ಅಂಬೇಡ್ಕರ್ ಹೇಳಿದ ಉಳಿದರ್ಧ ವಿವೇಕ ಅರಿಯೋಣ!

ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿರುವವರು ಆ ಸಮುದಾಯವನ್ನು ಎತ್ತ ಕಡೆಗೆ ಒಯ್ಯುತ್ತಾರೆ ಎನ್ನುವುದನ್ನು ಸಮರ್ಥವಾಗಿ ಅರಿತಿದ್ದ ಅಂಬೇಡ್ಕರರು ‘ಜನಸಮುದಾಯಗಳ ವಿನಿಮಯ’ವೆಂಬ ಪರಿಹಾರವನ್ನು ಸೂಚಿಸಿದರು. ಹಿಂದುಗಳಿಗೆ ಹಿಂದುಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ಆದ ಮೇಲೆ, ಪೂರ್ಣ ಮುಸ್ಲಿಮರು ಆ ಕಡೆಗೆ, ಪೂರ್ಣ ಹಿಂದುಗಳು ಈ ಕಡೆಗೆ ಇರಲಿ ಎಂದಿದ್ದರು.
******************************
ಡಾ ಬಿ. ಆರ್‌. ಅಂಬೇಡ್ಕರ್‌ ಅವರನ್ನು ಸಾಮಾನ್ಯವಾಗಿ, ʼಸಂವಿಧಾನ ಶಿಲ್ಪಿʼ, ʼದಲಿತ ಸೂರ್ಯʼ, ʼಸಾಮಾಜಿಕ ಕ್ರಾಂತಿ ಸೂರ್ಯʼ. . . ಇತ್ಯಾದಿಗಳಿಂದ ಸಂಬೋಧಿಸಲಾಗುತ್ತದೆ. ಇದೆಲ್ಲವೂ ಸರಿಯೆ. ಬಾಬಾಸಾಹೇಬ್‌ ಅಂಬೇಡ್ಕರರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಪ್ರತಿಯೊಂದ ಅನುಚ್ಛೇದವನ್ನು ಸೇರಿಸುವಲ್ಲೂ ಅಪಾರ ಪರಿಶ್ರಮ ಹಾಕಿದರು. ದೇಶದ ಮುನ್ನಡೆಗೆ ತೊಡಕಾಗಬಹುದಾದ ಅನೇಕ ವಿಚಾರಗಳನ್ನು ಸಂವಿಧಾನದಲ್ಲಿ ಸೇರಿಸದಿರುವಂತೆ ಬಹಳ ಪ್ರಜ್ಞಾಪೂರ್ವಕವಾಗಿ ನೋಡಿಕೊಂಡರು. ಅದಕ್ಕಾಗಿಯೇ, ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಭಾರತ ಹೊಂದುವಂತಾಯಿತು. ಈ ನಿಟ್ಟಿನಲ್ಲಿ ಅಂಬೇಡ್ಕರರು ಸಂವಿಧಾನ ಶಿಲ್ಪಿ.
ಕಾಯಕದ ಆಧಾರದಲ್ಲಿದ್ದ ವರ್ಣ ವ್ಯವಸ್ಥೆಯು ನೂರಾರು ವರ್ಷ ಈ ಸಮಾಜವನ್ನು ಮುನ್ನಡೆಸಿಕೊಂಡೇ ಬಂದಿತು. ಚಾತುರ್ವಣ್ಯ ಎನ್ನುವುದು ತಾನೇ ಸೃಷ್ಟಿ ಮಾಡಿದ್ದು ಎಂದು ಸ್ವತಃ ಭಗವಾನ್‌ ಶ್ರೀಕೃಷ್ಣ ಹೇಳುತ್ತಾನೆ. ಆದರೆ ಅದು ʼಗುಣ ಹಾಗೂ ಕರ್ಮʼದ ಆಧಾರದಲ್ಲಿತ್ತು. ಯಾವುದೇ ವ್ಯಕ್ತಿ ತನ್ನ ಈ ಜನ್ಮದ ಗುಣ ಹಾಗೂ ಕರ್ಮದ (ಅಂದರೆ ಕಾಯಕದ) ಆಧಾರದಲ್ಲಿ ವರ್ಣವನ್ನು ಹೊಂದುತ್ತಿದ್ದರು. ಜನ್ಮದಿಂದ ಬೇಡನಾಗಿದ್ದ ವಾಲ್ಮೀಕಿ, ಕರ್ಮದಿಂದ ಋಷಿಯಾದರು. ಇಂತಹ ಅನೇಕ ಉದಾಹರಣೆಗಳಿವೆ. ಆದರೆ ಯಾವುದೇ ಸ್ಥಾಪಿತ ಹಿತಾಸಕ್ತಿ ತನ್ನ ಸ್ಥಾನವನ್ನು ಬಿಟ್ಟುಕೊಡಲು ಹೇಗೆ ಬಯಸುವುದಿಲ್ಲವೋ ಹಾಗೆಯೇ ಕೆಲವು ವರ್ಣಗಳು ಒಟ್ಟಾಗಿ ಸೇರಿಕೊಂಡು ತಮ್ಮ ಸ್ಥಾನಗಳನ್ನು ಮುಂದಿನ ಪೀಳಿಗೆಗೂ ಹಾಗೆಯೇ ಉಳಿಸಿಕೊಳ್ಳಲು ಬಯಸಿದವು. ಇದರ ಕಾರಣದಿಂದಾಗಿಯೇ ಜನ್ಮದ ಆಧಾರದಲ್ಲಿ ವರ್ಣವನ್ನು ನಿರ್ಧರಿಸುವ ʼಅವ್ಯವಸ್ಥೆʼ ಆರಂಭವಾಯಿತು. ಅದಿಷ್ಟೇ ಆಗಿದ್ದರೂ ಅಷ್ಟೇನೂ ದೊಡ್ಡ ತೊಂದರೆ ಆಗುತ್ತಿರಲಿಲ್ಲವೇನೊ. ಆದರೆ ಒಂದು ವರ್ಣವನ್ನು ಸಮಾಜದ ಮುಖ್ಯ ವಾಹಿನಿಯಿಂದ ದೂರ ಇಟ್ಟು ಅವರಲ್ಲಿ ಕೀಳರಿಮೆ ಮೂಡಿಸಲು ಆರಂಭಿಸಿದವು. ಜಾತಿ ವ್ಯವಸ್ಥೆ ಎನ್ನುವುದರಲ್ಲಿ ತನ್ನ ಗುಣ ಹಾಗೂ ಕರ್ಮಕ್ಕೆ ಅನುಗುಣವಾಗಿ ಮೇಲೇರುವ ಅಥವಾ ಕೆಳಗಿಳಿಯುವ ಸಲುವಾಗಿ ಇದ್ದ ʼಏಣಿʼಯನ್ನು ಕಿತ್ತುಹಾಕಿದ್ದರಿಂದ ಉಂಟಾದದ್ದು ಅಸ್ಪೃಶ್ಯತೆ ಎಂಬ ಪಿಡುಗು. ಈ ಪಿಡುಗನ್ನು ಕಿತ್ತೆಸೆಯಲು ಡಾ. ಬಿ. ಆರ್‌. ಅಂಬೇಡ್ಕರರೂ ಮುಂದಾದರು. ಅಸ್ಪೃಶ್ಯತೆ ವಿರುದ್ಧ ಅನೇಕರು ಅದಾಗಲೇ ಸಮರ ಸಾರಿದ್ದರಾದರೂ ಅಂಬೇಡ್ಕರರಷ್ಟು ಪ್ರಖರವಾಗಿ ಇಡೀ ಸಮುದಾಯವನ್ನು ಮೇಲೆತ್ತಲು ವಿವಿಧ ಕಾರಣಗಳಿಂದ ಆಗಿರಲಿಲ್ಲ. ದಲಿತರಲ್ಲಿದ್ದ ಕೀಳರಿಮೆಯನ್ನು ಕಿತ್ತೊಗೆಯಲು ಪ್ರೇರೇಪಿಸಿ ಹೊಸ ಉದಯವನ್ನು ತೋರಿಸಿಕೊಟ್ಟ ಅಂಬೇಡ್ಕರರನ್ನು ʼದಲಿತ ಸೂರ್ಯʼ ಎನ್ನಲಾಗುತ್ತದೆ. ಅದೂ ಸರಿಯೆ.
ದಲಿತರಿಗೆ ಅನುಕೂಲ ಮಾಡಿದರೆ ಸಾಕೆ? ಸಮಾಜದ ಒಟ್ಟಾರೆ ಬೆಳವಣಿಗೆ ಆದರೆ ಮಾತ್ರವೇ ದಲಿತರೂ ಏಳಿಗೆಯಾಗುತ್ತಾರೆ. ಹಾಗಾಗಿ ಸಮಾಜದಲ್ಲಿ ಒಂದು ಸಮುದಾಯ ಇನ್ನೊಂದನ್ನು ತುಳಿಯುವುದು, ಹಿಂಸಿಸುವುದು ಯಾವ ಕಡೆಯಿಂದಲೂ ಆಗಕೂಡದು ಎಂಬ ಕಾರಣಕ್ಕೆ ಸಾಮರಸ್ಯದ ಮಾರ್ಗವನ್ನು ತೋರಿದವರೂ ಅಂಬೇಡ್ಕರರೇ. ಅಸ್ಪೃಶ್ಯತೆ ಆಚರಿಸುತ್ತಿದ್ದ ಹಿಂದು ಸಮಾಜಕ್ಕೆ ಒಂದು ಎಲೆಕ್ಟ್ರಿಕ್‌ ಶಾಕ್‌ ಕೊಡಬೇಕಿತ್ತೇ ವಿನಃ, ಹಿಂದು ಸಮಾಜವನ್ನು ನಾಶಮಾಡಬೇಕು ಎಂಬ ಉದ್ದೇಶ ಅವರಿಗೆ ಇರಲಿಲ್ಲ. ಹಾಗಾಗಿಯೇ, ಹಿಂದು ಸಮಾಜಕ್ಕೆ ಅತ್ಯಂತ ಕಡಿಮೆ ಹಾನಿ ಮಾಡಬಹುದಾದ ಬೌದ್ಧ ಧರ್ಮವನ್ನು ಸ್ವೀಕರಿಸಿದರು, ತಮ್ಮ ಅನುಯಾಯಿಗಳೂ ಅದನ್ನೇ ಸೇರುವಂತೆ ಪ್ರೇರೇಪಿಸಿದರು. ಹಾಗಾಗಿ ʼಸಾಮಾಜಿಕ ಕ್ರಾಂತಿ ಸೂರ್ಯʼ ಎಂಬ ಬಿರುದೂ ಸರಿಯೆ. ಆದರೆ ಇದಿಷ್ಟೇ ಅಲ್ಲ.
ಭಾರತದ ಒಟ್ಟು ಸಮಾಜದ ಕುರಿತು ಹಾಗೂ ಅನ್ಯ ಮತಗಳ ಕುರಿತೂ ಅಂಬೇಡ್ಕರರು ಸ್ಪಷ್ಟತೆಯನ್ನು ಹೊಂದಿದ್ದರು. ಹಿಂದುಗಳಿಗೆ ಹಿಂದುಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂಬ ಘೋಷಣೆ ಮಾಡಿದ ಮೊಹಮ್ಮದ್‌ ಇಕ್ಬಾಲ್‌ ಮಾತಿಗೆ, ಗಾಂಧಿಯವರ ಅಪ್ಪಟ ಶಿಷ್ಯನಾಗಿದ್ದ ಮೊಹಮ್ಮದ್‌ ಅಲಿ ಜಿನ್ನಾ ಸಹ ಜತೆಯಾದ. ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್, ಈ ವಿಚಾರದ ಹಿಂದಿರುವ ಮಾನಸಿಕತೆಯನ್ನು ವಿರೋಧಿಸಿದರು. ಆದರೆ ಬ್ರಿಟಿಷ್‌ ಆಡಳಿತದ ಭಾರತದಲ್ಲಿದ್ದ ಸಿಂಧ್‌, ಕಾಶ್ಮೀರದ ಹಿಂದುಗಳು ಸಾವರ್ಕರ್‌ ಮಾತಿಗೆ ಬೆಲೆ ಕೊಡಲಿಲ್ಲ. ಈ ಪ್ರತ್ಯೇಕತಾವಾದಿ ಮಾನಸಿಕತೆಯಿಂದ ಭಾರತದ ಅಖಂಡತೆಗೆ ಆಗುವ ಅಪಾಯವನ್ನು ಯಾರೂ ಅರಿಯಲಿಲ್ಲ. ದ್ವಿರಾಷ್ಟ್ರವಾದದ ಕುರಿತು ಸಾವರ್ಕರರ ಮಾತುಗಳನ್ನು ಅನೇಕ ಸಂದರ್ಭಗಳಲ್ಲಿ ಅನೇಕರು ಓದಿರುತ್ತಾರೆ. ಆದರೆ ಈ ಕುರಿತು ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಸ್ಪಷ್ಟ ಆಲೋಚನೆಯನ್ನು ಹೊಂದಿದ್ದರು. ಅಂಬೇಡ್ಕರ್‌ ಎಂದರೆ ಕೇವಲ ʼಸಂವಿಧಾನ ಶಿಲ್ಪಿʼ, ʼದಲಿತ ಸೂರ್ಯʼ, ʼಸಾಮಾಜಿಕ ಕ್ರಾಂತಿ ಸೂರ್ಯʼ ಎಂದು ತಿಳಿದವರಿಗೆ ಇದು ಆಶ್ಚರ್ಯ ಆಗಬಹುದು. ಈ ಕುರಿತು ತಮ್ಮ ಆಲೋಚನೆಗಳನ್ನು ʼಥಾಟ್ಸ್‌ ಆನ್‌ ಪಾಕಿಸ್ತಾನ್‌ʼ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಕೃತಿಯನ್ನು ಕರ್ನಾಟಕದ ಖ್ಯಾತ ಬರಹಗಾರ್ತಿ, ಸಂಶೋಧಕಿ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಡಾ. ಎಸ್‌.ಆರ್‌. ಲೀಲಾ ಅವರು ಭಾವಾನುವಾದ ಮಾಡಿದ್ದಾರೆ, ʼಹಿಂದುಗಳಿಗೆ ಹಿಂದುಸ್ತಾನ, ಮುಸಲ್ಮಾನರಿಗೆ ಪಾಕಿಸ್ತಾನ ಎಂದಿದ್ದು ಏಕೆ?ʼ ಕೃತಿಯಲ್ಲಿ. ಪ್ರತ್ಯೇಕ ರಾಷ್ಟ್ರದ ಹಿನ್ನೆಲೆಯಲ್ಲಿ, ಮುಸ್ಲಿಂ ಮಾನಸಿಕತೆಯನ್ನು ಐತಿಹಾಸಿಕ ದೃಷ್ಟಿಯಿಂದ ಅರಿಯುವ ಪ್ರಯತ್ನವನ್ನು ಅಂಬೇಡ್ಕರ್‌ ಮಾಡಿದರು. “ಇಸ್ಲಾಮಿನ ಹೃದಯ ಭಾಗವಾಗಿರುವ ಕುರಾನ್‌ ಹಾಗೂ ಹದೀಶ್‌ಗಳಲ್ಲಿ ನಿಷ್ಠೆ, ತಮ್ಮ ಮತವೇ ವಿಶ್ವದಲ್ಲಿ ಸರ್ವಕಾಲಕ್ಕೂ ಶ್ರೇಷ್ಠ ಎನ್ನುವ ಅಖಂಡ ನಂಬಿಕೆ, ಅದರ ಹಿನ್ನೆಲೆಯಲ್ಲಿ ಭೂಮಂಡಲವನ್ನು ದಾರ್‌-ಉಲ್‌-ಹರಬ್‌ ಹಾಗೂ ದಾರ್‌-ಉಲ್‌-ಇಸ್ಲಾಂ ಎಂದು ವಿಭಾಗ ಮಾಡುವುದರ ಹಿನ್ನೆಲೆ- ಇವುಗಳನ್ನು ಬಹಳ ಸ್ಪಷ್ಟವಾಗಿ ಅರಿತುಕೊಂಡಿದ್ದ ಕೆಲವೇ ಕೆಲವು ನಾಯಕರಲ್ಲಿ ಅಂಬೇಡ್ಕರ್‌ ಅವರೂ ಒಬ್ಬರು. ಆ ಸಮಯದಲ್ಲಿ ಗಾಂಧೀಜಿ, ನೆಹರು, ಡಾ. ರಾಜೇಂದ್ರ ಪ್ರಸಾದ್‌, ಕೃಪಲಾನಿ ಮುಂತಾದವರಿಗೆ ಇಸ್ಲಾಮಿನ ಬಗ್ಗೆ ನೈಜ ತಿಳುವಳಿಕೆ ಖಂಡಿತ ಇರಲಿಲ್ಲ” ಎಂದು ಡಾ.ಎಸ್‌. ಆರ್‌. ಲೀಲಾ ಅವರ ಕೃತಿಯ ಮುನ್ನುಡಿಯಲ್ಲಿ ಖ್ಯಾತ ಲೇಖಕ ಡಾ. ಜಿ.ಬಿ. ಹರೀಶ್‌ ಅವರು ತಿಳಿಸಿರುವುದು ಅಂಬೇಡ್ಕರರಿಗಿದ್ದ ಸ್ಪಷ್ಟತೆಯನ್ನು ಸೂಚಿಸುತ್ತದೆ.
ಪುಸ್ತಕದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ದಾಖಲಿಸಿರುವ ಕೆಲವು ವಿಚಾರಗಳನ್ನು ನೋಡೋಣ:
“ಮೊದಲ ಬಾರಿಗೆ ಮುಸ್ಲಿಂ ಲೀಗ್ ಪಾಕಿಸ್ತಾನದ ವಿಚಾರ ಪ್ರಸ್ತಾಪಿಸಿ ತಮ್ಮತಮ್ಮಲ್ಲಿ ನಿರ್ಣಯ ಕೈಗೊಂಡಾಗ, ಭಾರತೀಯರಲ್ಲಿ ಒಮ್ಮೆಲೆ ಆಘಾತ ವಾದಂತಾಯಿತು. ಅನೇಕರು ನಾನಾ ವಿಧವಾದ ವ್ಯಾಖ್ಯಾನಗಳನ್ನೂ, ಭಾವೋದ್ವೇಗ ಭರಿತವಾದ ಹೇಳಿಕೆಗಳನ್ನೂ ನೀಡಿದರು. ಭಾರತನಿಷ್ಠ ಹಿಂದುಗಳಂತೂ ಆಕ್ರೋಶಕ್ಕೊಳಗಾದರು. ಇನ್ನು ಕೆಲವರು ಮುಸ್ಲಿಂ ಲೀಗಿನ ಈ ನಿರ್ಣಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲವೆಂದು ಹೇಳಿಕೆ ನೀಡಿದರು. ಅವರ ಪ್ರಕಾರ ಇದೊಂದು ಬಾಲಿಶವಾದ ಹೇಳಿಕೆಯಾಗಿತ್ತು. ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡರು. ಉಪಮೆಗಳನ್ನು ಕೊಟ್ಟು, ಅಲಂಕಾರಿಕ ಮಾತುಗಳನ್ನೂ ಹೇಳಿ ಮುಖ್ಯ ವಿಚಾರವನ್ನು ಮರೆಮಾಚಿದರು. ತಲೆನೋವು ನಿವಾರಿಸಲು ತಲೆಯನ್ನೇ ಕಡಿಯುವುದು ತರವೆ? ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ‘ಇಬ್ಬರು ತಾಯಂದಿರು ಮಗುವಿಗಾಗಿ ಜಗಳವಾಡುತ್ತಿದ್ದರೆ ಮಗುವನ್ನು ತುಂಡುಮಾಡಿ ಹಂಚಲಾದೀತೆ?’ ಎಂದರು.
ಆದರೆ ಈ ವಿಷಯದಲ್ಲಿ ನನ್ನ ಅಭಿಪ್ರಾಯ ಅಪೂರ್ವವೆಂದು ಎನಿಸದಿದ್ದರೂ ತುಂಬ ಸ್ಪಷ್ಟವಾಗಿದೆ. ಪಾಕಿಸ್ತಾನದ ವಿಚಾರ ಕೇವಲ ರಾಜಕೀಯ ದುರ್ದಶೆಯ ಕಾರಣಕ್ಕೆ ಮಾತ್ರ ಉದ್ಭವವಾಗಿದ್ದು, ಕಾಲಕಳೆದಂತೆ ಕಣ್ಮರೆಯಾಗುವಂಥ ರೋಗವಲ್ಲ. ಈ ಸಮಸ್ಯೆಯನ್ನು ವಿಮರ್ಶಿಸಿ ನೋಡಿದಂತೆಲ್ಲ ನನಗೆ ಅನಿಸುತ್ತಿರುವುದು ಹೀಗೆ-ಮುಸಲ್ಮಾನರ ರಾಜಕೀಯ ಸ್ವಭಾವಕ್ಕೆ ಸಂಬಂಧಿಸಿರುವ ಈ ಗ್ರಂಥ, ಅಂದಿನಿಂದ ಅವರ ದೇಹದಲ್ಲಿ ಹುಟ್ಟಿ ಬೆಳೆದು, ಇಂದು ಅದೊಂದು ಅಂಗವೇ ಎಂಬಂತಾಗಿದೆ. ಹಿಂದು-ಮುಸಲ್ಮಾನರ ಪರಸ್ಪರ ಹೊಂದಾಣಿಕೆಗೆ ಸಂಬಂಧಿಸಿದಂತೆ ಇಂದು ನಾವು ತಳೆಯುವ ಅಭಿಪ್ರಾಯ ಅಥವಾ ನಿರ್ಣಯ ಉಳಿಯುವುದೋ, ಅಳಿಯುವುದೋ ಎಂಬುದನ್ನು ಕಾಲ ಹೇಳುತ್ತದೆ. ನನಗಂತು ಈ ನಿರ್ಣಯದಿಂದ ಆಘಾತವಾಗಿಲ್ಲ; ಇದರ ಬಗ್ಗೆ ನನಗೆ ರೋಷವೂ ಇಲ್ಲ, ಆಕ್ರೋಶವೂ ಇಲ್ಲ. ಬಣ್ಣದ ಮಾತುಗಳನ್ನಾಡಿ ಇದನ್ನು ನಿವಾರಿಸಿಕೊಳ್ಳಬಹುದೆಂದೂ ನನಗೆ ಅನ್ನಿಸುವುದಿಲ್ಲ” (ಮುನ್ನುಡಿ: ಪು.xxii)
“ಪಾಕಿಸ್ತಾನ ಸ್ವತಂತ್ರ ದೇಶವಾಯಿತೆಂದರೆ, ಅದರ ಮೇಲೆ ಈ ಸರ್ಕಾರದ(ಭಾರತ) ಅಂಕೆ ಇರುವುದಿಲ್ಲ. ಅಲ್ಲಿರುವ ಹಿಂದೂ ಅಲ್ಪಸಂಖ್ಯಾತರು ಯಾರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಬೇಕು? ಅಲ್ಲಿ ಹಿಂದುಗಳು ಮೇಲೆ ನಡೆಯುವ ಅಟ್ಟಹಾಸಗಳಿಗೂ, ಅಪರಾಧ-ಅತ್ಯಾಚಾರಗಳಿಗೂ ಯಾವ ತಡೆಯೂ ಇರುವುದಿಲ್ಲ. ಯಾವ ಮುಸಲ್ಮಾನ ಅಧಿಕಾರಿ ಇದನ್ನು ನಿಲ್ಲಿಸಲು ಮುಂದಾಗುತ್ತಾನೆ? ಅಂದರೆ, ಪಾಕಿಸ್ತಾನದಲ್ಲಿ ಹಿಂದುಗಳ ಸ್ಥಾನಮಾನ ಏನಾಗುತ್ತದೆ? ಹಿಂದುಗಳ ಸ್ಥಿತಿಯು ಟರ್ಕಿಯಲ್ಲಿರುವ ಅರ್ಮೇನಿಯನ್ನರಂತೆ, ರಷ್ಯದಲ್ಲಿರುವ ಜಾರಿಸ್ಟ್‌ ಅಥವಾ ಜರ್ಮನಿಯಲ್ಲಿರುವ ಜ್ಯೂಗಳಂತೆ ಆಗಬಹುದು. ಇದನ್ನು ಗಮನಿಸಿ. ಹಿಂದುಗಳು, ಇಂತಹ ದುಃಸ್ಥಿತಿಗೆ, ಮುಸ್ಲಿಮರ ದಬ್ಬಾಳಿಕೆಗೆ ನಮ್ಮ ಜನರನ್ನು ನೂಕುವುದು ಬೇಡ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ? ನೀವು ಭೌಗೋಳಿಕವಾಗಿ ಬೇರ್ಪಡಿಕೆ ಮಾಡಿದರೆ, ಅಲ್ಲಿ ಜನಾಂಗೀಯ ಐಕ್ಯತೆ ಇರುವುದಿಲ್ಲ. (They do not become single ethnic states)”. (ಪುಟ 26)
“ಹಿಂದು ಸಮಾಜದ ಸಾಮಾಜಿಕ ದೋಷಗಳು ಯಾವುವು ಎಂಬುದು ಎಲ್ಲರಿಗೂ ಪರಿಚಿತವಾದ ವಿಚಾರವೆ. ಕ್ಯಾಥರಿನ್ ಮೇಯೋ ಬರೆದ ‘Mother India’ ಪುಸ್ತಕ ಇದನ್ನು ಜಗಜ್ಜಾಹೀರು ಮಾಡಿದೆ. ಈ ಪುಸ್ತಕ ಹಿಂದು ನಾಯಕರನ್ನು, ಹಿಂದು ವಿದ್ವಾಂಸರನ್ನು ಮಿಸ್ ಮೇಯೋ ಟೀಕೆಗಳಿಗೆ ಉತ್ತರ ಕೊಡಲು ಪ್ರೇರಿಸಿತು. ಆದರೆ ಪ್ರಪಂಚದಾದ್ಯಂತ ಈ ವಿಚಾರವನ್ನು ಪ್ರಚುರ ಪಡಿಸಿದ ಮೇಯೋ ಮಹಾಶಯಳ ಈ ಪುಸ್ತಕ ಒಂದು ಎಡವಟ್ಟನ್ನೂ ಮಾಡಿದೆ. ಏನೆಂದರೆ, ಭಾರತದಲ್ಲಿ ಹಿಂದುಗಳು ಮಾತ್ರ ಸಾಮಾಜಿಕವಾಗಿ ಹಿಂದುಳಿದಿದ್ದಾರೆ, ನೈತಿಕವಾಗಿ ನೆಲಕಚ್ಚಿದ್ದಾರೆ. ಅವರೊಡನೆ; ಅದೇ ಭಾರತದಲ್ಲಿ ಬಾಳುತ್ತಿರುವ ಮುಸಲ್ಮಾನರಲ್ಲಿ ಇಂಥ ದೋಷಗಳೇನೂ ಇಲ್ಲ; ಅವರು ಬಹು ಮುಂದುವರಿದ ಜನಾಂಗ ಎಂಬಂತೆ ಪುಸ್ತಕದಲ್ಲಿ ಬಿಂಬಿಸಲಾಗಿದೆ. ಭಾರತದಲ್ಲಿ ಮುಸಲ್ಮಾನ ಸಮುದಾಯದ ರೀತಿ-ನೀತಿಗಳನ್ನು ಸಾಮಾಜಿಕ ಸಂಪ್ರದಾಯಗಳನ್ನೂ ಹತ್ತಿರದಿಂದ ನೋಡಿದವರಿಗೆ ಇದು ವಿಚಿತ್ರವಾಗಿ ಕಾಣುತ್ತದೆ. ಆಕೆಯ ಇಂಥ ಅಭಿಪ್ರಾಯ ತಪ್ಪು ಎಂದೆನಿಸದೆ ಇರುವುದಿಲ್ಲ. ಮೇಯೋ ಅನಿಸಿಕೆ ಏಕಪಕ್ಷೀಯವಾಗಿದೆ ಎಂಬುದಂತೂ ನಿಶ್ಚಯ”. (ಪುಟ 67).
ಅಂಬೇಡ್ಕರರು ಈ ರೀತಿಯಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅವರು ಅಂದು ಆಡಿದ ಮಾತುಗಳಲ್ಲಿ ಇಂದು ಎಷ್ಟು ಸತ್ಯವಾಗಿವೆ ಎನ್ನುವುದನ್ನು ನೋಡಿದರೆ ಅವರ ದೂರದೃಷ್ಟಿಯನ್ನು ಅಳೆಯಬಹುದಾಗಿದೆ. ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿರುವವರು ಆ ಸಮುದಾಯವನ್ನು ಎತ್ತ ಕಡೆಗೆ ಒಯ್ಯುತ್ತಾರೆ ಎನ್ನುವುದನ್ನು ಸಮರ್ಥವಾಗಿ ಅರಿತಿದ್ದ ಅಂಬೇಡ್ಕರರು ʼಜನಸಮುದಾಯಗಳ ವಿನಿಮಯʼ ಅಂದರೆ ಪಾಪ್ಯುಲೇಷನ್‌ ಎಕ್ಸ್‌ಚೇಂಜ್‌ ಎನ್ನುವ ಪರಿಹಾರವನ್ನು ಸೂಚಿಸಿದರು. ಹಿಂದುಗಳಿಗೆ ಹಿಂದುಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎಂದು ಆದ ಮೇಲೆ, ಪೂರ್ಣ ಮುಸ್ಲಿಮರು ಆ ಕಡೆಗೆ, ಪೂರ್ಣ ಹಿಂದುಗಳು ಈ ಕಡೆಗೆ ಇರಲಿ ಎಂದರು. ಆದರೆ ಅಂದು ಮುನ್ನೆಲೆಯಲ್ಲಿದ್ದ ಕಾಂಗ್ರೆಸ್‌ ನಾಯಕರು ಇದನ್ನು ಅರಿತುಕೊಳ್ಳಲಿಲ್ಲ. ಅಂದಿನ ಸಮಸ್ಯೆಗೆ ಅಂಬೇಡ್ಕರರು ಪರಿಹಾರ ಸೂಚಿಸಿದ್ದರು. ಆದರೆ ಇಂದು ಅದೇ ಪರಿಹಾರವನ್ನು ಅನ್ವಯ ಮಾಡುವ ಸ್ಥಿತಿ ಇಲ್ಲ, ಬಹುಶಃ ಪರಿಸ್ಥಿತಿಯೂ ಇಲ್ಲ. ಇಂದು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಲು ಆಗುತ್ತದೆಯೇ? ಅಥವಾ ಹಾಗೆ ಮಾಡುವುದು ಸರಿಯೇ? ಆದರೆ ಇಂದಿಗೂ ಮುಸ್ಲಿಂ ಹಾಗೂ ಹಿಂದುಗಳ ನಡುವೆ ಗೋಡೆಯನ್ನು ಹಾಗೆಯೇ ಉಳಿಸಲಾಗಿದೆಯಲ್ಲ? ಇಂದಿಗೂ ಕೋಮು ಸಂಘರ್ಷಗಳು ದೊಡ್ಡ ಮಟ್ಟದಲ್ಲಾಗಲಿ, ಶೀತಲ ಸಮರದಂತಾಗಲಿ ನಡೆಯುತ್ತಲೇ ಇರುತ್ತವಲ್ಲ? ಶತಮಾನದತ್ತ ಹೆಜ್ಜೆ ಇಟ್ಟಿರುವ ಭಾರತವು ಮುಂದಿನ ವರ್ಷಗಳಲ್ಲಾದರೂ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕಲ್ಲವೇ? ಶತಮಾನದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗದ ಭಾರತ, ವಿಶ್ವದ ಹೊಸ ಸಮಸ್ಯೆಗಳಿಗೆ ಪರಿಹಾರ ಹೇಗೆ ನೀಡಬಲ್ಲದು? ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಮೊದಲಿಗೆ ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ಸಮಸ್ಯೆಯ ಹಿಂದಿರುವವರ ಮಾನಸಿಕತೆಯನ್ನು ತಿಳಿಯಬೇಕು. ಈ ಪ್ರಕಾರ, ಮುಸ್ಲಿಂ ಸಮುದಾಯದ ಮಾನಸಿಕತೆಯನ್ನು ತಿಳಿಯಬೇಕೆನ್ನುವವರಿಗೆ ಡಾ. ಬಿ. ಆರ್‌. ಅಂಬೇಡ್ಕರ್‌ ಅವರ ಥಾಟ್ಸ್‌ ಆನ್‌ ಪಾಕಿಸ್ತಾನ್‌ ಅಥವಾ ಅದರ ಕನ್ನಡ ಭಾವಾನುವಾದ (ಡಾ. ಎಸ್‌.ಆರ್‌. ಲೀಲಾ) ಅತ್ಯಂತ ಪ್ರಯೋಜನಕಾರಿ ಎನ್ನುವುದು ಅನೇಕ ವಿದ್ವಾಂಸರ ವಾದ.
ಆದರೆ ಈ ಕೃತಿಯನ್ನು ಭಾರತದ ಬುದ್ಧಿಜೀವಿ ವರ್ಗ ಮುಟ್ಟುವುದೇ ಇಲ್ಲ. ಅಂಬೇಡ್ಕರರ ಯಾವ ವಿಚಾರ ಸಂಕಿರಣದಲ್ಲೂ ಈ ಕೃತಿಯನ್ನು ಪ್ರಸ್ತಾಪಿಸುವುದಿಲ್ಲ. ಈ ಕೃತಿಯನ್ನು ವ್ಯಾಪಕವಾಗಿ ವಿಮರ್ಶೆಗೆ ಒಡ್ಡುವುದು ಈಗಿನ ಕಾಲದ ಅವಶ್ಯಕತೆ. ಹಾಗೊಂದು ವೇಳೆ ವಿಚಾರವು ಈಗಿನ ಕಾಲದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎನ್ನುವುದಾದರೆ ಅದಕ್ಕಿಂತ ಉತ್ತಮ ಸಂಗತಿ ಬೇರೆಯದಿಲ್ಲ. ಹಾಗೊಂದು ವೇಳೆ ಅಂಬೇಡ್ಕರರ ಅನಿಸಿಕೆಗಳು ಆಗಿನ ಕಾಲಕ್ಕಷ್ಟೆ ಸೀಮಿತವಾದವು, ಈಗಿನ ಹಾಗೂ ಭವಿಷ್ಯದ ಭಾರತಕ್ಕೆ ಅವುಗಳ ಅವಶ್ಯಕತೆ ಇಲ್ಲ ಎನ್ನಿಸಿದರೆ ಪಕ್ಕಕ್ಕೆ ಇಡಬಹುದು. ಇಷ್ಟಾದರೂ ಪ್ರಾಮಾಣಿಕತೆಯನ್ನು ನಮ್ಮ ಬುದ್ಧಿಜೀವಿ, ಚಿಂತಕ ವಲಯ ತೋರಲೇಬೇಕು. ಇವೆರಡನ್ನೂ ಮಾಡದೆ ಅಂಬೇಡ್ಕರರ ಕುರಿತು ಅರ್ಧ ಸತ್ಯವನ್ನು ಮಾತ್ರ ಹೇಳುತ್ತ, ಇದೇ ನೋಡಿ ಅಂಬೇಡ್ಕರರ ಪೂರ್ಣ ರೂಪ ಎಂದು ಸುಳ್ಳು ಹೇಳುವುದನ್ನು ಈಗಲಾದರೂ ಬಿಡಬೇಕು. ಅಂಬೇಡ್ಕರರ ಉಳಿದರ್ಧ ಸತ್ಯವನ್ನೂ ತಿಳಿಯುವಂತಾಗಬೇಕು.
ಕಡೆ ಮಾತು; ಕರ್ನಾಟಕದಲ್ಲಿ ಮತ್ತೊಮ್ಮೆ ಬುರ್ಕಾ/ಹಿಜಾಬ್ ಕುರಿತ ಚರ್ಚೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಶುರು ಮಾಡಿದ್ದಾರೆ. ಎಂದಿನಂತೆ, ಬಟ್ಟೆ ಆಯ್ಕೆ ಸ್ವಾತಂತ್ರ್ಯದ ಹೆಸರಿನಲ್ಲಿ ಅಸಮಾನತೆಯ ಬಹುದೊಡ್ಡ ಸಂಕೇತವಾದ ಹಿಜಾಬನ್ನು ಬೆಂಬಲಿಸಿದ್ದಾರೆ. ಈ ವಿಷಯದಲ್ಲೂ ಸಿದ್ದರಾಮಯ್ಯ ಮತ್ತು ಅವರ ಆಸ್ಥಾನ ಪಂಡಿತರು, ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕಿದೆ. ತಮ್ಮ Thoughts on Pakistan ಕೃತಿಯಲ್ಲಿ ಅಂಬೇಡ್ಕರ್ ಬರೆಯುತ್ತಾರೆ; ಈ ಬುರ್ಕಾ ಎಂಬುದು ಮಾನವತ್ವಕ್ಕೆ ತೊಡಿಸಿದ ಅತಿ ಭಾರದ ಸರಪಳಿ. ಬುರ್ಖಾ ಪದ್ಧತಿಯಿಂದ ಮುಸ್ಲಿಮ್ ಮಹಿಳೆಯರು ಒಳಮನೆಗೆ ಸೀಮಿತರಾಗಿದ್ದಾರೆ. ಅವರು ಮೊಗಸಾಲೆ , ಅಂಗಳಕ್ಕೆ ಬರುವಂತಿಲ್ಲ . ಮುಸ್ಲಿಮ್ ಮಹಿಳೆ ಬುರ್ಖಾ ಧರಿಸಿ ರಸ್ತೆಯಲ್ಲಿ ಓಡಾಡುವುದನ್ನು ಭಾರತದಲ್ಲಿ ನೋಡುವುದೆಂದರೆ ಅದೊಂದು ಭೀಕರ ದೃಶ್ಯ !
ಅಂಬೇಡ್ಕರ್ ಅವರನ್ನು ಪೂರ್ಣ ಅರಿಯದವರು ಮಾತ್ರ, ಭೀಕರ ದೃಶ್ಯಗಳನ್ನು ನೋಡಲು ಬಯಸುತ್ತಾರೆ !
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top