವು ಸಮುದಾಯಗಳೂ ಸೇವಿಸುತ್ತವೆ. ಆದರೆ ಗೋಹತ್ಯೆ ನಿಷೇಧಕ್ಕೆ ಈ ವಿಚಾರ ಬಹುದೊಡ್ಡ ತೊಡಕಲ್ಲ. ಮುಖ್ಯವಾಗಿ ಮುಸ್ಲಿಂ ಸಮುದಾಯ ಗೋಹತ್ಯೆಯನ್ನು ಬಯಸುತ್ತದೆ ಎನ್ನುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಹಾಗಾಗಿ, ರಾಜ್ಯನೀತಿಯ ನಿರ್ದೇಶಕ ತತ್ವಗಳಲ್ಲಿದ್ದರೂ ಗೋಹತ್ಯೆ ನಿಷೇಧವನ್ನು ಜಾರಿ ಮಾಡಲು ಧೈರ್ಯ ತೋರುತ್ತಿಲ್ಲ.

ಎರಡನೆಯ ವಿಚಾರವಾದ ಸಂವಿಧಾನದ ಪರಿಚ್ಛೇದ 370 ಸಹ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ್ದು. ಜಮ್ಮು ಕಾಶ್ಮೀರದಲ್ಲಿ, ಅದರಲ್ಲೂ ಮುಖ್ಯವಾಗಿ ಕಾಶ್ಮೀರದಲ್ಲಿ ಬಹುಸಂಖ್ಯಾತ ಮುಸ್ಲಿಂ ಸಮುದಾಯವನ್ನು ಮೆಚ್ಚಿಸುವ ಸಲುವಾಗಿ ಈ ಕಾನೂನನ್ನು ಜೀವಂತವಾಗಿರಿಸಿಕೊಂಡು ಬರಲಾಯಿತು. ಈ ಕಾನೂನನ್ನು ತೆಗೆದುಬಿಟ್ಟರೆ ದೇಶದ ಇತರೆ ಭಾಗಗಳಿಂದ ಹಿಂದುಗಳು ಬಂದು ಆಸ್ತಿಪಾಸ್ತಿ, ಉದ್ಯಮ ಮಾಡಿಬಿಡುತ್ತಾರೆ, ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾಗಿ ಭೂಮಿ ಹಕ್ಕು ಪಡೆಯುತ್ತಾರೆ, ಇದರಿಂದ ಕಣಿವೆ ರಾಜ್ಯದಲ್ಲಿ ಮುಸ್ಲಿಂ ಪ್ರಾಬಲ್ಯ ಹೋಗಿಬಿಡುತ್ತದೆ ಎಂಬ ಭ್ರಮೆಯಲ್ಲೇ ಸಮುದಾಯವನ್ನು ಇರಿಸಲಾಯಿತು. ಇದರಿಂದಾಗಿ ಕಣಿವೆಯಲ್ಲಿ ಭಯೋತ್ಪಾದನೆ ಬೇರು ಬಿಡಲೂ ಸಹಾಯವಾಯಿತು.

ಇನ್ನು, ಸಮಾನ ನಾಗರಿಕ ಸಂಹಿತೆ ಜಾರಿಯನ್ನೂ ರಾಜ್ಯನೀತಿಯ ನಿರ್ದೇಶಕ ತತ್ವಗಳಲ್ಲಿ ಸೇರಿಸಲಾಗಿದೆ. ಆದರೂ ಸಮಾನ ನಾಗರಿಕ ಸಂಹಿತೆ ಎಂದ ಕೂಡಲೆ ರಾಜಕೀಯ ಸಂಚಲನ ಉಂಟಾಗುತ್ತದೆ. ಕಾರಣ ಏನು? ಇದರಿಂದ ಮುಸ್ಲಿಮರ ಮೂಲಭೂತ ಹಕ್ಕುಗಳು ದಮನ ಆಗುತ್ತದೆ. ಇದರಿಂದ ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ….. ಇತ್ಯಾದಿ ಅಸಂಬದ್ಧ ಕಾರಣಗಳನ್ನು ನೀಡಲಾಗುತ್ತದೆ. ಇದಕ್ಕಾಗಿಯೇ ಸಮಾನ ನಾಗರಿಕ ಸಂಹಿತೆ ಜಾರಿಯನ್ನೂ ಮುಂದೂಡುತ್ತಲೇ ಬರಲಾಗುತ್ತಿದೆ. ಹಾಗಾದರೆ ಭಾರತೀಯ ಸಂವಿಧಾನದ ಅನುಚ್ಛೇದ 44ರಲ್ಲಿ ಏನು ಹೇಳಲಾಗಿದೆ? “The State Shall Endeavour to secure for the citizens a unifor civil code throught the territory of India” (ಭಾರತದ ರಾಜ್ಯಕ್ಷೇತ್ರದಾದ್ಯಂತ ನಾಗರಿಕರಿಗೆ ಏಕರೂಪದ ಸಿವಿಲ್ ಸಂಹಿತೆಯು ಇರುವ ಹಾಗೆ ರಾಜ್ಯವು (ಆಡಳಿತವು) ಪ್ರಯತ್ನಿಸತಕ್ಕದ್ದು”. ಇದರಲ್ಲಿ ಯಾವ ಮುಸ್ಲಿಂ, ಹಿಂದು, ಸಿಖ್, ಜೈನ, ಪಾರ್ಸಿ ಭೇದವಿದೆ? ಎಲ್ಲೂ ಇಲ್ಲ. ಒಂದು ದೇಶವನ್ನು ಎರಡು ಕಾನೂನುಗಳಿಂದ ನಡೆಸುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ದೇಶದ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ ಸಮಾನ ನಾಗರಿಕ ಸಂಹಿತೆಯ ಅವಶ್ಯಕತೆ ಇನ್ನೂ ಹೆಚ್ಚಾಗಿದೆ.

ದೇಶದಲ್ಲಿ ಪ್ರಮುಖವಾಗಿ ನಾಲ್ಕು ರೀತಿಯ ಕಾನೂನುಗಳಿವೆ. ಕ್ರಿಮಿನಲ್ ಕಾನೂನು, ನಾಗರಿಕ ಕಾನೂನು, ಸಾಮಾನ್ಯ ಕಾನೂನು ಹಾಗೂ ಶಾಸನಾತ್ಮಕ ಕಾನೂನು. ಈಗ ಮುಖ್ಯವಾಗಿ ಕ್ರಿಮಿನಲ್ ಕಾನೂನು, ಹಾಗೂ ನಾಗರಿಕ ಕಾನೂನಿನ ಕುರಿತು ಗಮನಹರಿಸೋಣ. ಹಿಂದು ವೈಯಕ್ತಿಕ ಕಾನೂನನ್ನು ಪ್ರಧಾನಿ ಜವಾಹರಲಾಲ್ ನೆಹರೂ ಅವರು ಒಂದಿಷ್ಟು ತಿದ್ದುಪಡಿ ಮೂಲಕ ಸುಧಾರಣೆ ಮಾಡಿದರು.

ಆದರೆ ಅದೇ ಮುಸ್ಲಿಂ, ಕ್ರೈಸ್ತ ಮುಂತಾದ ಸಮುದಾಯಗಳ ವೈಯಕ್ತಕ ನೀತಿ ನಿಯಮಗಳಿಗೆ ಕೈ ಹಾಕಲಿಲ್ಲ. ಅದೊಂದು ಅವಕಾಶವನ್ನು ಕೈಚೆಲ್ಲಿದರು. ಆದರೆ ಅವರು ಇದೇ ತಪ್ಪನ್ನು ಕ್ರಿಮಿನಲ್ ಕಾನೂನಿನ ಜಾರಿ ಸಂದರ್ಭದಲ್ಲಿ ಮಾಡಲಿಲ್ಲ. ಉದಾಹರಣೆಗೆ, ಮುಸ್ಲಿಂ ವೈಯಕ್ತಿಕ ಕಾನೂನಾದ ಶರಿಯಾದಲ್ಲಿ, ಕಳ್ಳತನ ಮಾಡಿದವನ ಬೆರಳು ಕತ್ತರಿಸಬೇಕು ಎಂದಿತ್ತು, ವ್ಯಭಿಚಾರ ಮಾಡಿದವನನ್ನು ಕಲ್ಲಿನಿಂದ ಹೊಡೆದು ಸಾಯಿಸಬೇಕು ಎಂದಿತ್ತು. ಆದರೆ ದೇಶದಲ್ಲಿ ಅಂತಹದ್ದಕ್ಕೆ ಅವಕಾಶ ನೀಡಲಿಲ್ಲ. ಸಮಾನ ಕ್ರಿಮಿನಲ್ ಕಾನೂನು ಜಾರಿ ಮಾಡಲಾಯಿತು. ಈಗ ಭಾರತದಲ್ಲಿ ಯಾವುದೇ ಕಳ್ಳತನ, ವ್ಯಭಿಚಾರ, ಕೊಲೆಯಂತಹ ಪ್ರಕರಣಗಳ ಎಫ್ಐಆರ್ ದಾಖಲಿಸುವಾಗ, ವಿಚಾರಣೆ ನಡೆಸುವಾಗ ಅಥವಾ ತೀರ್ಪು ನೀಡುವಾಗ ಆತ ಹಿಂದು, ಮುಸ್ಲಿಂ, ಕ್ರೈಸ್ತ… ಇತ್ಯಾದಿ ಎಂಬ ಭೇದವಿಲ್ಲ. ಇದು ಕ್ರಿಮಿನಲ್ ಕಾನೂನಿನಲ್ಲಿ ಸಮಾನತೆಯನ್ನು ತರಲಾಗಿರುವುದರ ಫಲ. ಈಗ ನಾಗರಿಕ ಕಾನೂನುಗಳಲ್ಲೂ ಇದೇ ಸಮಾನತೆಯನ್ನು ಕೇಳಲಾಗುತ್ತಿದೆ. ಅದೇ ಸಮಾನ ನಾಗರಿಕ ಸಂಹಿತೆ.

ಈಗ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತಂದರೆ ಮುಸ್ಲಿಮರಿಗೆ ನೋವಾಗುತ್ತದೆ, ಅವರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳುವವರ ಮಾತಿನ ಅರ್ಥವೇನು? ಅಲ್ಲಿರುವ ಬಹುಪತ್ನಿತ್ವಕ್ಕೆ ಅವಕಾಶ ನೀಡಬೇಕು ಎಂದೆ? ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಹರಣ ಮಾಡಬೇಕು ಎಂದೆ? ವಿವಾಹವಾಗುವ ಸಮಯದಲ್ಲಿ, ವಿಚ್ಛೇದನ ಸಮಯದಲ್ಲಿ, ಆಸ್ತಿ ಹಂಚಿಕೆಯ ವಿಚಾರದಲ್ಲಿ ಸಮಾನತೆ ಬೇಡ ಎಂದು ಇವರ ವಾದವೇ? ಹಾಗೊಂದುವೇಳೆ ಕೆಲವು ಕಾನೂನುಗಳನ್ನು ಬದಲಾವಣೆ ಮಾಡಿದಾಗ ನೋವಾಗಬಹುದು. ಉದಾಹರಣೆಗೆ ಹೆಣ್ಣು ಭ್ರೂಣ ಹತ್ಯೆ ಎನ್ನುವುದು ಹಿಂದೂ ಸಮಾಜದಲ್ಲಿ ಬೆಳೆದುಕೊಂಡು ಬಂದಿತ್ತು, ಅದನ್ನು ನಿಷೇಧಿಸಲಿಲ್ಲವೇ? ಬಾಲ್ಯವಿವಾಹವಂತೂ ಶತಮಾನಗಳಿಂದ ಚಾಲ್ತಿಯಲ್ಲಿತ್ತು. ವಿಧವಾ ವಿವಾಹಕ್ಕೆ ಅವಕಾಶವೇ ಇರಲಿಲ್ಲ. ಸತಿ ಪದ್ಧತಿ ಜಾರಿಯಲ್ಲಿತ್ತು. ಅಸ್ಪೃಶ್ಯತೆಯನ್ನು ಸಮಾಜದ ಸಹಜ ನಡವಳಿಕೆ ಎಂದು ಭಾವಿಸಿ ಭ್ರಮಿಸಲಾಗಿತ್ತು. ಇದೆಲ್ಲವನ್ನೂ ಕಾನೂನಿನ ಮೂಲಕ ಹಾಗೂ ಸುಧಾರಣೆಗಳ ಮೂಲಕ ಕಿತ್ತೆಸೆಯುವ ಪ್ರಯತ್ನ ನಡೆಯಿತಲ್ಲವೆ? ಕೆಲವನ್ನು ನಿರ್ಮೂಲನೆ ಮಾಡಲಾಗಿದೆಯಾದರೂ ಇನ್ನು ಕೆಲವು ನಿಧಾನವಾಗಿ ಸಾಯುತ್ತಿವೆ. ಇಂತಹ ಸುಧಾರಣೆಗಳ ಸಂದರ್ಭದಲ್ಲಿ ಇಡೀ ಹಿಂದೂ ಸಮಾಜ ಒಮ್ಮನಸಿನಿಂದ ಒಪ್ಪಿಕೊಂಡಿತೇ? ಅಲ್ಲಲ್ಲಿ ಕೆಲವರು ವಿರೋಧಿಸಿದವರೂ ಇದ್ದರು. ಕದ್ದುಮುಚ್ಚಿ ಬಾಲ್ಯವಿವಾಹ ಮಾಡುವವರು ಈಗಲೂ ಇದ್ದಾರೆ. ಕೆಲವರಿಗೆ ಬೇಸರವಾಗಿ, ಕೆಲವರಿಗೆ ನೋವಾಗಿದೆ. ಅದಕ್ಕೆ ಏನು ಮಾಡಲಾಗುತ್ತದೆ? ಸಮಾಜಕ್ಕೆ ಯಾವುದು ಇಷ್ಟವೋ ಅದನ್ನು ಮಾಡುವುದಲ್ಲ, ಸಮಾಜಕ್ಕೆ ಯಾವುದು ಒಳ್ಳೆಯದೋ ಅದನ್ನು ಮಾಡುವುದು ನ್ಯಾಯ. ನ್ಯಾಯವು ಕೆಲವೊಮ್ಮೆ ಸಮುದಾಯಕ್ಕೆ ಇಷ್ಟವಾಗಬಹುದು ಅಥವಾ ಕೆಲವೊಮ್ಮೆ ಇಷ್ಟವಾಗದೇ ಇರಲೂ ಬಹುದು.

ಪೋರ್ಚುಗೀಸಲು ಗೋವಾವನ್ನು ಆಳುತ್ತಿದ್ದಾಗ ಅಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ್ದರು. ಅವರ ಕಾನೂನಿನಲ್ಲಿ ಯಾವುದೇ ಧರ್ಮಾಧಾರಿತ ಭೇದಭಾವಗಳಿಗೆ ಅವಕಾಶವಿರಲಿಲ್ಲ. ಅವರು ಭಾರತದಿಂದ ತೊಲಗಿದ ನಂತರವೂ, ಸ್ವತಂತ್ರ ಭಾರತದಲ್ಲೂ ಅದೇ ಸಮಾನ ಕಾನೂನು ಗೋವಾದಲ್ಲಿ ಇಂದಿಗೂ ಜಾರಿಯಲ್ಲಿದೆ. ಅಲ್ಲಿ ಮುಸ್ಲಿಮರಿಲ್ಲವೇ? ಅಲ್ಲಿ ಕ್ರೈಸ್ತರಿಲ್ಲವೇ? ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರದಂತೆ ನಡೆಯುತ್ತಿರುವ ಕಾನೂನು ದೇಶದ ಇತರೆ ಕಡೆಗಳಲ್ಲಿ ಜಾರಿಯಾದರೆ ಹೇಗೆ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ? ಇದು, ಸಮಾನ ನಾಗರಿಕ ಸಂಹಿತೆಯನ್ನು ಪ್ರಮುಖವಾಗಿ ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ ನೀಡಬೇಕಿರುವ ಉತ್ತರ.

ಏಕೆಂದರೆ ಆಗಲೇ ಹೇಳಿದಂತೆ, ಸಮಾನ ನಾಗರಿಕ ಸಂಹಿತೆಯೂ ಕಾಂಗ್ರೆಸ್‌ನ ಅಪೂರ್ಣ ಕಾರ್ಯಗಳಲ್ಲಿ (Unfinished Agenda) ಒಂದು. ಕಾಂಗ್ರೆಸ್ ನಾಯಕರು ಕೈಗೊಂಡ ಅನೇಕ ನಿರ್ಧಾರಗಳಿಂದ ದೇಶ ಹೇಗೆ ಮುನ್ನಡೆಯಿತೋ, ಅಷ್ಟೇ ಪ್ರಮಾಣದಲ್ಲಿ ಇಂತಹ ಅಪೂರ್ಣ ಕಾರ್ಯಗಳಿಂದಾಗಿ ದೇಶಕ್ಕೆ ಹಿನ್ನಡೆಯೂ ಆಗಿದೆ. ನಮ್ಮ ಜನಸಂಖ್ಯೆಯ ಸಂಪೂರ್ಣ ಶಕ್ತಿಯನ್ನು ದೇಶದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಇಂತಹ ಅನೇಕ ನಿರ್ಧಾರಗಳು ಬಾಧಕವಾಗಿವೆ. ದೇಶ ಮೊದಲು ಎನ್ನುವುದನ್ನು ನಾವು ಗಣನೆಗೆ ತೆಗೆದುಕೊಂಡರೆ ಸಮಾನ ನಾಗರಿಕ ಸಂಹಿತೆ ಜಾರಿ ಅತ್ಯಾವಶ್ಯಕವಾಗಿದೆ. ಕೇವಲ ಮುಸ್ಲಿಂ ಮಾತ್ರವೇ ಅಲ್ಲ, ಹಿಂದೂ ಸಮುದಾಯಕ್ಕೆ ಇರುವ ಅನೇಕ ಕಾನೂನು ಅನುಕೂಲಗಳಿಗೂ ಸಮಾನ ನಾಗರಿಕ ಸಂಹಿತೆಯಿಂದ ತೊಡಕುಂಟಾಗಬಹುದು. ದೇಶ ಮೊದಲು ಎಂದು ಬಂದಾಗ ಹಿಂದುವಾದರೇನು? ಮುಸ್ಲಿಮನಾದರೇನು? ಕ್ರೈಸ್ತನಾದರೇನು? ಈ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಇನ್ನೆಷ್ಟು ವರ್ಷ ಕಾಯಬೇಕು? ಇದೇ ಸರಿಯಾದ ಸಮಯ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top